ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕ್ ಕಾಣೆಯಾಗಿದ್ದಾರೆ ಪೋಸ್ಟರ್: ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ

Last Updated 8 ನವೆಂಬರ್ 2022, 6:44 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರಗಿ ಜಿಲ್ಲೆ): ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಪಟ್ಟಣದ ಹಲವಡೆ ಪೋಸ್ಟರ್ ಅಂಟಿಸಿದ್ದಕ್ಕೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಮುಂಜಾನೆ ಲಾಡ್ಜಿಂಗ್ ಕ್ರಾಸಿನಲ್ಲಿ ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಈ ವ್ಯಕ್ತಿಯನ್ನು ಚಿತ್ತಾಪುರದಲ್ಲಿ ಯಾರಾದರೂ ನೋಡಿದ್ದೀರಾ? ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಈ ವ್ಯಕ್ತಿ ಎಲ್ಲಾದರೂ ಕಂಡು ಬಂದರೆ ಚಿತ್ತಾಪುರಕ್ಕೆ ಭೇಟಿ ನೀಡುವಂತೆ ತಿಳಿಸಿ ಎಂದು ಬಿಜೆಪಿ ಮುಖಂಡ ಅರವಿಂದ ಚವಾಣ್ ಪೋಸ್ಟರ್ ಅಂಟಿಸಿದ್ದೇ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಕಾರಣವಾಗಿದೆ.

ಸಮಾಜದಲ್ಲಿ ಅಶಾಂತಿ ಮೂಡಿಸಲು ಸಂಚು ನಡೆಸಿರುವ ಅರವಿಂದ ಚವಾಣ್ ವಿರುದ್ಧ ಪ್ರಕರಣ ದಾಖಲಿಸಬೇಕು. ಶಾಸಕ ಪ್ರಿಯಾಂಕ್ ಅವರ ಕುರಿತು ಬಹಳ ಹಗುರವಾಗಿ ನಡೆದುಕೊಂಡಿರುವ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಸ್ತೆ ತಡೆದು ಆಕ್ರೋಶ ವ್ಯಕ್ತ ಮಾಡಿದರು.

ಸಮಾಜದ ಶಾಂತಿಗೆ ಭಂಗ ತರುವ ಉದ್ದೇಶದಿಂದ ಅರವಿಂದ ಚವಾಣ್ಹೀಗೆ ಮಾಡಿದ್ದಾರೆ. ಸಾಮಾಜಿಕ ಅಶಾಂತಿ ಉಂಟು ಮಾಡಲು ಕ್ಷುಲ್ಲಕ ರಾಜಕಿಯ ಮಾಡಿ ಶಾಸಕರ ಕುರಿತು ಹೀಗೆ ಪೋಸ್ಟರ್ ಅಂಟಿಸಿದ್ದಾರೆ. ಅವರನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಕೆಲ ಸಮಯದವರೆಗೆ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಸುದ್ದಿ ತಿಳಿದ ಸಿಪಿಐ ಪ್ರಕಾಶ ಯಾತನೂರು ಅವರು, ಪೋಸ್ಟರ್ ಅಂಟಿಸಿದವರ ವಿರುದ್ದ ಸಾಮಾಜಿಕ ಅಶಾಂತಿಗೆ ಭಂಗವುಂಟು ಮಾಡಲೆತ್ನಿಸಿರುವ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಭರವಸೆ ನೀಡಿದಾಗ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಂಜಯ ಬೂಳಕರ್, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಎಂ.ಎ. ರಷೀದ್, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ನಾಗಯ್ಯ ಗುತ್ತೇದಾರ್, ಜಫರುಲ್ ಹಸನ್, ಸಾಬಣ್ಣ ಕಾಶಿ, ಬಾಬು ಕಾಶಿ, ಜಗದೀಶ ಚವಾಣ್, ದೇವಿಂದ್ರ ಅರಣಕಲ್, ಲಕ್ಷ್ಮಿಕಾಂತ ಸಾಲಿ, ಮಲ್ಲಿಕಾರ್ಜುನ ಎಸ್. ಮುಡಬೂಳಕರ್, ರವಿಸಾಗರ ಹೊಸಮನಿ, ಶಿವರಾಜ, ಶರಣು ಇದ್ದರು.

ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಅಂಟಿಸಲಾಗಿರುವ ಪೋಸ್ಟರ್‌
ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಅಂಟಿಸಲಾಗಿರುವ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT