ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: ಕೋವಿಡ್ ಸೋಂಕು ದೃಢ ಪ್ರಮಾಣ ಮತ್ತಷ್ಟು ಇಳಿಕೆ

Last Updated 27 ಮೇ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 24 ಗಂಟೆಗಳ ಅವಧಿಯಲ್ಲಿ 24,214 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 25 ಲಕ್ಷದ ಗಡಿ (25.23 ಲಕ್ಷ) ದಾಟಿದೆ.

ಈ ತಿಂಗಳು ಕೆಲ ದಿನಗಳು ಶೇ 30ರ ಗಡಿಯ ಆಸುಪಾಸಿನಲ್ಲಿಯೇ ಇದ್ದ ಸೋಂಕು ದೃಢ ಪ್ರಮಾಣ ಈಗ ಶೇ 17.59ಕ್ಕೆ ಇಳಿಕೆಯಾಗಿದೆ. ಕೊರೊನಾ ಸೋಂಕಿತರಲ್ಲಿ ಬೆಂಗಳೂರಿನಲ್ಲಿ 273 ಮಂದಿ ಸೇರಿದಂತೆ ರಾಜ್ಯದಲ್ಲಿ 476 ಮಂದಿ ಸಾವಿಗೀಡಾಗಿರುವುದು ಗುರುವಾರ ದೃಢಪಟ್ಟಿದೆ. ಮರಣ ಪ್ರಮಾಣ ದರ ಶೇ 1.96ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಒಟ್ಟು ಸಂಖ್ಯೆ 27,405ಕ್ಕೆ ಏರಿಕೆಯಾಗಿದೆ.

ಒಂದು ದಿನದ ಅವಧಿಯಲ್ಲಿ 1.37 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 4.02 ಲಕ್ಷ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ 31,459 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 20.94 ಲಕ್ಷ ದಾಟಿದೆ.

9 ಜಿಲ್ಲೆಗಳಲ್ಲಿ 10ಕ್ಕೂ ಅಧಿಕ ಮರಣ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಬಳ್ಳಾರಿಯಲ್ಲಿ 22 ಮಂದಿ, ಮೈಸೂರಿನಲ್ಲಿ 18 ಮಂದಿ, ಬೆಳಗಾವಿ ಹಾಗೂ ಧಾರವಾಡದಲ್ಲಿ ತಲಾ 15 ಮಂದಿ, ತುಮಕೂರಿನಲ್ಲಿ 14 ಮಂದಿ, ಉತ್ತರ ಕನ್ನಡದಲ್ಲಿ 13 ಮಂದಿ, ಚಿಕ್ಕಬಳ್ಳಾಪುರದಲ್ಲಿ 11 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ ಗೊಂಡಿದ್ದು, 24 ಗಂಟೆಗಳ ಅವಧಿಯಲ್ಲಿ 5,949 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಮೈಸೂರು (2,240), ಹಾಸನ (1,505), ತುಮಕೂರು (1,219), ಬೆಳಗಾವಿ (1,147) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ. ಬೀದರ್ (60), ಕಲಬುರ್ಗಿ (153), ಹಾವೇರಿ (159) ಸೇರಿದಂತೆ 12 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500ಕ್ಕಿಂತ ಕಡಿಮೆ ವರದಿಯಾಗಿವೆ.

ಲಸಿಕೆ: ಮತ್ತಷ್ಟು ಸಿಬ್ಬಂದಿ ಸೇರ್ಪಡೆ
ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿ 18ರಿಂದ 44 ವರ್ಷದೊಳಗಿನ ಕೊರೊನಾ ಮುಂಚೂಣಿ ಕಾರ್ಯಕರ್ತರ ಗುಂಪಿಗೆ ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಸೇರಿಸಲಾಗಿದೆ.

ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಒಂದು ವಾರದ ಹಿಂದೆ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 18ರಿಂದ 44 ವರ್ಷದವರೆಗಿನ ಕೊರೊನಾ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪುಗಳನ್ನು ಗುರುತಿಸಲಾಗಿತ್ತು. ಅವರಿಗೆ ಮೇ22ರಿಂದ ಲಸಿಕೆ ವಿತರಣೆ ಪ್ರಾರಂಭಿಸಲಾಗಿದೆ. ಈಗ ಆ ಸಾಲಿಗೆ ಮತ್ತಷ್ಟು ಗುಂಪುಗಳನ್ನು ಸೇರ್ಪಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ, ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿ, ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿ, ದೀರ್ಘಾವಧಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಸಿಬ್ಬಂದಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಹಾಗೂ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಿಬ್ಬಂದಿ ಹೊಸದಾಗಿ ಮುಂಚೂಣಿ ಕಾರ್ಯಕರ್ತರ ಗುಂಪಿಗೆ ಸೇರ್ಪಡೆಯಾಗಿದ್ದಾರೆ.

ಆದ್ಯತೆ ಗುಂಪಿಗೆ ವಿಮೆ ಸಿಬ್ಬಂದಿಯನ್ನು ಸೇರ್ಪಡೆಮಾಡಲಾಗಿದೆ. ಒಟ್ಟು 29 ವಿಭಾಗದಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಅದೇ ರೀತಿ, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಪೆಟ್ರೋಲ್ ಬಂಕ್ ಕೆಲಸಗಾರರು ಸೇರಿದಂತೆ 19 ವಿಭಾಗಗಳಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಆದ್ಯತಾ ಗುಂಪಿನಲ್ಲಿ ಗುರುತಿಸಲಾಗಿದೆ.

ಉಳಿದಂತೆ ಜಿಲ್ಲಾವಾರು ಕೋವಿಡ್ ಅಂಕಿ ಅಂಶ ಇಂತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT