ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ಬಹಿಷ್ಕಾರ: ವಕೀಲರ ಸಂಘದ ವಿರುದ್ಧ ಸ್ವಪ್ರೇರಿತ ದೂರು

Last Updated 11 ಫೆಬ್ರುವರಿ 2021, 18:39 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿಯುವಂತೆ ಕರೆ ನೀಡಿದ ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಂಡಿದೆ.

ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳ ವಕೀಲರ ಸಂಘಗಳ ಪದಾಧಿಕಾರಿಗಳಿಗೆ ನೋಟಿಸ್ ನೀಡಲು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿತು. ಕಲಾಪ ಬಹಿಷ್ಕರಿಸದಂತೆ ಫೆ.3ರಂದು ಮುಖ್ಯ ನ್ಯಾಯಮೂರ್ತಿ ಸಂಘಗಳಿಗೆ ಮನವಿ ಮಾಡಿ ಪತ್ರ ಬರೆದಿದ್ದರು.

‘ವಕೀಲರ ಸಂಘಗಳು ಈ ರೀತಿಯ ನಿರ್ಣಯ ಕೈಗೊಳ್ಳುವುದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ. ಅಲ್ಲದೇ, ಅದು ನ್ಯಾಯಾಲಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದರು.

‘ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್.ಪೇಟೆ ಮತ್ತು ದಾವಣಗೆರೆ ವಕೀಲರ ಸಂಘಗಳು ಕರೆ ನೀಡಿವೆ. ಮುಖ್ಯ ನ್ಯಾಯಮೂರ್ತಿ ಮನವಿ ನಂತರವೂ ಫೆ.6 ಮತ್ತು 8ರಂದು ಎರಡು ಕಡೆ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದಿದ್ದಾರೆ’ ಪೀಠ ಅಭಿಪ್ರಾಯಪಟ್ಟಿದೆ.

‘ಇದು ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಕ್ಷಿದಾರರು ಮತ್ತು ವಕೀಲರ ಸಂಘಗಳ ಸದಸ್ಯರಿಗೂ ತೊಂದರೆ ಮಾಡಿದೆ’ ಎಂದು ಪೀಠ ಹೇಳಿತು.

ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಪ್ರತ್ಯೇಕ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT