ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ, ಮೀಸಲಾತಿ ವಿಚಾರಗಳೇ ಅಸ್ತ್ರ: ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿಕೆ

‘ಪ್ರಜಾವಾಣಿ’ ಕಚೇರಿಯಲ್ಲಿ ಸಂವಾದ l ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿಕೆ
Last Updated 21 ಮಾರ್ಚ್ 2023, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ಮತ್ತು ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸುವ ವಿಷಯದಲ್ಲಿ ಬಿಜೆಪಿ ಸರ್ಕಾರ ಎಡವಿರುವುದೇ ಈ ಬಾರಿಯ ಚುನಾವಣೆಯಲ್ಲಿ ನಮಗೆ ದೊಡ್ಡ ಅಸ್ತ್ರಗಳಾಗಲಿವೆ’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಸಂವಾದದಲ್ಲಿ ಪಾಲ್ಗೊಂಡ ಅವರು, ‘ಲಿಂಗಾಯತ ಧರ್ಮ, ಟಿಪ್ಪು ಜಯಂತಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಹಾಗೂ ಸರ್ಕಾರದ ಸಾಧನೆಗಳನ್ನು ಸರಿಯಾಗಿ ಬಿಂಬಿಸಲು ವಿಫಲವಾದದ್ದು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಕೈಗೆ ಪ್ರಬಲವಾದ ಅಸ್ತ್ರಗಳು ಸಿಕ್ಕಿವೆ’ ಎಂದರು.

‘ಕಾಂಗ್ರೆಸ್‌ ಪಕ್ಷದ ಕಾರ್ಯವಿಧಾನವೇ ಬದಲಾಗಿದೆ. 207 ವಿಧಾನಸಭಾ ಕ್ಷೇತ್ರಗಳಲ್ಲಿ 25,000 ಮನೆಗಳಿಂದ 90,000 ಮನೆಗಳವರೆಗೆ ‘ಗ್ಯಾರಂಟಿ ಕಾರ್ಡ್‌’ ವಿತರಿಸಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಸಮನ್ವಯದಿಂದ ಕೆಲಸ ಮಾಡಲು ಪೂರಕವಾಗಿ ನಾನು ಇದ್ದೇನೆ. ಈಗಿನ ವರದಿಗಳ ಪ್ರಕಾರ, 120 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ’ ಎಂದರು.

ಗೆಲುವೇ ಅಭ್ಯರ್ಥಿಗಳ ಆಯ್ಕೆಯ ಪ್ರಮುಖ ಮಾನದಂಡ. 100ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ 48 ಗಂಟೆಗಳೊಳಗೆ ಮುಗಿಯಲಿದೆ. 2024ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸವೂ ಆರಂಭವಾಗಿದೆ ಎಂದು
ತಿಳಿಸಿದರು.

ಅಪೂರ್ಣ ಯೋಜನೆಗೆ ಮೋದಿ ಚಾಲನೆ: ಸುರ್ಜೇವಾಲಾ ಟೀಕೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಕಲಿ ವೈದ್ಯರಂತೆ ವರ್ತಿಸುತ್ತಿದ್ದಾರೆ. ಪ್ರಚಾರದ ಗೀಳಿಗಾಗಿ ವಿಮಾನನಿಲ್ದಾಣ ಸೇರಿದಂತೆ ಅಪೂರ್ಣ ಯೋಜನೆಗಳನ್ನೇ ಉದ್ಘಾಟಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಹೇಳಿದರು.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ ಎನ್ನುವುದು ಬಸವರಾಜ ಬೊಮ್ಮಾಯಿ ಹಾಗೂ ಮೋದಿ ಸರ್ಕಾರಕ್ಕೆ ಮನವರಿಕೆಯಾಗಿದೆ. ಅದಕ್ಕಾಗಿ ಪ್ರಚಾರ ಪಡೆಯುವ ಗೀಳಿನ ಹಿಂದೆ ಬಿದ್ದಿದ್ದಾರೆ. ಆದರೆ, ಪ್ರತಿ ಪ್ರಯತ್ನದಲ್ಲೂ ಮುಖಭಂಗ ಅನುಭವಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ಹುಚ್ಚಿಗೆ ಸಾರ್ವಜನಿಕರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ದೂರಿದರು.

ಕಳೆದ ನವೆಂಬರ್‌ನಲ್ಲಿ ಪ್ರಧಾನಿ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಎರಡನೇ ಟರ್ಮಿನಲ್‌ ಉದ್ಘಾಟಿಸಿದರು. ಈ ಟರ್ಮಿನಲ್‌ಗೆ ಅಂತರರಾಷ್ಟ್ರೀಯ ವಿಮಾನಗಳು ಸ್ಥಳಾಂತರವಾಗುವುದಕ್ಕೆ ಎರಡು ವರ್ಷಗಳು ಬೇಕು. ಪ್ರಾದೇಶಿಕ ವಿಮಾನಗಳ ಕಾರ್ಯಾಚರಣೆಗೆ ಜೂನ್‌ವರೆಗೂ ಕಾಯಬೇಕು. ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಕಾರಣವಾಗುತ್ತಿದೆ. ಇದು ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ ಎಂದರು.

ಬೈಯ್ಯಪ್ಪನಹಳ್ಳಿ– ವೈಟ್‌ಫೀಲ್ಡ್ ಮೆಟ್ರೊ ಮಾರ್ಗ ಪೂರ್ಣಗೊಳ್ಳಲು ಮೂರು ವರ್ಷ ಬೇಕಾಗಬಹುದು. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ 58 ನ್ಯೂನತೆಗಳನ್ನು ಪಟ್ಟಿ ಮಾಡಿದ್ದಾರೆ. ಅದನ್ನೆಲ್ಲ ನಿರ್ಲಕ್ಷಿಸಿ ಉದ್ಘಾಟಿಸಲಾಗುತ್ತಿದೆ. ಇಂತಹ ಆತುರ ಬೆಂಗಳೂರಿನ ಸಮಸ್ಯೆಗೆ ಪರಿಹಾರ ನೀಡುವ ಬದಲು ಇನ್ನಷ್ಟು ಅಡಚಣೆಯಾಗಲಿದೆ ಎಂದರು.

ಕಾಂಗ್ರೆಸ್‌ಗೆ ಪರಿಶಿಷ್ಟ ನಾಯಕರ ಸೇರ್ಪಡೆ

ಪರಿಶಿಷ್ಟ ಜಾತಿಯವರ ಪರ ಹೋರಾಟ ನಡೆಸುತ್ತಿರುವ ಸುಧಾಂ ದಾಸ್, ಬಿ. ಗೋಪಾಲ್‌, ಅಂಬಣ್ಣ ಅರೋಲಿಕರ್, ಹೆಣ್ಣೂರು ಶ್ರೀನಿವಾಸ್‌ ಸೇರಿದಂತೆ ಹಲವು ಮುಖಂಡರು ಮಂಗಳವಾರ ಕಾಂಗ್ರೆಸ್‌ ಸೇರಿದರು.

ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ರಣದೀಪ್ ಸಿಂಗ್ ಸುರ್ಜೇವಾಲಾ, ಬಿಜೆಪಿ ಸರ್ಕಾರದಿಂದ ದೌರ್ಜನ್ಯಕ್ಕೆ ಒಳಗಾಗಿರುವ ಪರಿಶಿಷ್ಟ ಸಮುದಾಯದ ನಾಯಕರು ಕಾಂಗ್ರೆಸ್‌ ಸೇರಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ
ಬಿಜೆಪಿ ಮೋಸ ಮಾಡಿದೆ. ದಲಿತರಿಗೂ ದ್ರೋಹವಾಗಿದೆ. ನ್ಯಾ. ನಾಗಮೋಹನ್‌ ದಾಸ್‌ ವರದಿ ಶಿಫಾರಸು ತರಾತುರಿಯಲ್ಲಿ ಜಾರಿಗೆ ತಂದರೂ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ. ರಾಜ್ಯದ ಪರಿಶಿಷ್ಟರು ಅವರನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT