ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಾಲ್ಕನೇ ಅಲೆ ಸಾಧ್ಯತೆ: ಮಾಸ್ಕ್‌ ಕಡ್ಡಾಯ, ಉಗುಳಿದರೆ ದಂಡ

ತಜ್ಞರು, ಅಧಿಕಾರಿಗಳ ಜತೆ ಬೊಮ್ಮಾಯಿ ಚರ್ಚೆ
Last Updated 25 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಾಲ್ಕನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದೂ ಸೇರಿ ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾಂತ್ರಿಕ ಸಲಹಾ ಸಮಿತಿ ನಿರ್ಧರಿಸಿದೆ.

ದೆಹಲಿ, ಹರಿಯಾಣ ಮತ್ತು ತಮಿಳುನಾಡಿನಲ್ಲಿ ಕೋವಿಡ್‌ ಪ್ರಮಾಣ ಏರಿಕೆ ಆಗಿರುವ ಬೆನ್ನಲ್ಲೇ ಈ ಸಭೆ ನಡೆಯಿತು. ಸಭೆ ಮುಗಿದ ಕೂಡಲೇ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಅವರು ಈ ಕುರಿತ ಮಾರ್ಗಸೂಚಿಯನ್ನೂ ಹೊರಡಿಸಿದ್ದಾರೆ.

‘ರಾಜ್ಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಎಷ್ಟು ದಂಡ ವಿಧಿಸಬೇಕು ಎಂಬ ಬಗ್ಗೆ ಸ್ಥಳೀಯ ಆಡಳಿತಗಳು ಕಾನೂನಿನ ಅನ್ವಯ ಪ್ರತ್ಯೇಕ ಆದೇಶ ಹೊರಡಿಸಬೇಕು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದಆರೋಗ್ಯ ಸಚಿವ ಡಾ. ಕೆ.ಸುಧಾಕರ್, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಕೋವಿಡ್‌ ದೃಢ ಪ್ರಮಾಣ ಶೇ 1.9 ರಷ್ಟಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ಕೋವಿಡ್‌ ಹರಡದಂತೆ ವಿಶೇಷ ನಿಗಾ ಇಡಲು ತೀರ್ಮಾನಿಸಲಾಗಿದೆ. ಮೇಲ್ವಿಚಾರಣೆ ಮತ್ತು ಚಿಕಿತ್ಸೆ ನೀಡುವ ಸಂಬಂಧ ಮಾರ್ಗಸೂಚಿ ಹೊರಡಿಸಲಾಗುವುದು’ ಎಂದರು.

‘ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಇನ್ನೂ ಕೋವಿಡ್‌ ಲಸಿಕೆ ತೆಗೆದುಕೊಳ್ಳದೇ ಇರುವವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಸೇರುತ್ತಿರುವವರಲ್ಲಿ ಇವರ ಸಂಖ್ಯೆಯೇ ಹೆಚ್ಚು. 60 ವರ್ಷ ಮೇಲ್ಪಟ್ಟವರಿಗೆಮೂರನೇ ಡೋಸ್‌ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಜನ ಮೂರನೇ ಡೋಸ್‌ ತೆಗೆದುಕೊಳ್ಳಲು ಬರುತ್ತಿಲ್ಲ. ನಾಲ್ಕನೇ ಅಲೆ ಬರುವ ತನಕ ಕಾಯುವುದು ಬೇಡ. ಆದಷ್ಟು ಬೇಗನೆ ತೆಗೆದುಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ’ ಎಂದು ಅವರು ಸಲಹೆ ನೀಡಿದರು.

ವಿದೇಶಿಯರ ಮೇಲೆ ನಿಗಾ: ದಕ್ಷಿಣ ಕೊರಿಯಾ, ಥೈಲ್ಯಾಂಡ್‌, ಜಪಾನ್‌ನಿಂದ ಬರುವವರ ಮೇಲೆ ವಿಮಾನನಿಲ್ದಾಣಗಳಲ್ಲಿ ವಿಶೇಷ ನಿಗಾ ಇರಿಸಲಾಗುವುದು. ಅಲ್ಲಿಂದ ಬಂದವರು ಮನೆಯಲ್ಲಿ ಇದ್ದಾಗಲೂ ನಿಗಾ ಇಡಲಾಗುವುದು. ಅವರ ಜತೆ ಸಂಪರ್ಕ ಇಟ್ಟುಕೊಳ್ಳುವುದರ ಜತೆಗೆ ಟೆಲಿಮಾನಿಟರಿಂಗ್ ಮೂಲಕ ಅಗತ್ಯ ಸಲಹೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ ಎಂದು ಡಾ.ಸುಧಾಕರ್‌ ತಿಳಿಸಿದರು.

ಈಗಿನ ಕೊರೊನಾ ತಳಿಯ ಬಗ್ಗೆ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದು ಯಾವ ತಳಿ ಎಂಬುದು ಆ ಬಳಿಕವೇ ಗೊತ್ತಾಗಲಿದೆ. ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರ ತಪಾಸಣೆ ಬಗ್ಗೆ ಏಪ್ರಿಲ್‌ 27ರ ಬಳಿಕ ಸಭೆ ನಡೆಸಲಾಗುತ್ತದೆ. ಪ್ರಧಾನಿಯವರು ಕೋವಿಡ್‌ ಕುರಿತ ಸಭೆಯನ್ನು ಮಾಡಿದ ಬಳಿಕ ಮತ್ತೊಂದು ಸಭೆ ನಡೆಸಲಾಗುವುದು. ಅಲ್ಲಿ ನೆರೆಯ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಹಾಜರಿದ್ದರು.

ಮಾರ್ಗಸೂಚಿಯಲ್ಲಿ ಏನಿದೆ?

* ಸಾರ್ವಜನಿಕ ಸ್ಥಳಗಳು, ಒಳಾಂಗಣ ಮತ್ತು ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್‌ ಕಡ್ಡಾಯ.

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ.

* ಸಾರ್ವಜನಿಕ ಪ್ರದೇಶಗಳಲ್ಲಿ ಎರಡು ಅಡಿ ಭೌತಿಕ ಅಂತರ ಕಾಯ್ದುಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT