ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ವರದಿ: ಪೊಲೀಸ್ ಠಾಣೆ ‘ಮಾಮೂಲಿ’ ವ್ಯವಸ್ಥೆ; ಜನ ಹೈರಾಣ

ಹೆಸರಿಗಷ್ಟೇ ‘ಜನಸ್ನೇಹಿ’, ಒಳಗೆ ಕಾಲಿಟ್ಟರೆ ‘ಧನದಾಹಿ’ l ಲಂಚ ಪ್ರಶ್ನಿಸಿದರೆ ಕರ್ತವ್ಯಕ್ಕೆ ಅಡ್ಡಿ ಪ್ರಕರಣದ ಎಚ್ಚರಿಕೆ
Last Updated 6 ಮಾರ್ಚ್ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಸ್ನೇಹಿ ಪೊಲೀಸ್’ ವ್ಯವಸ್ಥೆ ಜಾರಿಗೆ ತರಬೇಕಾದ ಹಲವು ಠಾಣೆಗಳು, ಇತ್ತೀಚಿನ ದಿನಗಳಲ್ಲಿ ‘ಹಣ ಹಾಗೂ ರಾಜಕಾರಣಿ ಸ್ನೇಹಿ’ ಆಗಿ ಮಾರ್ಪಡುತ್ತಿರುವ ಆರೋಪಗಳು ಹೆಚ್ಚಾಗಿವೆ. ಜೇಬು ಖಾಲಿ ಇರಿಸಿಕೊಂಡು ಕೈಯಲ್ಲೊಂದು ದೂರಿನ ಪ್ರತಿ ಹಿಡಿದು ಬರುವ ಜನ, ಠಾಣೆಯೊಳಗೆ ಕಾಲಿಡಲು ಭಯಪಡುತ್ತಿದ್ದಾರೆ. ಇದಕ್ಕೆ ಕಾರಣ ಪೊಲೀಸರ ‘ಮಾಮೂಲಿ’ ವ್ಯವಸ್ಥೆ.

ವರ್ಗಾವಣೆ ದಂಧೆ ಮೂಲಕ ಲಕ್ಷಗಟ್ಟಲೇ ಹಣ ಕೊಟ್ಟು ಠಾಣೆಗೆ ಬರುವ ಕೆಲ ಪೊಲೀಸ್ ಅಧಿಕಾರಿಗಳು, ‘ಮಾಮೂಲಿ’ ಬರುವ ಪ್ರಕರಣಗಳಿಗಷ್ಟೇ ಒತ್ತು ನೀಡುತ್ತಿದ್ದಾರೆ. ಠಾಣೆ ವ್ಯಾಪ್ತಿಯಲ್ಲಿ ಹಣ ವಸೂಲಿಗೆಂದೇ ಕೆಳ ಹಂತದ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದಾರೆ. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಯನ್ನೂ ಬಳಸಿಕೊಳ್ಳುತ್ತಿರುವ ದೂರುಗಳಿವೆ.

‘ಠಾಣೆ ವ್ಯಾಪ್ತಿಯಲ್ಲಿ ನಿಯಮ ಮೀರಿ ವ್ಯಾಪಾರ ನಡೆಸುವವರು ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗುವವರಿಗೆ ಮಾಮೂಲಿ ನಿಗದಿ ಮಾಡಲಾಗಿದೆ. ಅವರೆಲ್ಲರ ಬಳಿ ಹಣ ಸಂಗ್ರಹಿಸುವ ಕೆಲ ಸಿಬ್ಬಂದಿ, ಅದನ್ನು ಠಾಣೆ ಮುಖ್ಯಸ್ಥರಿಗೆ ತಂದುಕೊಡುತ್ತಾರೆ. ನಂತರ, ಅದು ಹಲವರಿಗೆ ತಲುಪುತ್ತದೆ. ಯಾರಿಗೂ ಎಷ್ಟು ಹೋಯಿತು ಎಂಬುದು ಮಾತ್ರ ಗೊತ್ತಾಗುವುದಿಲ್ಲ’ ಎಂದು ವ್ಯವಸ್ಥೆಯಿಂದ ಬೇಸತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಲ ಠಾಣೆಗಳಲ್ಲಿ ಸೆಂಟ್ರಿಯಿಂದ ಹಿಡಿದು ಮುಖ್ಯಸ್ಥರವರೆಗೂ ಹಣವೇ ಮುಖ್ಯವಾಗಿದೆ. ಕೈ ಬಿಸಿ ಮಾಡಿದರೆ ಮಾತ್ರ ಎಫ್‌ಐಆರ್ ದಾಖಲು, ತ್ವರಿತ ತನಿಖೆ ಎಂಬಂತಾಗಿದೆ. ‘ಸಂಧಾನ’ದ ಮೂಲಕವೇ ಸಮಸ್ಯೆ ಬಗೆಹರಿಸಿ ಹಣ ಪಡೆಯುವ ಸಿಬ್ಬಂದಿಯೂ ಇದ್ದಾರೆ. ಹಣದಾಸೆಗಾಗಿ ಡ್ರಗ್ಸ್, ವೇಶ್ಯಾವಾಟಿಕೆ ಹಾಗೂ ಇತರೆ ಮಾಫಿಯಾಗಳೊಂದಿಗೆ ಕೈ ಜೋಡಿಸುತ್ತಿರುವವರು ಹೆಚ್ಚಿದ್ದಾರೆ. ದೂರುದಾರ ಹಾಗೂ ಆರೋಪಿಗಳನ್ನು ಹಂಚಿಕೊಂಡು, ಸಾಧ್ಯವಾದಷ್ಟು ಹಣ ಕೀಳುವ ಸಿಬ್ಬಂದಿಯೂ ಇದ್ದಾರೆ’ ಎಂದೂ ವಿವರಿಸಿದರು.

ಠಾಣೆ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರೊಬ್ಬರು, ‘ಠಾಣೆಯೊಳಗೆ ಕಾಲಿಟ್ಟ ಕೂಡಲೇ ‘ನಿಮಗೆ ಸಹಾಯ ಬೇಕೆ?‘ ಎಂಬ ಫಲಕ ಕಾಣುತ್ತದೆ. ಅಲ್ಲಿ ಸಮಸ್ಯೆ ಹೇಳಿಕೊಂಡರೆ, ಬೇರೊಬ್ಬ ಸಿಬ್ಬಂದಿ ಬಳಿ ಕಳುಹಿಸುತ್ತಾರೆ. ಸಮಸ್ಯೆ ಆಲಿಸುವ ಅವರು, ‘ನಿಮ್ಮ ಬಳಿ ಹಣವಿದೆಯಾ? ಹಣ ನೀಡಲು ಆಗುತ್ತದೆಯಾ?’ ಎಂಬುದನ್ನು ವಿಚಾರಿಸಿಯೇ ಮುಂದಕ್ಕೆ ಕಳಿಸುತ್ತಾರೆ. ಇಲ್ಲದಿದ್ದರೆ, ನಾಳೆ ಬನ್ನಿ ಎಂದು ಸಾಗಹಾಕುತ್ತಾರೆ’ ಎಂದರು.

ಠಾಣೆಗೆ ಚಹಾಪುಡಿ, ಸಕ್ಕರೆ, ಹಾಲು: ‘ಲಕ್ಷ ರೂಪಾಯಿ ಮೌಲ್ಯದ ಶ್ವಾನ ಕಳುವಾದ ಬಗ್ಗೆ ದೂರು ನೀಡಲು
ಠಾಣೆಗೆ ಹೋಗಿದ್ದೆ. ದೂರು ಮಾತ್ರ ಪಡೆದಿದ್ದ ಪೊಲೀಸರು, ಎಫ್‌ಐಆರ್ ದಾಖಲಿಸಲು ₹ 500 ಕೇಳಿದರು. ಅದನ್ನು ಪ್ರಶ್ನಿಸಿದ್ದಕ್ಕೆ, ‘ನಾಳೆ ಬನ್ನಿ, ನಾಡಿದ್ದು ಬನ್ನಿ’ ಎನ್ನುತ್ತಲೇ ಕಾಲ ಕಳೆದರು. ಠಾಣೆಗೆ ಸಕ್ಕರೆ, ಚಹಾಪುಡಿ, ಹಾಲು ಬೇಕೆಂದು ಹೇಳಿ ನನ್ನಿಂದಲೇ ಕೆಲ ದಿನ ತರಿಸಿಕೊಂಡರು’ ಎಂದು ಬೆಂಗಳೂರಿನ ನಿವಾಸಿಯೊಬ್ಬರು ದೂರಿದರು.

ಪ್ರಕರಣಗಳಲ್ಲೂ ‘ಮಾಮೂಲಿ’: ‘ಜಪ್ತಿ ಮಾಡಿದ ವಸ್ತುಗಳು, ವಾಹನಗಳನ್ನು ಬಿಡುಗಡೆ ಮಾಡಲೂ ಕೆಲ ಠಾಣೆಗಳಲ್ಲಿ ಮಾಮೂಲಿ ನಿಗದಿ ಮಾಡಲಾಗಿದೆ. ಇದನ್ನು ಪ್ರಶ್ನಿಸಿದರೆ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಿ
ಸುವುದಾಗಿ ಬೆದರಿಸುತ್ತಾರೆ’ ಎಂದು ನಿವಾಸಿಯೊಬ್ಬರು ತಿಳಿಸಿದರು.

‘ಮನೆಯಲ್ಲಿ 120 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಆರೋಪಿಯನ್ನು ಬಂಧಿಸಿದ್ದಾಗಿ ಹೇಳಿದ್ದ ಪೊಲೀಸರು, 80 ಗ್ರಾಂ ಚಿನ್ನ ಮಾತ್ರ ಜಪ್ತಿ ಮಾಡಿದ್ದಾಗಿ ಹೇಳಿದ್ದರು. ಆದರೆ, ನ್ಯಾಯಾಲಯಕ್ಕೆ 120 ಗ್ರಾಂ ಚಿನ್ನವೆಂದು ಹೇಳಿ ಆದೇಶ ತನ್ನಿ ಎಂದಿದ್ದರು. ಈ ವ್ಯತ್ಯಾಸ ಏಕೆ? ಎಂದು ಪ್ರಶ್ನಿಸಿದಾಗ, ‘ಮಾಮೂಲಿ’ಯೆಂದು ಬಾಯಿ ಮುಚ್ಚಿಸಿದರು‘ ಎಂದೂ ಹೇಳಿದರು.

ಕ್ಯಾಮೆರಾ ಅಳವಡಿಸಿ, ನಿಗಾ ಇರಿಸಿ: ‘ಪ್ರತಿಯೊಂದು ಠಾಣೆಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಿಬ್ಬಂದಿ ಮೇಲೆ ನಿಗಾ ಇರಿಸುವ ವ್ಯವಸ್ಥೆ ಬರಬೇಕು. ಯಾವೆಲ್ಲ ಪೊಲೀಸರು, ಯಾರೆಲ್ಲ ಆರೋಪಿಗಳ ಜೊತೆ ಕೈಜೋಡಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

‘ಪ್ರಾಮಾಣಿಕ ಪೊಲೀಸರಿಗೆ ಸಂಕಷ್ಟ’


‘ತಿಂಗಳ ಸಂಬಳವನ್ನೇ ನಂಬಿರುವ ಹಲವು ಪೊಲೀಸರು ಇಲಾಖೆಯಲ್ಲಿದ್ದಾರೆ. ಕೆಲವರ ಭ್ರಷ್ಟಾಚಾರ ಹಾಗೂ ಅಶಿಸ್ತು, ಇಡೀ ಇಲಾಖೆಗೆ ಕೆಟ್ಟ ಹೆಸರು ತರುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿ ಪೊಲೀಸ್ ಇಲಾಖೆ ಸೇರುತ್ತಿದ್ದಾರೆ. ಅಧಿಕಾರ ಸಿಕ್ಕ ಕೂಡಲೇ ತಮ್ಮ ಹಿನ್ನೆಲೆಯನ್ನೇ ಮರೆತು, ಅವರೆಲ್ಲ ಜನರ ‘ಭಕ್ಷಕ’ರಾಗುತ್ತಿದ್ದಾರೆ. ಪ್ರಾಮಾಣಿಕ ಪೊಲೀಸರನ್ನೂ ಹೀನಾಯವಾಗಿ ನಡೆಸಿಕೊಂಡು ಸಂಕಷ್ಟಕ್ಕೆ ದೂಡುವವರೂ ಠಾಣೆಯಲ್ಲಿದ್ದಾರೆ. ಠಾಣೆ ವ್ಯವಸ್ಥೆ ಸುಧಾರಣೆಯಾಗಬೇಕಾದರೆ, ಪ್ರಾಮಾಣಿಕ ಅಧಿಕಾರಿಗಳು ಮುಖ್ಯಸ್ಥರಾಗಬೇಕು. ವರ್ಗಾವಣೆ ದಂಧೆಗೆ ಲಗಾಮು ಹಾಕಬೇಕು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT