ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ: ಸಿದ್ದರಾಮಯ್ಯ

ಸರ್ಕಾರಕ್ಕೆ ತಗುಲಿದ ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಎಲ್ಲಿಂದ ತರುವುದು? ಸಿದ್ಧರಾಮಯ್ಯ
Last Updated 19 ಮಾರ್ಚ್ 2021, 5:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾವೈರಸ್‌ಗೆ ಲಸಿಕೆ ಬಂದಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ತಗುಲಿರುವ ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಎಲ್ಲಿಂದ ತರುವುದು ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಕೋವಿಡ್-19 ಉಲ್ಬಣಗೊಳ್ಳುತ್ತಿದ್ದು, ಕೊರೊನಾ ನಿಯಂತ್ರಣದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕೊರೊನಾ ನಿಯಂತ್ರಣದ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನಮ್ಮ ಆರೋಪಕ್ಕೆ ಸಾಕ್ಷಿ ಹೇಳುವಂತಿದೆ ಮತ್ತೆ ಅವತರಿಸಿ ಕೇಕೆ ಹಾಕುತ್ತಿರುವ ಕೊರೊನಾ ವೈರಸ್. ಮುಖ್ಯಮಂತ್ರಿಯವರೇ, ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ್ದರೆ ಮತ್ತೆ ಯಾಕೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದೆ?' ಎಂದು ಪ್ರಶ್ನಿಸಿದ್ದಾರೆ.

'ಕೊರೊನಾ ನಿಯಂತ್ರಣಕ್ಕಾಗಿ ಸಂಪನ್ಮೂಲ ವ್ಯಯಮಾಡಬೇಕಾಗಿದೆ ಎಂಬ ಕುಂಟುನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನಗಳನ್ನು ಕಡಿತಗೊಳಿಸಿದ ಬಿ.ಎಸ್. ಯಡಿಯೂರಪ್ಪ ಅವರು ಈಗ ಏನು ಹೇಳುತ್ತಾರೆ? ಅಷ್ಟೊಂದು ಆದ್ಯತೆ ನೀಡಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರಬೇಕಿತ್ತಲ್ಲಾ? ಯಾಕೆ ನಿಯಂತ್ರಣ ತಪ್ಪಿದೆ?' ಎಂದು ಕೇಳಿದರು.

ಕೊರೊನಾ ನಿರ್ವಹಣೆಗಾಗಿ ರೂ.5,372 ಕೋಟಿ ಖರ್ಚು ಮಾಡಲಾಗಿದೆ ಎಂದುಇತ್ತೀಚೆಗೆ ಮಂಡಿಸಿದ್ದ ಬಜೆಟ್ ನಲ್ಲಿ ಹೇಳಿರುವ ಯಡಿಯೂರಪ್ಪ, ಮಾಡಿರುವ ಖರ್ಚಿನ ವಿವರ ಮಾತ್ರ ತಿಳಿಸಿಲ್ಲ. ಈಗಲಾದರೂ ಆ ಹಣ ಯಾವ ಉದ್ದೇಶಗಳಿಗೆ ಖರ್ಚು ಮಾಡಿದ್ದೀರಿ ಎಂಬ ಲೆಕ್ಕದ ವಿವರವನ್ನು ಜನರ ಮುಂದಿಡಬೇಕು ಎಂದುಒತ್ತಾಯಿಸಿದ್ದಾರೆ.

ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು? ಕೊರೊನಾ ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ-ದೋಷವನ್ನು ಎರಡನೇ ಅಲೆಯಲ್ಲಿಯಾದರೂ ತಿದ್ದಿಕೊಂಡು, ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ ಎಂದು ಸಿದ್ದರಾಮಯ್ಯಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT