ಗುರುವಾರ , ಆಗಸ್ಟ್ 11, 2022
28 °C
ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದ ಸಿಎಂ ಮಗ, ಸೊಸೆ

ನಂಜನಗೂಡು: ನಿರ್ಬಂಧದ ನಡುವೆಯೂ ವಿಜಯೇಂದ್ರ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪತ್ನಿ ಸಮೇತರಾಗಿ ಮಂಗಳವಾರ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ 8 ಗಂಟೆ ಹೊತ್ತಿಗೆ ದೇಗುಲಕ್ಕೆ ಬಂದ ವಿಜಯೇಂದ್ರ ದಂಪತಿ, ಅರ್ಧ ಗಂಟೆ ಶ್ರೀಕಂಠೇಶ್ವರನ ಗರ್ಭಗುಡಿಯಲ್ಲಿದ್ದು, ವಿವಿಧ ಪೂಜೆ ಸಲ್ಲಿಸಿದರು ಎಂದು ಅರ್ಚಕರು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್‌ ಪೀಡಿತರಾಗಿದ್ದರು. ವಿಜಯೇಂದ್ರ ಸಹ ಸೋಂಕಿತರಾಗಿದ್ದರು. ತಂದೆ–ಮಗ ಇಬ್ಬರೂ ಗುಣಮುಖರಾಗಿದ್ದರಿಂದ ಶ್ರೀಕಂಠೇಶ್ವರನಿಗೆ ಹರಕೆ ತೀರಿಸಿದರು ಎಂದು ದೇಗುಲದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಪಿಲೆ ತಟದಲ್ಲೂ ಪೂಜೆ: ಇದಕ್ಕೂ ಮುನ್ನ ವಿಜಯೇಂದ್ರ ದಂಪತಿ ಕಪಿಲಾ ನದಿ ತಟದಲ್ಲೂ ಪೂಜೆ ಸಲ್ಲಿಸಿದರು.

ಹದಿನಾರು ಕಾಲು ಮಂಟಪದ ಬಳಿ ಹೊಸದಾಗಿ ನಿರ್ಮಿಸಿರುವ ಸೋಪಾನದ ಸಮೀಪ ಸಪ್ತ ನದಿ ಪೂಜೆ ಮಾಡಿದರು. ಕೋವಿಡ್‌–19 ನಿಂದ ರಾಜ್ಯವನ್ನು ರಕ್ಷಿಸುವಂತೆ ಕಪಿಲೆಗೆ ಬಾಗಿನ ಅರ್ಪಿಸಿದರು. ನದಿಯ ತಟದಲ್ಲೇ, ಮನೆ ದೈವ ಎಡೆಯೂರು ಸಿದ್ದಲಿಂಗೇಶ್ವರ, ಶ್ರೀಕಂಠೇಶ್ವರ–ಪಾರ್ವತಿ ದೇವಿ ಪ್ರತಿಷ್ಠಾಪಿಸಿ ಕೃಷ್ಣಜೋಯಿಸ್‌ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರ ಆಕ್ರೋಶ: ಸೋಂಕು ಮತ್ತೆ ತೀವ್ರವಾಗಿ ಹರಡಲಾರಂಭಿಸುತ್ತಿದ್ದಂತೆ ಶ್ರೀಕಂಠೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ದೈನಂದಿನ ಪೂಜೆ ಸಲ್ಲಿಸಲು ಅರ್ಚಕ ಸಮೂಹಕ್ಕಷ್ಟೇ ಅವಕಾಶವಿತ್ತು. ಆದರೆ, ಭಕ್ತರಿಗೆ ನಿರ್ಬಂಧವಿರುವ ಅವಧಿಯಲ್ಲೇ ವಿಜಯೇಂದ್ರ ದಂಪತಿ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಗುಲದ ಆಡಳಿತ ಮಂಡಳಿ ನಿರ್ಧಾರವನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಟೀಕೆ ವ್ಯಕ್ತವಾಗಿದೆ.

ವಿಜಯೇಂದ್ರ ದಂಪತಿ ಪೂಜೆಗೆ ಯಡಿಯೂರಪ್ಪ ತಂಗಿಯ ಪುತ್ರ, ಮೈಮುಲ್‌ ನಾಮನಿರ್ದೇಶಿತ ಸದಸ್ಯ ಎಸ್‌.ಸಿ.ಅಶೋಕ್‌, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಎನ್‌.ಆರ್‌.ಕೃಷ್ಣಪ್ಪಗೌಡ ಸಾಥ್‌ ನೀಡಿದ್ದರು ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ತೆಗೆದ ಫೋಟೊಗಳನ್ನು ಡಿಲಿಟ್‌ ಮಾಡಿಸಿದರು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು