ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಕ್ರಮ: ‘ವಾರಾಂತ್ಯ ಕರ್ಫ್ಯೂ’ ಯಶಸ್ವಿ

Last Updated 24 ಏಪ್ರಿಲ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ‘ವಾರಾಂತ್ಯ ಕರ್ಫ್ಯೂ’ಗೆ ಜನರಿಂದ ಶನಿವಾರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕರ್ಫ್ಯೂ ಅವಧಿಯಲ್ಲಿ ರಾಜ್ಯದಾದ್ಯಂತ ಪ್ರಮುಖ ವೃತ್ತಗಳು, ರಸ್ತೆಗಳು, ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ವ್ಯಾಪಾರ– ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ಬೆಳಿಗ್ಗೆ 6 ಗಂಟೆಯಿಂದ 10ರವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಮನೆಯಿಂದ ಹೊರಬಂದವರು, ನಿಗದಿತ ಸಮಯ ಸಮೀಪಿಸುತ್ತಿದ್ದಂತೆ ಮನೆ ಸೇರಿಕೊಂಡಿದ್ದಾರೆ. ತೆರೆದಿದ್ದ ಮಾರುಕಟ್ಟೆಗಳನ್ನು ಪೊಲೀಸರು ಮುಚ್ಚಿಸಿದರು.

ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಗಳೂರು, ಉಡುಪಿ, ‌ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಕಲಬುರ್ಗಿ, ಬೀದರ್, ಹಾಸನ, ಚಿಕ್ಕಮಗಳೂರು, ಸೇರಿದಂತೆ ಬಹುತೇಕ ಕಡೆ ಜನರ ಓಡಾಟ ತೀರಾ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಿದರೂ ಪ್ರಯಾಣಿಕರೇ ಇರಲಿಲ್ಲ. ಕೆಲವು ಕಡೆಗಳಲ್ಲಿ ಮಾರುಕಟ್ಟೆಗಳಿಂದ ಗ್ರಾಹಕರನ್ನು ಹೊರಗೆ ಕಳುಹಿಸಿ, ಪ್ರವೇಶಿಸುವ ಮಾರ್ಗಕ್ಕೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದರು.

ಬೆಂಗಳೂರು ನಗರದಲ್ಲಿ ಅಘೋಷಿತ ಲಾಕ್ ಡೌನ್ ಸ್ಥಿತಿ ನಿರ್ಮಾಣವಾಗಿತ್ತು. ಅನಗತ್ಯವಾಗಿ ರಸ್ತೆಗಿಳಿದರೆ ಲಾಠಿ ಚಾರ್ಜ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದರು. ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ತಡೆದು ಪೊಲೀಸರು ವಶಕ್ಕೆ ಪಡೆದರು. ಕೆಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿ, ಖಡಕ್ ಎಚ್ಚರಿಕೆ ನೀಡಿದರು.

‘ವಾರಾಂತ್ಯದ ಕರ್ಫ್ಯೂ’ ಪರಿಸ್ಥಿತಿ ಅರಿಯಲು ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದರು. ಮಹಿಳೆಯೊಬ್ಬರು ಮಾಸ್ಕ್ ಧರಿಸದೆ ಇರುವುದನ್ನು ಗಮನಿಸಿದ ಸಚಿವರು, ಆ ಮಹಿಳೆಗೆ ಮಾಸ್ಕ್ ನೀಡಿ, ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ, ‘ರಾಜ್ಯದ ಜನರು ಮತ್ತು ವ್ಯಾಪಾರಸ್ಥರು ವಾರಾಂತ್ಯದ ಕರ್ಫ್ಯೂಗೆ ಸಹಕರಿಸಿದ್ದಾರೆ. ಭಾನುವಾರ ಕೂಡಾ ಇದೇ ರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇನೆ’ ಎಂದರು.

**

ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ಮತ್ತು ಲಸಿಕೆ ನೀತಿ ಬಗ್ಗೆ ಚರ್ಚೆ ನಡೆಯಲಿದೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT