ಶನಿವಾರ, ಆಗಸ್ಟ್ 13, 2022
26 °C

ಫ್ಲು ಲಸಿಕೆ ಮರೆಯದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು. ಅದರಲ್ಲೂ ಹೃದಯದ ರಕ್ತನಾಳ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ಸೋಂಕು ಹೆಚ್ಚಿನ ರೀತಿಯಲ್ಲಿ ಕಾಡುತ್ತವೆ. ಈ ಸಂದರ್ಭದಲ್ಲಿ ಶ್ವಾಸಕೋಶದ ಸೋಂಕು ದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ. ಪ್ರತಿ ವರ್ಷ ಜಗತ್ತಿನಲ್ಲಿ 3.5 ದಶಲಕ್ಷ ಮಂದಿಯನ್ನು ಇನ್‌ಫ್ಲುಯೆಂಜ ಜ್ವರ ಬಾಧಿಸುತ್ತದೆ. ಪ್ರತಿ ವರ್ಷ ಅಂದಾಜು 99 ಸಾವಿರದಿಂದ 2 ಲಕ್ಷ ಮಂದಿ ಇದರಿಂದ ಸಾವಿಗೀಡಾಗುತ್ತಾರೆ.

ಈ ಕೋವಿಡ್‌–19 ಸಂದರ್ಭದಲ್ಲೇ ಫ್ಲುದಿಂದಾಗಿ ಆರೋಗ್ಯ ವಲಯದ ಮೇಲೆ ಇನ್ನೊಂದಿಷ್ಟು ಹೊರೆ ಬೀಳುತ್ತಿದೆ. ನೆಗಡಿ, ಕೆಮ್ಮು, ಜ್ವರ, ಹಸಿವಿಲ್ಲದಿರುವುದು ಮೊದಲಾದ ಲಕ್ಷಣಗಳು ಫ್ಲು ಮತ್ತು ಕೋವಿಡ್‌ ಎರಡರಲ್ಲೂ ಕಾಣಿಸಿಕೊಳ್ಳುತ್ತವೆ. ಇದರಿಂದ ಫ್ಲು ಯಾವುದು, ಕೋವಿಡ್‌ ಯಾವುದು ಎಂಬುದನ್ನು ಪತ್ತೆ ಹಚ್ಚುವುದು ಮೇಲ್ನೋಟಕ್ಕೆ ಕಷ್ಟವೇ. ಈಗಂತೂ ಚಳಿಗಾಲದ ಜೊತೆ ಪರಿಸರ ಮಾಲಿನ್ಯ ಜಾಸ್ತಿಯಾಗುತ್ತಿದ್ದು, ಪರಿಸ್ಥಿತಿ ಇನ್ನಷ್ಟು ಆತಂಕ ಮೂಡಿಸಿದೆ ಎನ್ನುತ್ತಾರೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಪಲ್ಮೊನೊಲಜಿ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಮೈಸೂರು.

ಸಮಶೀತೋಷ್ಣ ವಲಯದಲ್ಲಿ ಬರುವ ಭಾರತದಲ್ಲಿ ಈ ಫ್ಲು ವರ್ಷವಿಡೀ ಬಾಧಿಸಿದರೂ ಒಣ ಹವೆಯಿಂದಾಗಿ ಹಾಗೂ ಮಾಲಿನ್ಯದಿಂದಾಗಿ ಚಳಿಗಾಲದಲ್ಲಿ ಜಾಸ್ತಿ. ಆದರೆ ಈ ಫ್ಲುಗೆ ಲಸಿಕೆ ಹಾಕಿಸಿಕೊಂಡರೆ ದೂರ ಇಡಬಹುದು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಗರ್ಭಿಣಿಯರು, ಮಕ್ಕಳಿಗೆ, ಅದರಲ್ಲೂ 6 ತಿಂಗಳಿನ ಶಿಶುವಿನಿಂದ ಹಿಡಿದು 5 ವರ್ಷ ವಯಸ್ಸಿನ ಮಕ್ಕಳವರೆಗೆ, ವೃದ್ಧರಿಗೆ, ಮಧುಮೇಹ, ಹೃದ್ರೋಗ ಇರುವವರಿಗೆ ಲಸಿಕೆಗೆ ಆದ್ಯತೆ ನೀಡಿದೆ.

ಕೋವಿಡ್‌–19ನಿಂದ ಉದ್ಭವಿಸುವ ಗಂಭೀರವಾದ ಸಮಸ್ಯೆಗೆ ಕೂಡ ಇನ್‌ಫ್ಲುಯೆಂಜ ಲಸಿಕೆ ಒಳ್ಳೆಯದು. ಈ ಲಸಿಕೆಯಿಂದ ಫ್ಲು ತಗಲುವ ಸಾಧ್ಯತೆ ಶೇ 0.9 ಮಾತ್ರ.

ಒಂಬತ್ತು ವರ್ಷಕ್ಕಿಂತ ಚಿಕ್ಕ ಮಕ್ಕಳು ಈ ಹಿಂದೆ ಫ್ಲು ಲಸಿಕೆ ತೆಗೆದುಕೊಂಡಿರದಿದ್ದರೆ ಈ ವರ್ಷ ಒಟ್ಟು ಎರಡು ಸಲ ಲಸಿಕೆ ತೆಗೆದುಕೊಳ್ಳಬೇಕು. ಒಂದು ಲಸಿಕೆಯಿಂದ ಇನ್ನೊಂದಕ್ಕೆ ನಾಲ್ಕು ವಾರಗಳ ಅಂತರವಿರಬೇಕು. ಈ ಹಿಂದೆ ಒಂದು ಸಲ ಸಲ ತೆಗೆದುಕೊಂಡವರೂ ಕೂಡ ಈ ವರ್ಷ ಎರಡು ಬಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಪ್ರತಿ ಬಾರಿಯೂ ಫ್ಲು ವೈರಸ್‌ ವಿಭಿನ್ನ ರೀತಿಯಲ್ಲಿರುವುದರಿಂದ ಕಳೆದ ಬಾರಿ ತೆಗೆದುಕೊಂಡ ಲಸಿಕೆಯ ಮಾದರಿ ಈ ಬಾರಿ ಪ್ರಯೋಜನಕ್ಕೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.