ಮಂಗಳವಾರ, ಜೂನ್ 22, 2021
24 °C
‘ಜೀವರಕ್ಷಕ’ ಚುಚ್ಚುಮದ್ದು ಕೊರತೆ l ಸರ್ಕಾರಿ ಕೋಟಾದ ಕೋವಿಡ್‌ ರೋಗಿಗಳಿಗೂ ಔಷಧ ನೀಡಲಾಗದ ಸ್ಥಿತಿ

ಸಿಗದ ರೆಮ್‌ಡಿಸಿವಿರ್‌: ರೋಗಿಗಳ ಏದುಸಿರು

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಕೋವಿಡ್ ರೋಗಿಗಳು ಅತ್ತ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಸಿಗದೇ ನರಳಾಟ ನಡೆಸುತ್ತಿದ್ದರೆ, ಇತ್ತ ಆಸ್ಪತ್ರೆಯಲ್ಲಿ ಹಾಸಿಗೆ ದಕ್ಕಿದರೂ ‘ಜೀವರಕ್ಷಕ’ ಎಂದು ಭಾವಿಸಲಾಗುತ್ತಿರುವ ರೆಮ್‌ಡಿಸಿವಿರ್ ಚುಚ್ಚುಮದ್ದು ಕೊರತೆ ರೋಗಿಗಳನ್ನು ಆತಂಕದ ಮಡುವಿಗೆ ದೂಡುತ್ತಲೇ ಇದೆ.

ರೆಮ್‌ಡಿಸಿವಿರ್‌ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಸಚಿವ ಡಿ.ವಿ. ಸದಾನಂದಗೌಡ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪದೇ ಪದೇ ಪ್ರತಿಪಾದಿಸುತ್ತಲೇ ಇದ್ದಾರೆ. ಅವರು ಭರವಸೆ ನೀಡುತ್ತಿರುವಷ್ಟೇ ಪ್ರಮಾಣದಲ್ಲಿ ರೆಮ್‌ಡಿಸಿವಿರ್ ಕೊರತೆ ಹೆಚ್ಚುತ್ತಲೇ ಇದೆ!  ಮಂಗಳವಾರ ರಾಜ್ಯಕ್ಕೆ ಪೂರೈಕೆಯಾಗಬೇಕಿದ್ದ ಚುಚ್ಚುಮದ್ದು ತಲುಪದೇ ಇರುವುದು, ರೋಗಿಗಳು ಹಾಗೂ ಚಿಕಿತ್ಸೆ ನೀಡುವ ವೈದ್ಯರು ಸೇರಿದಂತೆ ಎಲ್ಲರನ್ನೂ ಕಷ್ಟಕ್ಕೆ ತಳ್ಳಿದೆ.

ಕೆಲವು ದಿನಗಳಿಂದ ರಾಜ್ಯಕ್ಕೆ ನಿತ್ಯವೂ 20,000 ವಯಲ್‌ಗಳಷ್ಟು ರೆಮ್‌ಡಿಸಿವಿರ್‌ ಚುಚ್ಚುಮದ್ದು ಪೂರೈಕೆ ಆಗುತ್ತಿತ್ತು. 10,000 ವಯಲ್‌ಗಳನ್ನು ಸರ್ಕಾರಿ ಕೋಟಾದಡಿ ದಾಖಲಾದ ರೋಗಿಗಳಿಗಾಗಿ ಕಾಯ್ದಿರಿಸಲಾಗುತ್ತಿತ್ತು. ಉಳಿದ 10,000 ವಯಲ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲು ಔಷಧ ನಿಯಂತ್ರಕರ ಮೂಲಕ ಹಂಚಿಕೆ ಮಾಡಲಾಗುತ್ತಿತ್ತು.

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಕ್ಕೆ ಮಂಗಳವಾರ 10,000 ವಯಲ್‌ಗಳಷ್ಟು ರೆಮ್‌ಡಿಸಿವಿರ್‌ ಪೂರೈಕೆ ಆಗಬೇಕಿತ್ತು. ಆದರೆ, ಔಷಧಿ ಬಂದು ತಲುಪಿಲ್ಲ. ಸರ್ಕಾರಿ ಕೋಟಾದ ರೋಗಿಗಳಿಗೆ ಕಾಯ್ದಿರಿಸಿದ್ದ ಔಷಧಿಯ ದಾಸ್ತಾನು ಮುಗಿಯುವ ಹಂತ ತಲುಪಿದೆ. ಬುಧವಾರದಿಂದ ಸರ್ಕಾರಿ ಕೋಟಾದ ರೋಗಿಗಳಿಗೂ ರೆಮ್‌ಡಿಸಿವಿರ್‌ ಔಷಧಿ ಒದಗಿಸುವುದು ಕಷ್ಟವಾಗಲಿದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯ ಮೂಲಗಳಿಂದ ಲಭಿಸಿದೆ.

ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ದಾಖಲಾದವರಿಗೆ ಸುಲಭವಾಗಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ಲಭಿಸುತ್ತಿತ್ತು. ಖಾಸಗಿಯಾಗಿ ಆಸ್ಪತ್ರೆಗೆ ದಾಖಲಾದವರು ಈ ಚುಚ್ಚುಮದ್ದಿಗಾಗಿ ಪರದಾಡಬೇಕಾದ ಸ್ಥಿತಿ ಇತ್ತು. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆಗೆ ದಾಖಲಾದವರೂ ಔಷಧಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲೇ ಇದೆ.

ಔಷಧಿಯೇ ಸಿಗುತ್ತಿಲ್ಲ: ಮೈಲಾನ್‌, ಸನ್‌ ಫಾರ್ಮಾ ಕಂಪನಿಗಳಿಗೆ ಒಟ್ಟು 1.20 ಲಕ್ಷ ವಯಲ್‌ ರೆಮ್‌ಡಿಸಿವಿರ್‌ ಪೂರೈಸುವಂತೆ ವೈದ್ಯಕೀಯ ಸರಬರಾಜು ನಿಗಮ ಏಪ್ರಿಲ್‌ ಆರಂಭದಲ್ಲಿ ಬೇಡಿಕೆ ಸಲ್ಲಿಸಿತ್ತು. ಏಪ್ರಿಲ್‌ 24ರಂದು ಕ್ಯಾಡಿಲಾ ಕಂಪನಿಗೆ 60,000 ವಯಲ್‌ ಮತ್ತು ಜುಬಿಲಿಯಂಟ್‌ ಫಾರ್ಮಾಸ್ಯೂಟಿಕಲ್ಸ್ ಕಂಪನಿಗೆ 30,000 ವಯಲ್‌ ಪೂರೈಕೆಗೆ ಆದೇಶ ನೀಡಲಾಗಿದೆ. ಸೋಮವಾರ ಮತ್ತೆ ಮೈಲಾನ್‌ ಕಂಪನಿಗೆ 1 ಲಕ್ಷ ವಯಲ್‌ ಪೂರೈಸುವಂತೆ ಆದೇಶ ನೀಡಲಾಗಿದೆ.

‘ಕೆಲವೇ ದಿನಗಳ ಅಂತರದಲ್ಲಿ 3.10 ಲಕ್ಷ ವಯಲ್‌ಗಳಷ್ಟು ರೆಮ್‌ಡಿಸಿವಿರ್‌ ಚುಚ್ಚುಮದ್ದು ಖರೀದಿಗೆ ಆದೇಶ ನೀಡಲಾಗಿದೆ. ಆದರೆ, ನಿತ್ಯ 10,000 ವಯಲ್‌ಗಳಷ್ಟು ಚುಚ್ಚುಮದ್ದು ಪಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೊರ ರಾಜ್ಯಗಳಲ್ಲಿರುವ ಔಷಧ ತಯಾರಿಕಾ ಕಂಪನಿಗಳಿಂದಲೂ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ನಿಗಮದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಕೋವಿಡ್‌ ಮೊದಲ ಅಲೆಯ ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಬಹುತೇಕ ಕಂಪನಿಗಳು ರೆಮ್‌ಡಿಸಿವಿರ್‌ ಔಷಧಿ ಉತ್ಪಾದನೆ ಸ್ಥಗಿತಗೊಳಿಸಿದ್ದವು. ಎರಡನೇ ಅಲೆಯ ಮುನ್ಸೂಚನೆ ಇದ್ದರೂ ರಾಜ್ಯ ಸರ್ಕಾರ ಔಷಧಿ ದಾಸ್ತಾನಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ರೆಮ್‌ಡಿಸಿವಿರ್‌ ಔಷಧಿಯನ್ನು ಉತ್ಪಾದನಾ ಪ್ರಕ್ರಿಯೆ ಆರಂಭಿಸಿದ ಒಂದು ತಿಂಗಳ ಬಳಿಕವಷ್ಟೇ ಮಾರುಕಟ್ಟೆಗೆ ಒದಗಿಸಲು ಸಾಧ್ಯ. ಈಗ ಮತ್ತೆ ಔಷಧಿ ಉತ್ಪಾದನೆ ಆರಂಭವಾಗಿದ್ದರೂ, ಮಾರುಕಟ್ಟೆಗೆ ತಲುಪುವುದು ತಡವಾಗುತ್ತಿದೆ’ ಎನ್ನುತ್ತಾರೆ ರಾಜ್ಯದ ಪ್ರಮುಖ ಔಷಧಿ ವಿತರಕರೊಬ್ಬರು.

₹ 40 ಸಾವಿರದವರೆಗೂ ದರ?
ಬೆಂಗಳೂರು: ಪೂರೈಕೆಯಾಗುವ ರೆಮ್‌ಡಿಸಿವಿರ್‌ ಚುಚ್ಚುಮದ್ದಿನಲ್ಲಿ ಬಹುಪಾಲನ್ನು ಸರ್ಕಾರಿ ಕೋಟಾ ರೋಗಿಗಳಿಗಾಗಿ ಕಾಯ್ದಿರಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಈ ಔಷಧಿಯೇ ಸಿಗುತ್ತಿಲ್ಲ. ಈ ವೈಫಲ್ಯಕ್ಕೆ ಸರ್ಕಾರವೇ ಹೊಣೆ ಎಂದು ರಾಜ್ಯ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್‌ಗಳ ಸಂಘದ(ಫನಾ) ಅಧ್ಯಕ್ಷ ಡಾ.ಎಚ್‌.ಎಂ. ಪ್ರಸನ್ನ ಆರೋಪಿಸುತ್ತಾರೆ.

‘ಸರ್ಕಾರಿ ಕೋಟಾದ ರೋಗಿಗಳಿಗೆ ಕಾಯ್ದಿರಿಸಿದ್ದ ಚುಚ್ಚುಮದ್ದಿನ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸೆ ನೀಡಿಲ್ಲ. ಚುಚ್ಚುಮದ್ದು ಎಲ್ಲಿಗೆ ಹೋಗಿದೆ ಎಂಬುದು ಗೊತ್ತಿಲ್ಲ. ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರುತ್ತಿದ್ದಾರೆ. ಪ್ರತಿ ವಯಲ್‌ಗೆ ₹ 20,000ದಿಂದ ₹ 40,000ದವರೆಗೂ ನೀಡಿ ಔಷಧ ಖರೀದಿಸಿ ತರಬೇಕಾದ ಸ್ಥಿತಿ ಇದೆ. ರೆಮ್‌ಡೆಸಿವರ್‌ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರದ ಕೆಲಸ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ’ ಎಂದು ದೂರಿದರು.

ಕೆಟಿಪಿಪಿ ನಿರ್ಬಂಧವೂ ಕಾರಣ?
ಕೋವಿಡ್‌ ಚಿಕಿತ್ಸೆಗೆ ಔಷಧಿ ಮತ್ತು ಉಪಕರಣಗಳ ಖರೀದಿಯಲ್ಲಿ ಹೆಚ್ಚಿನ ಸಂದರ್ಭದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ ವಿನಾಯ್ತಿ ನೀಡಲಾಗಿತ್ತು. ಆದರೆ, ರೆಮ್‌ಡಿಸಿವಿರ್‌ ಖರೀದಿಗೆ ಕೆಟಿಪಿಪಿ ಅಡಿಯಲ್ಲೇ ಟೆಂಡರ್‌ ನಡೆಸಲಾಗಿತ್ತು. ಕಡಿಮೆ ದರ ನಮೂದಿಸಿದ್ದ ಒಬ್ಬ ವಿತರಕರಿಗೆ ಮಾತ್ರ ಚುಚ್ಚುಮದ್ದು ಪೂರೈಕೆಗೆ ಆದೇಶ ನೀಡಲಾಗಿತ್ತು. ಇದು ರಾಜ್ಯದಲ್ಲಿ ರೆಮ್‌ಡಿಸಿವಿರ್‌ ಕೊರತೆ ಉಲ್ಬಣಿಸಲು ಪ್ರಮುಖ ಕಾರಣ ಎಂಬುದು ಔಷಧ ವಿತರಕರ ಆರೋಪ.

ಆರಂಭದಲ್ಲಿ ಪ್ರತಿ ವಯಲ್‌ಗೆ ₹ 1,296ರ ದರದಲ್ಲಿ ಚುಚ್ಚುಮದ್ದು ಪೂರೈಸಲು ಅತಿ ಕಡಿಮೆ ದರ ನಮೂದಿಸಿದ್ದ ಬಿಡ್‌ದಾರರು ಒಪ್ಪಿಕೊಂಡಿದ್ದರು. ಉಳಿದ ಕಂಪನಿಗಳು ಅದೇ ದರಕ್ಕೆ ಔಷಧಿ ಪೂರೈಸಲು ಒಪ್ಪಲಿಲ್ಲ. ಈಗ ರಾಷ್ಟ್ರೀಯ ಔಷಧಿ ದರನಿಗದಿ ಪ್ರಾಧಿಕಾರದ (ಎನ್‌ಪಿಪಿಎ) ದರಪಟ್ಟಿಯಂತೆ ಪ್ರತಿ ವಯಲ್‌ಗೆ ₹ 1,586ರ ದರದಲ್ಲಿ ರೆಮ್‌ಡಿಸಿವಿರ್‌ ಖರೀದಿ ಮಾಡಲಾಗುತ್ತಿದೆ.

802 ಟನ್ ಆಮ್ಲಜನಕ ಪೂರೈಸಿ: ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ರಾಜ್ಯಕ್ಕೆ ಹಂಚಿಕೆ ಮಾಡಲು ಕೊಟ್ಟಿರುವ ಒಪ್ಪಿಗೆಯಂತೆ ದಿನಕ್ಕೆ 802 ಟನ್ ಆಮ್ಲಜನಕ ಪೂರೈಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

‘ಆಮ್ಲಜನಕ ಕೊರತೆ ಬಗ್ಗೆ ಇದೇ 24ರಂದು ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಲಾಗಿದೆ’ ಎಂದು ರಾಜ್ಯ ಸರ್ಕಾರ ಸಲ್ಲಿಸಿದ ವಿವರಣೆ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಶೇಷ ವಿಭಾಗೀಯ ಪೀಠ ಈ ಆದೇಶ ನೀಡಿತು. ‘ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಪೂರೈಕೆಯ ಕೊರತೆ ಆತಂಕಕಾರಿ ವಿಷಯ’ ಎಂದೂ ಪೀಠ ಹೇಳಿತು.

ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಕೊರತೆ ಇದೆ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ) ಅಧ್ಯಕ್ಷ ಡಾ. ಎಚ್‌.ಎಂ. ಪ್ರಸನ್ನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘ಅಗತ್ಯ ಇರುವ ಪ್ರಮಾಣಕ್ಕಿಂತ ಶೇ 50ರಷ್ಟು ಕಡಿಮೆ ಆಮ್ಲಜನಕ ಮತ್ತು ಶೇ 25ರಷ್ಟು ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ’ ಎಂದು ಹೇಳಿದರು.

ಈ ನಡುವೆ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ ರಾಜ್ಯ ಸರ್ಕಾರ, ‘ಏ.30ರ ವೇಳೆಗೆ 3,24,944 ಸೋಂಕಿತರಿಗೆ ಪೂರೈಸಲು ದಿನಕ್ಕೆ 1,471 ಟನ್ ಆಮ್ಲಜನಕ ಅಗತ್ಯವಿದೆ. ಆದರೆ, ಸ್ಥಳೀಯ ಉತ್ಪಾದನಾ ಸಾಮರ್ಥ 812 ಟನ್ ಇದೆ. ರಾಜ್ಯಕ್ಕೆ ದಿನಕ್ಕೆ 600 ಟನ್ ಆಮ್ಲಜನಕ ಕೊರತೆ ಇದೆ. 802 ಟನ್‌ ಆಮ್ಲಜನಕ ಪೂರೈಸಲು ಕೇಂದ್ರ ಸರ್ಕಾರ ಒಪ್ಪಿದೆ’ ಎಂದು ತಿಳಿಸಿತು.

‘ರಾಜ್ಯಕ್ಕೆ ಹಂಚಿಕೆ ಮಾಡಿರುವ ಆಮ್ಲಜನಕವನ್ನು ಪೂರೈಸಬೇಕು’ ಕೇಂದ್ರ ಸರ್ಕಾರಕ್ಕೆ ‍ಪೀಠ ನಿರ್ದೇಶನ ನೀಡಿತು. ಬೆಂಗಳೂರಿನ ಕಮಾಂಡೊ ಆಸ್ಪತ್ರೆ ಮತ್ತು ಇತರ ಆಸ್ಪತ್ರೆಗಳಲ್ಲಿ ಕೆಲ ಹಾಸಿಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಪಡೆದುಕೊಳ್ಳಲು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿತು.

ಕೋವಿಡ್‌ ರೋಗಿಗಳಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಹಾಸಿಗೆ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿಲ್ಲ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

***

ರಾಜ್ಯಕ್ಕೆ ತಕ್ಷಣ 30,000 ವಯಲ್‌ ರೆಮ್‌ಡೆಸಿವಿರ್‌ ಪೂರೈಕೆ ಆಗಬೇಕಿದೆ. ಇಷ್ಟು ಪ್ರಮಾಣದ ಚುಚ್ಚುಮದ್ದು ಪೂರೈಕೆ ಆದರೆ ಕೊರತೆಯನ್ನು ಸರಿಪಡಿಸಲು ಸಾಧ್ಯವಾಗಲಿದೆ.
-ಕೆ.ವಿ. ತ್ರಿಲೋಕಚಂದ್ರ, ಆರೋಗ್ಯ ಇಲಾಖೆ ಆಯುಕ್ತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು