ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ಹಣದಲ್ಲಿ ನೀಚ ರಾಜಕಾರಣ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

Last Updated 8 ಅಕ್ಟೋಬರ್ 2022, 11:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯು ಭ್ರಷ್ಟಾಚಾರದ ಹಣವನ್ನು ಬಳಸಿಕೊಂಡು ಸುಳ್ಳು ಮಾಹಿತಿಯುಳ್ಳ ಜಾಹೀರಾತುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತಹ ನೀಚ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಶಾಸಕ ಎನ್.ಎ. ಹ್ಯಾರೀಸ್ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೊಪಾದಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ಕೀಳುಮಟ್ಟದ ರಾಜಕೀಯಕ್ಕೆ ಕೈಹಾಕಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.‌ದೇವರಾಜ ಅರಸು, ಎಸ್. ಬಂಗಾರಪ್ಪ ಮತ್ತು ವೀರೇಂದ್ರ ಪಾಟೀಲ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಸುಳ್ಳು ಜಾಹೀರಾತು ನೀಡಿರುವುದು ನೀಚ ರಾಜಕಾರಣದ ಭಾಗ' ಎಂದರು.

ಅರಸು, ಬಂಗಾರಪ್ಪ ಮತ್ತು ವೀರೇಂದ್ರ ಪಾಟೀಲ ಅವರು ರಾಜ್ಯದ ದೊಡ್ಡ ನಾಯಕರು.‌ ಹಿಂದುಳಿದ ವರ್ಗಗಳು ಮತ್ತು ಶೋಷಿತ ಸಮುದಾಯಗಳ ಏಳ್ಗೆಗೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿರುವ ಈ ನಾಯಕರ ಹೆಸರುಗಳನ್ನು ಬಳಸುವ ನೈತಿಕತೆ ಬಿಜೆಪಿಗೆ ಇದೆಯೆ ಎಂದು ಪ್ರಶ್ನಿಸಿದರು.

ಮೂವರು ನಾಯಕರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿತ್ತು ಎಂಬ ಅರ್ಥದಲ್ಲಿ ಜಾಹೀರಾತು ನೀಡಲಾಗಿದೆ. ಈ ಎಲ್ಲ ನಾಯಕರು ಸಾಂದರ್ಭಿಕವಾಗಿ ತಮ್ಮ ಶಕ್ತಿಯ ಅನುಸಾರ ತೀರ್ಮಾನ ಕೈಗೊಂಡಿದ್ದರು. ಬಂಗಾರಪ್ಪ ಅವರು ಬಿಜೆಪಿಗೂ ಹೋಗಿದ್ದರು. ಆ ಕಾರಣದಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆಯಿತು. ಈ ಸತ್ಯವನ್ನು ಏಕೆ ಹೇಳುತ್ತಿಲ್ಲ ಎಂದು ಕೇಳಿದರು.

ಬೇರೆ ಪಕ್ಷದ ಬಗ್ಗೆ ಕಾಳಜಿ ತೋರುವ ಬಿಜೆಪಿಯವರಿಗೆ ತಮ್ಮದೇ ನಾಯಕರನ್ನು ಮೂಲೆಗುಂಪು ಮಾಡಿರುವ ಕುರಿತು ಏಕೆ ನೆನಪಾಗುತ್ತಿಲ್ಲ? ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾದ ಎಲ್.ಕೆ. ಅಡ್ವಾಣಿ ಎಲ್ಲಿದ್ದಾರೆ? ಮುರಳಿ ಮನೋಹರ ಜೋಶಿಯವರ ಸ್ಥಿತಿ ಏನಾಗಿದೆ? ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಬಿ.ಬಿ.ಶಿವಪ್ಪ ಅವರ ಸ್ಥಿತಿ ಏನಾಗಿತ್ತು? ಎಂಬುದರ ಕುರಿತೂ ಜಾಹೀರಾತು ನೀಡಲಿ ಎಂದರು.

'ನಮ್ಮ ತಂದೆಯವರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ನಾನು ಆಡಿದ್ದ ಮಾತುಗಳನ್ನು ಬಿಜೆಪಿ ತನ್ನ ಜಾಹೀರಾತಿನಲ್ಲಿ ದುರ್ಬಳಕೆ ಮಾಡಿಕೊಂಡಿದೆ. ಆಗ ನಾನು ಜೆಡಿಎಸ್ ಶಾಸಕನಾಗಿದ್ದೆ. ಸಿಬಿಐ ತನಿಖೆ ಕುರಿತ ಚರ್ಚೆಯ ಮಾತನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುವುದು ನಾಚಿಕೆಗೇಡಿನ ಸಂಗತಿ' ಎಂದು ಮಧು ಹೇಳಿದರು.

ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಜನರ ವಿರೋಧ ಎದುರಿಸುತ್ತಿರುವ ಬಿಜೆಪಿ ಈಗ ಕೀಳು ಮಟ್ಟದ ರಾಜಕಾರಣದ ಆರಂಭಿಸಿದೆ. ಅದನ್ನು ತ್ಯಜಿಸಿ, ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಿ ಎಂದರು.

ಹ್ಯಾರೀಸ್ ಮಾತನಾಡಿ, 'ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ ಎಂಬುದಕ್ಕೆ ಬಿಜೆಪಿ ನೀಡುತ್ತಿರುವ ಸುಳ್ಳು ಜಾಹೀರಾತುಗಳೇ ಸಾಕ್ಷಿ.‌ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ಇಂತಹ ನೀಚ ರಾಜಕಾರಣದ ಮೂಲಕ ರಾಹುಲ್ ಅವರನ್ನು ಎದುರಿಸಲು ಹೊರಟಿದೆ' ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT