ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದಲ್ಲೇ ಕಲಾಪ ಅಂತ್ಯ; ಒಂದು ರಾಷ್ಟ್ರ 1 ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ

Last Updated 5 ಮಾರ್ಚ್ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ರಾಷ್ಟ್ರ– ಒಂದು ಚುನಾವಣೆ’ ವಿಶೇಷ ಚರ್ಚೆ ವಿರೋಧಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ಎರಡನೇ ದಿನವೂ ಧರಣಿ, ಗದ್ದಲ ಮುಂದುವರಿಸಿದ್ದರಿಂದಾಗಿ ಚರ್ಚೆ ನಡೆಯದೇ ಕಲಾಪ ಮುಂದೂಡಿಕೆಯಾಯಿತು.

‘ಈ ಚರ್ಚೆ ಕರ್ನಾಟಕದಿಂದಲೇ ಆರಂಭವಾಗಲಿ, ಪರ– ವಿರೋಧ ಇದ್ದವರು ತಮ್ಮ ಅಭಿಪ್ರಾಯ ಮುಕ್ತವಾಗಿ ಹೇಳಬಹುದು. ಇಡೀ ದೇಶಕ್ಕೆ ಒಂದು ಸಂದೇಶ ಹೋಗಬೇಕು. ಆದ್ದರಿಂದ ಚರ್ಚೆಯಲ್ಲಿ ಭಾಗವಹಿಸಿ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಳಿಕೊಂಡರೂ, ಕಾಂಗ್ರೆಸ್‌ ಸದಸ್ಯರು ಧರಣಿ ಬಿಟ್ಟು ಕದಲಲ್ಲಿಲ್ಲ. ಗದ್ದಲ, ಕೂಗಾಟ ತಾರಕಕ್ಕೇರಿದಾಗ ಎರಡು ಬಾರಿ ಕಲಾಪ ಮುಂದೂಡಿದರು.

ಚರ್ಚೆಯ ಬಗ್ಗೆ ಸಭಾಧ್ಯಕ್ಷ ಕಾಗೇರಿ ಪ್ರಸ್ತಾಪಿಸಿದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕ ಸಂಗಮೇಶ್ವರ ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಪಟ್ಟು ಹಿಡಿದರು.

‘ಈ ಚರ್ಚೆ ಆರ್‌ಎಸ್‌ಎಸ್‌ ಅಜೆಂಡಾ ಆಗಿರುವುದರಿಂದ ಇದರಲ್ಲಿ ಭಾಗವಹಿಸುವುದಿಲ್ಲ. ಕಲಾಪ ನಡೆಯಲೂ ಬಿಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ ಸದಸ್ಯರು ‘ಸರ್ಕಾರ ಮತ್ತು ಸ್ಪೀಕರ್‌ ಅವರು ಆರ್‌ಎಸ್‌ಎಸ್‌ ಕೈಗೊಂಬೆ’ ಎಂದು ಘೋಷಣೆ ಕೂಗಿದರು. ಇನ್ನೂ ಜೋರಾಗಿ ಕೂಗಿ ಎಂದು ಸಿದ್ದರಾಮಯ್ಯ ತಮ್ಮ ಸದಸ್ಯರನ್ನು ಹುರಿದುಂಬಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಆರ್‌ಎಸ್‌ಎಸ್‌ಗೆ ಜೈ ಎಂದು ಘೋಷಣೆ ಕೂಗಿದರು.

ಆಗ ಮಧ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್‌ಗೆ ಇಂತಹ ಉಪಯುಕ್ತ ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ಇಲ್ಲ. ಅವರಿಗೆ ಪ್ರಜಾಪ್ರಭುತ್ವ ಬಲಪಡಿಸುವ ಉದ್ದೇಶವೂ ಇಲ್ಲ. ಇದು ಸರಿಯಾದ ನಡವಳಿಕೆ ಅಲ್ಲ ’ ಎಂದರು.

‘ನಿಮಗೆ ಚರ್ಚೆಯಲ್ಲಿ ಭಾಗವಹಿಸಲು ಇಚ್ಚೆ ಇಲ್ಲದಿದ್ದರೆ, ಇತರ ಸದಸ್ಯರು ಮಾತನಾಡಲು ಅಡ್ಡಿ ಮಾಡಿ ಅವರ ಹಕ್ಕು ಮೊಟಕು ಮಾಡುವುದು ಸರಿಯಲ್ಲ. ಇದು ಪ್ರಜಾತಂತ್ರದ ಲಕ್ಷಣವೂ ಅಲ್ಲ. ಸಂಗಮೇಶ್ವರ ಅವರ ಬೇಜವಾಬ್ದಾರಿ ವರ್ತನೆಖಂಡಿಸದೇ ಅಮಾನತ್ತು ಹಿಂದಕ್ಕೆ ಪಡೆಯಿರಿ ಎಂದು ವಿಷಯಾಂತರ ಮಾಡುವುದೂ ಸರಿಯಲ್ಲ. ಸದನಕ್ಕೆ ಘನತೆ, ಗೌರವವಿದೆ. ಪ್ರಜಾಪ್ರಭುತ್ವದ ದೇಗುಲದಲ್ಲಿ ಅದರ ಪಾವಿತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ’ ಎಂದು ಕಾಗೇರಿ ಹೇಳಿದರು.

ಈ ಮಧ್ಯೆ ಸಭಾಧ್ಯಕ್ಷರು ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಪಿ.ರಾಜೀವ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಆದರೆ, ಕಾಂಗ್ರೆಸ್‌ ಸದಸ್ಯರ ಗದ್ದಲದಲ್ಲಿ ತಮ್ಮ ವಾದವನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಗದ್ದಲವೇ ತುಂಬಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಜೆಡಿಎಸ್‌ ಸದಸ್ಯರು ಧರಣಿಯಲ್ಲಿ ಭಾಗವಹಿಸಲಿಲ್ಲ.

‘ಇನ್ನೊಮ್ಮೆ ವಿಶೇಷ ಚರ್ಚೆಗೆ ಅವಕಾಶ’:‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಷಯ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮತ್ತೊಮ್ಮೆ ಕಾಂಗ್ರೆಸ್‌ ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸುತ್ತೇನೆ. ಅವರ ಮನವೊಲಿಸಿದ ಬಳಿಕ ಚರ್ಚೆಗೆ ದಿನಾಂಕ ನಿಗದಿ ಮಾಡುತ್ತೇನೆ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಸಂಸತ್ತಿನಲ್ಲಿ ಎಂಬುದು ಗೊತ್ತಿದೆ. ಆದರೆ, ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದೂ ಅಷ್ಟೇ ಮುಖ್ಯ ಎಂಬ ಕಾರಣಕ್ಕೆ ಚರ್ಚೆ ನಡೆಸಲು ತೀರ್ಮಾನಿಸಲಾಗಿತ್ತು’ ಎಂದರು.

‘ಇದು(ಚರ್ಚೆ) ಏಕಾಏಕಿಯಾಗಿ ಕೈಗೊಂಡ ನಿರ್ಧಾರವಲ್ಲ. ಕಳೆದ ಎರಡು ಮೂರು ಅಧಿವೇಶನಗಳ ವೇಳೆಯೂ ಆಡಳಿತ ಮತ್ತು ವಿರೋಧ ಪಕ್ಷಗಳ ಜತೆ ಚರ್ಚೆ ನಡೆಸಲಾಗಿತ್ತು. ಮೊನ್ನೆ ರಾತ್ರಿಯವರೆಗೂ ಕಾಂಗ್ರೆಸ್ ಸದಸ್ಯರೂ ಒಪ್ಪಿಕೊಂಡಿದ್ದರು. ಅದಕ್ಕಾಗಿ ತಯಾರಿಯನ್ನೂ ನಡೆಸಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಏನಾಯಿತೋ ಗೊತ್ತಿಲ್ಲ. ಇದು ಶಾಸಕಾಂಗ ಪಕ್ಷದ ತೀರ್ಮಾನ ಏನೂ ಮಾಡಲು ಆಗಲ್ಲ ಎಂದು ಕೆಲವು ಕಾಂಗ್ರೆಸ್‌ ನಾಯಕರು ನನ್ನ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು’ ಎಂದೂ ಕಾಗೇರಿ ಹೇಳಿದರು.

‘ವಿಶೇಷ ಚರ್ಚೆಯಲ್ಲಿ ಮಾತನಾಡಲು ಕಾಂಗ್ರೆಸ್‌ನಿಂದ 19, ಬಿಜೆಪಿಯ 15 ಮತ್ತು ಜೆಡಿಎಸ್‌ 13 ಶಾಸಕರು ಹೆಸರು ಕೊಟ್ಟಿದ್ದರು. ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ನವರು ಭಾಗವಹಿಸದೇ ಕಲಾಪಕ್ಕೆ ಅಡ್ಡಿ ಮಾಡಿದ್ದು, ಬೇಸರವಾಯಿತು. ವಿರೋಧಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ಬೇರೆ ಸದಸ್ಯರು ಮಾತನಾಡಲು ಅವಕಾಶ ನೀಡದೇ ಇರುವುದು ಪ್ರಜಾತಂತ್ರದ ನಡವಳಿಕೆಯಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT