ಭಾನುವಾರ, ಮಾರ್ಚ್ 26, 2023
24 °C
ದಿನವೂ 14,500 ರೇಕ್ ಕಲ್ಲಿದ್ದಲು ಪೂರೈಕೆ

ವಿದ್ಯುತ್‌ ಕ್ಷಾಮ ಕುರಿತು ಕಾಂಗ್ರೆಸ್‌ ಅಪಪ್ರಚಾರ: ಇಂಧನ ಸಚಿವ ವಿ.ಸುನಿಲ್‌ ಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ, ವಿದ್ಯುತ್‌ ಕ್ಷಾಮವಿದೆ ಎಂದು ಕಾಂಗ್ರೆಸ್‌ ಪಕ್ಷ ಅಪಪ್ರಚಾರ ಮಾಡುತ್ತಿದ್ದು, ಜನರ ದಾರಿ ತಪ್ಪಿಸಲು ಷಡ್ಯಂತ್ರ ನಡೆಸಿದೆ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ದೂರಿದ್ದಾರೆ.

ಕಲ್ಲಿದ್ದಲು ದಾಸ್ತಾನಿಗೆ ಸರ್ಕಾರ ಆದ್ಯತೆ ನೀಡಿದ್ದು, ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ವಿದ್ಯುತ್‌ ಈಗ ಸೌರ ಮತ್ತು ಪವನಶಕ್ತಿಯ ಮೂಲದಿಂದ ಪಡೆಯಲಾಗುತ್ತಿದೆ. ಆದ್ದರಿಂದ ವಿದ್ಯುತ್‌ ಕ್ಷಾಮ ಎಂಬ ಕಾಂಗ್ರೆಸ್‌ ಕಟ್ಟುಕತೆಯಲ್ಲಿ ಅರ್ಥವೇ ಇಲ್ಲ ಎಂದು ಹೇಳಿದ್ದಾರೆ.

ಕೇಂದ್ರದಿಂದ ಪ್ರತಿ ದಿನ ಸರಾಸರಿ 13,500 ರಿಂದ 14,500 ರೇಕ್‌ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಎಲ್ಲ ವಿದ್ಯುತ್‌ ಸ್ಥಾವರಗಳ ಬೇಡಿಕೆಗೆ ಅಗತ್ಯವಾದ ಕಲ್ಲಿದ್ದಲು ಇದರಿಂದ ಲಭಿಸುತ್ತಿದೆ. ಬುಧವಾರ ರಾಜ್ಯದಲ್ಲಿ 10,400 ಮೆ.ವ್ಯಾ ವಿದ್ಯುತ್‌ ಬೇಡಿಕೆ ಇತ್ತು. ಮಾರ್ಚ್‌ನಲ್ಲಿ 14,500 ಮೆ.ವ್ಯಾ ಬೇಡಿಕೆ ಇತ್ತು. ಆಗಲೂ ಕಲ್ಲಿದಲು ಕೊರತೆ ಆಗಿರಲಿಲ್ಲ ಎಂದರು.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಇದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯವಾದ ವಿದ್ಯುತ್‌ ಬೇಡಿಕೆ ಪ್ರಮಾಣ ಕುಗ್ಗಿದೆ. ಈ ಕಾರಣಕ್ಕೆ ಬಳ್ಳಾರಿ ಮತ್ತು ರಾಯಚೂರು ಶಾಖೋತ್ಪನ್ನ ಘಟಕದಲ್ಲಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕಲ್ಲಿದ್ದಲಿನ ಕೊರತೆಯ ಕಾರಣಕ್ಕಾಗಿ ಅಲ್ಲ ಎಂದೂ ಸುನಿಲ್ ಹೇಳಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ (2004 ರಿಂದ 2014)725 ಲಕ್ಷ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಪೂರೈಕೆ ಆಗಿದ್ದರೆ, 2015 ರಿಂದ 2022 ರ ಅವಧಿಯಲ್ಲಿ 792 ಲಕ್ಷ ಮೆಟ್ರಿಕ್‌ ಟನ್‌ ಪೂರೈಕೆ ಆಗಿತ್ತು. ಅಧಿಕಾರದ ಅಭಾವ ವೈರಾಗ್ಯದಿಂದ ರೋಸಿ ಹೋಗಿರುವ ಕಾಂಗ್ರೆಸ್‌ ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂಬ ಪ್ರಹಸನ ಸೃಷ್ಟಿಸಿದರೆ ಜನರು ಶಾಕ್‌ ಟ್ರೀಟ್‌ಮೆಂಟ್‌ ನೀಡುತ್ತಾರೆ. ಸಿದ್ದರಾಮಯ್ಯ ಕಾಲದ ‘ಕತ್ತಲೆ ಭಾಗ್ಯ’ದ ದುರ್ದಿನಗಳನ್ನು ಸಾರ್ವಜನಿಕರು ಮರೆತಿಲ್ಲ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು