ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಗೌರವ ಮೂರಾಬಟ್ಟೆಗೆ ಸಂಚು: ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ

Last Updated 17 ಮಾರ್ಚ್ 2023, 22:49 IST
ಅಕ್ಷರ ಗಾತ್ರ

ಹಾಸನ: ‘ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಸಚಿವ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ‘ಉರಿಗೌಡ- ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಆ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸಕಲೇಶಪುರ ತಾಲ್ಲೂಕಿನ ಶುಕ್ರವಾರಸಂತೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಈ ಸಮಾಜಕ್ಕೆ ಕಳಂಕ ಬರುವ ರೀತಿಯಲ್ಲಿ ಈಗಾಗಲೇ ವಾತಾವರಣ ಸೃಷ್ಟಿ ಮಾಡಿದ್ದಾರೆ. ಸಚಿವ ಮುನಿರತ್ನ ಸರ್ವನಾಶ ಆಗ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅವರ ಸಿನಿಮಾಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಥೆ ಬರೆಯುತ್ತಾರಾ? ಟಿಪ್ಪು ನೆಪದಲ್ಲಿ, ಜನ್ಮತಳೆದ ಜಾತಿ ವಿರುದ್ಧವೇ ವಿಷ ಕಕ್ಕುತ್ತಿದ್ದಾರೆ. ಈ ಮುನಿರತ್ನಗೂ, ಮಂಡ್ಯದ ಒಕ್ಕಲಿಗರಿಗೂ ಸಂಬಂಧವೇನು? ಒಕ್ಕಲಿಗ ಕುಲದಲ್ಲೇ ಹುಟ್ಟಿ ಒಕ್ಕಲು ಸಂಕುಲಕ್ಕೆ ಟಿಪ್ಪು ಕೊಲೆಯ ಕೊಳೆ ಮೆತ್ತಿಸಲು ಹೊರಟಿರುವ ಒಕ್ಕಲು ಕುಲದ ಡಾ.ಅಶ್ವತ್ಥ್‌ನಾರಾಯಣ ಹಾಗೂ ಮುನಿರತ್ನರಂತಹ ಖಳನಾಯಕರನ್ನು ಒಕ್ಕಲಿಗರು ಎಂದಿಗೂ ಕ್ಷಮಿಸುವುದಿಲ್ಲ’ ಎಂದರು.

‘ಬಿಜೆಪಿಯವರು ಯಾರನ್ನು ಬೇಕಾದರೂ ಹೀರೊ ಮಾಡುತ್ತಾರೆ. ಸಮಾಜದಲ್ಲಿ ರಾವಣನಂಥವರನ್ನು ರಾಮನನ್ನಾಗಿ ಮಾಡುವುದರಲ್ಲಿ ಅವರು ನಿಸ್ಸೀಮರು. ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಸುವ ಕೀಳು ರಾಜಕೀಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉರಿಗೌಡ– ನಂಜೇಗೌಡ ಎಂದರೆ ಬೆಲೆ ಏರಿಕೆ’
ಮೈಸೂರು: ‘ಉರಿಗೌಡ ಎಂದರೆ ಪೆಟ್ರೋಲ್ ಬೆಲೆ ಏರಿಕೆ. ನಂಜೇಗೌಡ ಎಂದರೆ ಡೀಸೆಲ್ ಬೆಲೆ ಏರಿಕೆ. ಉರಿಗೌಡ–ನಂಜೇಗೌಡ ಎಂದರೆ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ. ಈ ಇಬ್ಬರೂ ಕೊಂದಿದ್ದು ಈ ದೇಶದ ಜನರನ್ನು. ಇದು ಸರಳ ಹಾಗೂ ವಿರಳವಾದ ಇತಿಹಾಸ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. ಉರಿಗೌಡ–ನಂಜೇಗೌಡ ಎಂಬ ಪಾತ್ರಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರಿಗೆ ತಿರುಗೇಟು ನೀಡಿದ್ದಾರೆ.

ಉರಿಗೌಡ, ನಂಜೇಗೌಡ ಇತಿಹಾಸ ಮರುಪರಿಶೀಲನೆ
ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ‘ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ಉರಿಗೌಡ ಹಾಗೂ ನಂಜೇಗೌಡ ಅವರದು ನೈಜ ಇತಿಹಾಸವೇ ಅಥವಾ ಕಾಲ್ಪನಿಕವೇ ಎಂಬುದನ್ನು ಮರುಪರಿಶೀಲನೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತಿಹಾಸದ ಆಧಾರದ ಮೇರೆಗೆ ಬಿಜೆಪಿ ನಿಲುವು ತಳೆದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಅನುಮಾನಗಳಿಲ್ಲ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅನುಮಾನಗಳು ಇರುವಂತೆ ಕಾಣುತ್ತಿದೆ. ಮತ್ತೊಮ್ಮೆ ಪರಿಶೀಲಿಸಿ ಅನುಮಾನ ಬಗೆಹರಿಸಿಕೊಳ್ಳೋಣ. ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘ಇತಿಹಾಸ ಹಾಗೂ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾವುದೇ ಜಾತಿಯನ್ನು ಅವಹೇಳನ ಮಾಡುವ ಉದ್ದೇಶ ಬಿಜೆಪಿಯದ್ದಲ್ಲ. ನಾನೂ ಒಕ್ಕಲಿಗ ಸಮುದಾಯದಿಂದ ಬಂದಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಜಾತಿ ರಾಜಕೀಯ ಮಾಡುವುದನ್ನು ಜೆಡಿಎಸ್ ಬಿಡಬೇಕು’ ಎಂದು ಹೇಳಿದರು.

‘ಹೆದ್ದಾರಿ ನಿರ್ಮಾಣ ಹಾಗೂ ಟೋಲ್ ನಿರ್ಧಾರವನ್ನು ಕೇಂದ್ರದ ಹೆದ್ದಾರಿ ಪ್ರಾಧಿಕಾರ ತೆಗದುಕೊಳ್ಳುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗಿದೆ. ಇದರಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ ಪ್ರಶ್ನೆ ಮಾಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ನ್ಯಾಯಾಲಯದ ಮೆಟ್ಟಿಲು ಏರಲು ಎಲ್ಲರಿಗೂ ಅವಕಾಶ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಾವಣಿ ಪತ್ತೆ?
ಮಂಡ್ಯ: ‘ಟಿಪ್ಪು ಸುಲ್ತಾನ್‌ನನ್ನು ಉರಿಗೌಡ ಹಾಗೂ ದೊಡ್ಡನಂಜೇಗೌಡ ಎಂಬುವವರು ಕೊಂದರೆಂಬುದಕ್ಕೆ ಸಾಕ್ಷಿ’ ಎನ್ನಲಾದ ಲಾವಣಿಯನ್ನು ನಗರಸಭೆ ನಾಮನಿರ್ದೇಶಿತ ಸದಸ್ಯ ಕ್ರಾಂತಿ ಮಂಜು ಲಾವಣಿ ಹಾಡಿ ಚರ್ಚೆ ಹುಟ್ಟುಹಾಕಿದ್ದಾರೆ.

‘ಸಂಶೋಧಕ ಹ.ಕ.ರಾಜೇಗೌಡರು ತಮ್ಮ ಲೇಖನವೊಂದರಲ್ಲಿ ಲಾವಣಿಯನ್ನು ಪ್ರಸ್ತಾಪಿಸಿದ್ದು, ಟಿಪ್ಪುವನ್ನು ಉರಿಗೌಡ, ದೊಡ್ಡನಂಜೇಗೌಡರೇ ಕೊಂದಿದ್ದಾರೆಂಬುದನ್ನು ಪುಷ್ಟೀಕರಿಸುವ ದಾಖಲೆಗಳು ಸಿಕ್ಕಿವೆ’ ಎಂದು ಮಂಜು ತಮ್ಮ ವಿಡಿಯೊದಲ್ಲಿ ತಿಳಿಸಿದ್ದಾರೆ.

‘ಹೇಳುತ್ತೇವೆ ಹೇಳುತ್ತೇವೆ ಗೌಡರ ಕತೆಯ ಹೇಳುತ್ತೇವೆ, ಶೌರ್ಯದ ಕತೆಯ ಹೇಳುತ್ತೇವೆ, ವೀರರ ಕತೆಯ ಹೇಳುತ್ತೇವೆ, ನಾಡದ್ರೋಹಿಯನ್ನು ಕೊಂದ ಗೌಡರ ಕತೆಯ ಹೇಳುತ್ತೇವೆ’ ಎಂದು ಲಾವಣಿ ಆರಂಭವಾಗುತ್ತದೆ. ‘ಕ್ಯಾತನಹಳ್ಳಿ ಉರಿಗೌಡ, ಹನುಮ್ನಳ್ಳಿ ದೊಡ್ಡ ನಂಜೇಗೌಡ ಸೇರಿದಂತೆ ಹತ್ತಾರು ಗೌಡರು ಸುಲ್ತಾನನ್ನು ಅಟ್ಟಾಡಿಸಿಕೊಂಡು ಕೊಂದರು. ಮೈಸೂರು ರಾಣಿ ಲಕ್ಷ್ಮಮ್ಮಣ್ಣಿಗೆ ಮತ್ತೆ ರಾಜ್ಯ ತಂದು ಕೊಟ್ಟರು’ ಎಂದು ಪ್ರಸ್ತಾಪವಾಗುತ್ತದೆ.

‘2015ರಲ್ಲಿ ಪ್ರಜ್ಞಾಭಾರತ ಬ್ಲಾಗ್‌ನಲ್ಲಿ ಪ್ರಕಟವಾಗಿದ್ದ ನನ್ನ ಲೇಖನವನ್ನು ಕೆಲವರು ಹೈಜಾಕ್‌ ಮಾಡಿದರು. ನಾನು ಬಿಜೆಪಿ ಕಾರ್ಯಕರ್ತನಾದರೂ ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಹುಡುಕಾಟ ಮುಂದುವರಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಮುನಿರತ್ನ ಅವರಿಂದ ಉರೀಗೌಡ, ನಂಜೇಗೌಡ ಸಿನಿಮಾ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿರುವ ‘ಉರೀಗೌಡ– ನಂಜೇಗೌಡ’ ಹೆಸರುಗಳನ್ನು ಸಚಿವ ಮುನಿರತ್ನ ಸಿನಿಮಾ ಶೀರ್ಷಿಕೆಯಾಗಿ ನೋಂದಾಯಿಸಿದ್ದಾರೆ.

ತಮ್ಮ ಸಿನಿಮಾ ಸಂಸ್ಥೆ ವೃಷಭಾದ್ರಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಈ ಶೀರ್ಷಿಕೆಯನ್ನು ನೋಂದಾಯಿಸಿರುವ ಅವರು, ಉರೀಗೌಡ–ನಂಜೇಗೌಡ ಅಥವಾ ನಂಜೇಗೌಡ–ಉರೀಗೌಡ ಹೆಸರುಗಳಲ್ಲಿ ಯಾವುದನ್ನಾದರೂ ಇರಿಸುವ ಆಯ್ಕೆಯನ್ನು ಮುಕ್ತವಾಗಿ ಇಟ್ಟುಕೊಂಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಈ ಹೆಸರುಗಳು ಹೆಚ್ಚು ಸದ್ದುಮಾಡಿವೆ ಹಾಗೂ ವಿವಾದ ಸೃಷ್ಟಿಸಿವೆ. ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಟಿಪ್ಪು ಸುಲ್ತಾನ್‌ಗೆ ಉರೀಗೌಡ –ನಂಜೇಗೌಡರು ಬುದ್ಧಿ ಕಲಿಸಿದ ರೀತಿಯಲ್ಲೇ ಮತದಾರರು ಸಿದ್ದರಾಮಯ್ಯ ಅವರ ವಿಷಯವಾಗಿ ನಡೆದುಕೊಳ್ಳಬೇಕು ಎಂದು ಕಟು ಶಬ್ದಗಳಲ್ಲಿ ಹೇಳಿದ್ದರು.

ಅಶ್ವತ್ಥನಾರಾಯಣ ಅವರ ಮಾತು ತೀವ್ರ ವಿವಾದ ಪಡೆಯಿತು. ಮುಂದೆ ಟಿಪ್ಪು ಸುಲ್ತಾನ್‌ನನ್ನು ಸಾಯಿಸಿದ್ದು ಉರಿಗೌಡ ನಂಜೇಗೌಡರು ಎಂದು ಬಿಜೆಪಿ ಪ್ರತಿಪಾದಿಸುತ್ತಾ ಬಂದಿತು. ಇತ್ತ ಕಾಂಗ್ರೆಸ್‌– ಜೆಡಿಎಸ್‌ ಈ ಮಾತನ್ನು ತೀವ್ರವಾಗಿ ವಿರೋಧಿಸಿದವು. ಈ ವಿವಾದಕ್ಕೆ ತುಪ್ಪ ಸುರಿಯುವಂತೆ ಇತ್ತೀಚೆಗೆ ಬೆಂಗಳೂರು –ಮೈಸೂರು 6 ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ದಿನದಂದು ಮಂಡ್ಯದ ಫ್ಯಾಕ್ಟರಿ ವೃತ್ತದ ಬಳಿ ಉರಿಗೌಡ ಮತ್ತು ದೊಡ್ಡನಂಜೇಗೌಡ ಹೆಸರಿನ ಮಹಾದ್ವಾರವನ್ನು ನಿರ್ಮಿಸಲಾಗಿತ್ತು. ಆದರೆ, ವಿವಾದ ಆಗುತ್ತಿದ್ದಂತೆಯೇ ಅದನ್ನು ತೆರವುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT