ಗುರುವಾರ , ಅಕ್ಟೋಬರ್ 22, 2020
28 °C
ಪರೀಕ್ಷಾರಹಿತ ವರ್ಷವಾಗಿ ಘೋಷಿಸಿ

ಪ್ರಾಥಮಿಕ ಶಾಲೆ ಮೊದಲು ಆರಂಭಿಸಲು ಮಕ್ಕಳ ಹಕ್ಕುಗಳ ಆಯೋಗ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘2020–21ನ್ನು ಪರೀಕ್ಷಾರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು. 30ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ, ಹಿರಿಯ ಶಾಲೆಗಳನ್ನು ಮೊದಲು ಆರಂಭಿಸಬೇಕು. ಈ ಶಾಲೆಗಳು ಮೊದಲ 15 ದಿನ ಅರ್ಧ ದಿನ ಕಾರ್ಯನಿರ್ವಹಿಸಬೇಕು’ ಎಂದು ಮಕ್ಕಳ ಹಕ್ಕುಗಳ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಶಾಲೆ ಪುನರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಆಯೋಗ, ‘ಮಕ್ಕಳಿಗಾಗಿ ಶಾಲೆಗಳನ್ನು ತೆರೆಯುವ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಮಕ್ಕಳು ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಣೆಗೆ ಒಳಪಡುವ ಸಾಧ್ಯತೆಗಳಿವೆ’ ಎಂದೂ ಆಯೋಗ ಆತಂಕ ವ್ಯಕ್ತಪಡಿಸಿದೆ.

‘ಲಭ್ಯ ಸಂಶೋಧನೆಯ ಪ್ರಕಾರ, ಶಾಲೆಗಳನ್ನು ತೆರೆಯುವುದು ಸಮಸ್ಯೆ ಅಲ್ಲ. ಯಾಕೆಂದರೆ, ವಯಸ್ಸಾದವರಿಗೆ ಮತ್ತು ಬೇರೆ ಕಾಯಿಲೆಯ ಇತಿಹಾಸ ಇರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಈ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದೂ ಆಯೋಗ ಅಭಿಪ್ರಾಯಪಟ್ಟಿದೆ.

‘ಕಿರಿಯ ಪ್ರಾಥಮಿಕ ಶಾಲೆಗಳನ್ನು ಶೀಘ್ರ ಆರಂಭಿಸಬೇಕು. ಉಳಿದಂತೆ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಆರಂಭಿಸಬೇಕು. ಶಾಲೆ ತೆರೆದ ನಂತರ ಸಿಗುವ ಕಲಿಕೆ ಮತ್ತು ಅನುಭವಕ್ಕೆ ತಕ್ಕಂತೆ ಮಾರ್ಗಸೂಚಿ ರೂಪಿಸಿಕೊಳ್ಳಬಹುದು’ ಎಂದೂ ಆಯೋಗ ಸಲಹೆ ನೀಡಿದೆ.

‘ಎಲ್ಲ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ 11 ವರ್ಷ ದಾಟಿದ ಮಕ್ಕಳಿಗೆ ಕಡ್ಡಾಯವಾಗಿ ಗುಣಮಟ್ಟದ ಮಾಸ್ಕ್‌ ಒದಗಿಸಬೇಕು. ಆಹಾರದ ಜೊತೆಗೆ ಮಕ್ಕಳಿಗೆ ರೋಗನಿರೋಧಕ ಮಾತ್ರೆ ನೀಡಬೇಕು. ಶಿಕ್ಷಕರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಬೇಕು. ಪಾಠ ಮಾಡುವ ಸಂದರ್ಭದಲ್ಲಿ ವ್ಯಕ್ತಿಗತ ಅಂತರ ಕಾಪಾಡಬೇಕು. ಅಡುಗೆ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ಅವರಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಾರ್ಗದರ್ಶನ ನೀಡಬೇಕು’ ಎಂದೂ ಆಯೋಗ ಶಿಫಾರಸು ಮಾಡಿದೆ.

‘ಆದರೆ, ಶಾಲೆಗಳನ್ನು ಆರಂಭಿಸುವ ಮೊದಲು ಪೋಷಕರು ಮತ್ತು ಎಸ್‌ಡಿಎಂಸಿ ಜೊತೆ ‍ಪೂರ್ವಭಾವಿ ಸಭೆ ನಡೆಸಬೇಕು. ಎಸ್‌ಡಿಎಂಸಿ ಮತ್ತು ಗ್ರಾಮ ಪಂಚಾಯಿತಿ ನೆರವಿನಲ್ಲಿ ಶಾಲೆಗಳನ್ನು ಸ್ವಚ್ಛಗೊಳಿಸಬೇಕು. ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು’ ಎಂದೂ ಆಯೋಗ ವಿವರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು