ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಮೋರ್ಚಾ ಕಟ್ಟಲು ಅಮಿತ್ ಶಾ ಪ್ರೇರಣೆಯೇ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

Last Updated 14 ಜನವರಿ 2023, 13:21 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿಯ ನಾಯಕರು ಹಾಗೂ ರಾಜ್ಯ ರಾಜಕಾರಣದ ಕುರಿತು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯೋಗೇಶ್ವರ್‌ ಅವರು ಮುಂಬರುವ ವಿಧಾನಸಭೆ ಚುನಾವಣೆ ಕುರಿತಂತೆ ಮಾತನಾಡುತ್ತಾ, 'ಹೊಂದಾಣಿಕೆ ರಾಜಕಾರಣ ಬೇಡ, ಅದು ತಾಯಿಗೆ ದ್ರೋಹ ಮಾಡಿದ ಹಾಗೇ ಎಂದು ಅಮಿತ್ ಶಾ ಈಗಾಗಲೇ ನಮ್ಮನ್ನು ಎಚ್ಚರಿಸಿದ್ದಾರೆ. ಅವರದ್ದು ಒಂಥರ ರೌಡಿಸಂ. ಆ ವ್ಯಕ್ತಿ ಮೇಲ್ನೋಟಕ್ಕೆ ಇರುವುದೇ ಬೇರೆ. ಮಾತನಾಡುವುದೇ ಬೇರೆ. ಬೇರೆ ಯಾವ ಪಕ್ಷದವರ ಜೊತೆ ಒಪ್ಪಂದ ಮಾಡಿಕೊಂಡಿದ್ದು ಕಂಡುಬಂದರೆ ಅವರು ಬಿಡುವುದಿಲ್ಲ' ಎಂದಿದ್ದಾರೆ ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿ ಇರುವ ಧ್ವನಿ ನನ್ನದ್ದಲ್ಲ ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಆಡಿಯೊ ಉಲ್ಲೇಖಿಸಿ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡಿ ಟೀಕಾ ಪ್ರಹಾರ ನಡೆಸಿದೆ.

ಪ್ರೀತಿಯ ಬಿಜೆಪಿಯವರೇ, 'ಅಮಿತ್ ಶಾ ರೌಡಿ ಇದ್ದಂಗೆ' ಎಂಬ ನಿಮ್ಮದೇ ಪಕ್ಷದವರ ಮಾತನ್ನು ಒಪ್ಪುವಿರಾ? ಅಮಿತ್ ಶಾ ಪ್ರೇರಣೆಯಿಂದಲೇ ಜೈಲಲ್ಲಿರಬೇಕಾದ ರೌಡಿಗಳನ್ನು ಕರೆದು ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ? ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿರುವ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಯೋಗೇಶ್ವರ್‌ ಹೇಳಿಕೆಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ? ಎಂದು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬರಲ್ಲ' ಎಂದು ಸಿ.ಪಿ ಯೋಗೀಶ್ವರ್ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಆಡಳಿತದ ಮೇಲೆ ಜನರಿಗಷ್ಟೇ ಅಲ್ಲ, ಸ್ವತಃ ನಿಮ್ಮದೇ ಪಕ್ಷದ ಶಾಸಕರಿಗೇ ನಂಬಿಕೆ ಕಳೆದುಹೋಗಿದ್ದು ಶೋಚನೀಯವಲ್ಲವೇ? ಮ್ಯಾನೇಜ್ಮೆಂಟ್ ಸರ್ಕಾರ ನಡೆಸುತ್ತಿರುವ ಬಿಜೆಪಿ ಸೋಲುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ! ಎಂದು ವಾಗ್ದಾಳಿ ನಡೆಸಿದೆ.

ಬೊಮ್ಮಾಯಿ ಅವರ ಕುರಿತಂತೆ #PuppetCM ಟ್ಯಾಗ್‌ ಬಳಸಿ ಛೇಡಿಸಿರುವ ಕಾಂಗ್ರೆಸ್‌, 'ಬಿಜೆಪಿ ಸೋಲುವುದು ಖಚಿತ. ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ' –ಇದು ಬಿಜೆಪಿಯ ಎಂಎಲ್‌ಸಿ ಯೋಗೀಶ್ವರ್ ಹೇಳಿರುವ ಮಾತು. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಘನಂದಾರಿ ಆಡಳಿತಕ್ಕೆ ಬೇರೆ ಇನ್ಯಾವ ಪ್ರಮಾಣಪತ್ರ ಬೇಕು? ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿಹೋದ ಹಡುಗು! ಬಿಜೆಪಿಗರಿಗೆ ಇದು ಸ್ಪಷ್ಟವಾಗಿದೆ ಎಂದು ತಿವಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT