ಮಂಗಳವಾರ, ಆಗಸ್ಟ್ 3, 2021
26 °C
ಕೆಪಿಸಿಸಿಗೆ ‘ಒಮ್ಮತ’ದಿಂದ ಪದಾಧಿಕಾರಿಗಳ ನೇಮಕ – ವರಿಷ್ಠರ ತಂತ್ರ

ದೆಹಲಿಗೆ ಬರುವಂತೆ ಡಿಕೆಶಿ, ಸಿದ್ದರಾಮಯ್ಯಗೆ ಕಾಂಗ್ರೆಸ್ ವರಿಷ್ಠರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ, ಪಕ್ಷ ಸಂಘಟನೆ, ಬಲವರ್ಧನೆಗೆ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಹೈಕಮಾಂಡ್ ಆಹ್ವಾನದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ.

‘ಭಾವಿ ಮುಖ್ಯಮಂತ್ರಿ’ ಹೇಳಿಕೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಭಿನ್ನ ಧ್ವನಿ, ಬಣ ರಾಜಕೀಯ, ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕ ವಿಚಾರದಲ್ಲೂ ಮುಂದುವರಿಯಬಾರದೆಂಬ ಮುನ್ನೆಚ್ಚರಿಕೆಯಾಗಿ ಇಬ್ಬರು ನಾಯಕರ ಮಧ್ಯೆ ಒಮ್ಮತ ಮೂಡಿಸಲು ವರಿಷ್ಠರು ಮುಂದಾಗಿದ್ದಾರೆ . ಈ ಉದ್ದೇಶದಿಂದ ಇಬ್ಬರ ಸಮ್ಮುಖದಲ್ಲಿ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದೂ ಗೊತ್ತಾಗಿದೆ.

ಪಕ್ಷದ ವರಿಷ್ಠರಾದ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಪ್ರಿಯಾಂಕಾ ಗಾಂಧಿ ಜತೆ ಈ  ಇಬ್ಬರು ನಾಯಕರು ಮಾತುಕತೆ ನಡೆಸಲಿದ್ದಾರೆ. ಪದಾಧಿಕಾರಿಗಳ ಆಯ್ಕೆಯ ಜತೆಗೆ, ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ, ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಈಗಿನಿಂದಲೇ ಸಜ್ಜುಗೊಳಿಸಲು ಸಂಘಟನಾತ್ಮಕವಾಗಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ದೆಹಲಿಗೆ ಹೋಗಿದ್ದ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷ ಮತ್ತು ರಾಜ್ಯ ರಾಜಕೀಯದಲ್ಲಿನ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದರು. ಇದೇ ವೇಳೆ, ಕೆಪಿಸಿಸಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಬೇಕಾದ ತುರ್ತಿನ ಬಗ್ಗೆಯೂ ವರಿಷ್ಠರಿಗೆ ಮನವರಿಕೆ ಮಾಡಿದ್ದ ಡಿ.ಕೆ. ಶಿವಕುಮಾರ್‌, ಸಂಭಾವ್ಯ ಪದಾಧಿಕಾರಿಗಳ ಪಟ್ಟಿಯೊಂ
ದನ್ನು ನೀಡಿದ್ದರು. ಅದರ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಬಗ್ಗೆ ಹೇಳಿಕೆ ನೀಡದಂತೆ ರಣದೀಪ್‌ ಸಿಂಗ್‌ ಸುರ್ಜೇವಾಲಾ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿದ್ದರು.

ಆ ಬಳಿಕ, ಪರಿಶಿಷ್ಟ ಮುಖ್ಯಮಂತ್ರಿ ವಿಚಾರವೂ ಮುನ್ನೆಲೆಗೆ ಬಂದಿತ್ತು. ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ ಬಳಿಕ ಕೆಲವು ದಿನಗಳ ಮಟ್ಟಿಗೆ ಎಲ್ಲರೂ ಮೌನವಾಗಿದ್ದರು.

ಆದರೆ, ಕಳೆದೊಂದು ವಾರದಿಂದ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಿವಾಸಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ. ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕದ ಬಗ್ಗೆಯೇ ಚರ್ಚೆಗಳು ಕೇಂದ್ರೀಕೃತವಾಗಿದ್ದವು ಎಂದೂ ಪಕ್ಷದ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು