ಶನಿವಾರ, ಜುಲೈ 24, 2021
20 °C
ಪ್ಯಾಕೇಜ್‌ ಲಾಭದ ಮಾಹಿತಿ ಸಂಗ್ರಹ; ಡಿ.ಕೆ. ಶಿವಕುಮಾರ್

ಕೋವಿಡ್‌ ಸಾವು: ಕಾಂಗ್ರೆಸ್‌ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ನಿಖರ ಸಂಖ್ಯೆಯನ್ನು ಸರ್ಕಾರ ಮುಚ್ಚಿಟ್ಟಿದೆ. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಸಂಗ್ರಹಿಸಿ, ಅಂಕಿ–ಸಂಖ್ಯೆ ಬಹಿರಂಗಪಡಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರನ್ನು ಮಂಗಳವಾರ ಭೇಟಿ ಮಾಡಿ ಬಂದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್‌ನಿಂದ ಸಾವಿಗೀಡಾದವರ ಬಗ್ಗೆ ರಾಜ್ಯ ಸರ್ಕಾರ ಒದಗಿಸಿರುವ ಅಂಕಿ–ಸಂಖ್ಯೆಯಲ್ಲೇ ವ್ಯತ್ಯಾಸವಿದೆ. ಕಾರ್ಯಕರ್ತರ ಸಮೀಕ್ಷೆಯ ಬಳಿಕವಷ್ಟೇ ಈ ಕುರಿತಾದ ಅನುಮಾನ ಬಗೆಹರಿಯಲಿದೆ ಎಂದರು.

ಲಾಕ್‌ಡೌನ್‌ ವೇಳೆ ಬಡಜನರಿಗೆ ನೆರವು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿರುವ ಪ್ಯಾಕೇಜ್‌ನಿಂದ ಯಾರಿಗೆ ಉಪಯೋಗವಾಗಿದೆ, ಯಾರಿಗೆ ಲಾಭವಾಗಿದೆ ಎಂಬ ಕುರಿತೂ ಮಾಹಿತಿ ಸಂಗ್ರಹಿಸಲಾಗುವುದು. ಪಕ್ಷದ ಕಾರ್ಯಕರ್ತರು ವಿಶೇಷವಾಗಿ ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ ಎಂದು ವಿವರ ನೀಡಿದರು.

ಪಕ್ಷದ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಬದಲಾವಣೆ ಕುರಿತು ಚರ್ಚಿಸಲಾಗಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ಹೇಳಿಕೆ ನೀಡುತ್ತಿರುವ ಶಾಸಕರನ್ನು ಹತೋಟಿಯಲ್ಲಿ ಇಡುವುದು ವರಿಷ್ಠರಿಗೆ ಗೊತ್ತಿದೆ. ಮುಖ್ಯಮಂತ್ರಿ ಯಾರು ಆಗಬೇಕು ಎಂಬುದನ್ನು ಶಾಸಕಾಂಗ ಪಕ್ಷದ ಮುಖಂಡರೇ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

ರಾಹುಲ್‌ ಭೇಟಿ ಮಾಡಿದ ಡಿಕೆಶಿ:
ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್‌, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾಗಿ ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಕುರಿತು ಪಕ್ಷದ ಶಾಸಕರು ಹೇಳಿಕೆ ನೀಡುತ್ತಿರುವ ಬಗ್ಗೆ ರಾಹುಲ್ ಜೊತೆ ಚರ್ಚಿಸಲಾಗಿದೆಯಾ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು