ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಗೆ ಶೀಘ್ರವೇ 115 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳು: ಸಚಿವ ಸಿ.ಸಿ.ಪಾಟೀಲ

ಅಗತ್ಯ ಬಿದ್ದರೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌
Last Updated 17 ಮೇ 2021, 15:54 IST
ಅಕ್ಷರ ಗಾತ್ರ

ಗದಗ: ‘ರೋಗಿಗಳಿಗೆ ತುರ್ತಾಗಿ ಬಳಸಲು ನೆರವಾಗುವ 115 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳು ಎರಡು ದಿನಗಳಲ್ಲಿ ಜಿಲ್ಲೆಗೆ ಲಭ್ಯವಾಗಲಿವೆ’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಾಜ್ಯ ಸರ್ಕಾರ ಜಿಲ್ಲೆ 50 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದೆ. ಇವುಗಳ ಜತೆಗೆ ವೈಯಕ್ತಿಕ ಪ್ರಯತ್ನದಿಂದ 65 ಕಾನ್ಸನ್‌ಟ್ರೇಟರ್‌ಗಳು ಜಿಲ್ಲೆಯ ಸೋಂಕಿತರ ಚಿಕಿತ್ಸೆಗೆ ದೊರೆಯಲಿವೆ’ ಎಂದು ಅವರು ತಿಳಿಸಿದರು.

‘ಜಿಮ್ಸ್‌ನಲ್ಲಿರುವ ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ಆದರೂ, ಜಿಲ್ಲೆಗೆ ಆಮ್ಲಜನಕದ ಕೊರತೆ ಎದುರಾಗಿಲ್ಲ. ಕೇಂದ್ರ ಸಚಿವ ಪ್ರಹ್ಹಾದ ಜೋಶಿ ಅವರ ನೆರವಿನಿಂದ ಜಿಲ್ಲೆಗೆ ಹೆಚ್ಚುವರಿಯಾಗಿ 10 ಕೆ.ಎಲ್‌. ಆಮ್ಲಜನಕ ಲಭಿಸಿದೆ. 400 ರೆಮ್‌ಡಿಸಿವರ್‌ ಇಂಜೆಕ್ಷನ್‌ಗಳು ಕೂಡ ಮಂಗಳವಾರ ಬರಲಿವೆ’ ಎಂದು ಅವರು ತಿಳಿಸಿದರು.

‘ಕೈಗಾರಿಕೆಗಳಿಂದ 160 ಆಮ್ಲಜನಕ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದಾನಿಗಳು 100 ಸಿಲಿಂಡರ್‌ ನೀಡಿದ್ದಾರೆ. ಒಟ್ಟು 260 ಸಿಲಿಂಡರ್‌ಗಳು ಸೋಂಕಿತರ ಚಿಕಿತ್ಸೆಗೆ ಹೆಚ್ಚುವರಿಯಾಗಿ ಲಭ್ಯವಾಗಿವೆ’ ಎಂದು ತಿಳಿಸಿದರು.

‘ಸರ್ಕಾರ ಒದಗಿಸಿರುವ 50 ವೆಂಟಿಲೇಟರ್‌ಗಳ ಪೈಕಿ 33 ವೆಂಟಿಲೇಟರ್‌ಗಳು ಸೋಂಕಿತರ ಚಿಕಿತ್ಸೆಗೆ ಬಳಕೆ ಆಗುತ್ತಿವೆ. ಉಳಿದ 17 ವೆಂಟಿಲೇಟರ್‌ಗಳ ಅಳವಡಿಕೆಗೆ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಶೀಘ್ರವೇ ಬಗೆಹರಿಸಿ ಅಳವಡಿಸಲು ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

‘ವಲಸಿಗರಿಂದ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದಾಗಿ ತಿಳಿದು ಬಂದಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುವವರು ಸಾಮಾಜಿಕ ಕಳಕಳಿ ಹೊಂದಿರಬೇಕು. ಅನಗತ್ಯವಾಗಿ ಹೊರಗೆ ಅಡ್ಡಾಡಬಾರದು. ಇನ್ನು ಮುಂದೆ ಮನೆಯಲ್ಲಿ ಚಿಕಿತ್ಸೆ ನೀಡದರೆ ಎಲ್ಲರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಬೇಕು. ಒಂದು ವಾರ ಜಿಲ್ಲೆಯಲ್ಲಿನ ಸೋಂಕಿನ ಪ್ರಮಾಣದ ಸ್ಥಿತಿಗತಿ ಗಮನಿಸಿ ಅಗತ್ಯವಿದ್ದಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಿ.ಇ.ಒ. ಭರತ್ ಎಸ್., ಎಸ್‌ಪಿ ಯತೀಶ್ ಎನ್., ಎಡಿಸಿ ಸತೀಶ್‌ ಕುಮಾರ್ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.

ಇಬ್ಬರಿಗೆ ಬ್ಲಾಕ್‌ ಫಂಗಸ್‌ ಸೋಂಕು
‘ಜಿಲ್ಲೆಯಲ್ಲಿ ಇಬ್ಬರು ರೋಗಿಗಳಲ್ಲಿ ಬ್ಲಾಕ್‌ ಫಂಗಸ್‌ ಸೋಂಕು ಕಾಣಿಸಿಕೊಂಡಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲು ನಿರ್ದೇಶನ ನೀಡಲಾಗಿದೆ’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

‘ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರಲ್ಲಿ ಬ್ಲಾಕ್‌ ಫಂಗಸ್‌ ಸೋಂಕು ಕಾಣಿಸಿಕೊಂಡಿದೆ. ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಡಿಎಚ್‌ಒ ಡಾ. ಸತೀಶ್‌ ಬಸರಿಗಿಡದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT