ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಇಳಿಕೆ

Last Updated 2 ಆಗಸ್ಟ್ 2021, 23:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಮತ್ತು ಸೋಂಕು ದೃಢ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 22 ಸಾವಿರ (1.33 ಲಕ್ಷಕ್ಕೆ) ಕಡಿಮೆಯಾಗಿವೆ. ಹೊಸ ಪ್ರಕರಣಗಳು 590 ಇಳಿಕೆಯಾಗಿದೆ. ಸೋಂಕು ದೃಢಪ್ರಮಾಣ ಶೇ 1.2 ರಿಂದ ಶೇ 0.9ಕ್ಕೆ ಇಳಿಕೆಯಾಗಿದ್ದು, ಮರಣ ದರ ಶೇ 1.9ರಷ್ಟಿದೆ.

ಸೋಮವಾರ ಹೊಸದಾಗಿ 1,285 ಮಂದಿಗೆ ಸೋಂಕು ತಗುಲಿದ್ದರೆ, 25 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 1,383 ಮಂದಿ ಗುಣಮುಖರಾಗಿದ್ದಾರೆ.

ಜುಲೈ 25 ರಂದು ಸೋಂಕು ಹೊಸ ಪ್ರಕರಣಗಳು 1,001ಕ್ಕೆ ತಗ್ಗಿದ್ದವು. ಕ್ರಮೇಣ ಹೆಚ್ಚಾಗುತ್ತಾ ಎರಡು ಸಾವಿರದಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಸೋಮವಾರ ಒಮ್ಮೆಗೆ 1,300 ಆಸುಪಾಸಿಗೆ ತಗ್ಗಿವೆ.

ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಹೊಸ ಪ್ರಕರಣಗಳು ಶೇ 50ಕ್ಕಿಂತ ಕಡಿಮೆ ಇಳಿದಿವೆ. ಸೋಂಕು ಪರೀಕ್ಷೆಗಳು 20 ಸಾವಿರದಷ್ಟು ಕಡಿಮೆಯಾಗಿರುವುದೂ, ಹೊಸ ಪ್ರಕರಣಗಳಲ್ಲಿ ಇಳಿಕೆ ಕಾಣಲು ಕಾರಣವಾಗಿರಬಹುದು.

ಮೊದಲ ಮತ್ತು ಎರಡನೇ ಅಲೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 29.08 ಲಕ್ಷಕ್ಕೆ ಹೆಚ್ಚಳವಾಗಿದ್ದು, ಸೋಂಕಿತರ ಪೈಕಿ ಈಗಾಗಲೇ 28.47 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು 24,021 ಇವೆ. ಈವರೆಗೆ 36,612 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಮೂರು ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು:ಬೆಂಗಳೂರು ನಗರದಲ್ಲಿ ಹೊಸದಾಗಿ 290, ದಕ್ಷಿಣ ಕನ್ನಡ 219, ಉಡುಪಿ 135, ಮೈಸೂರು 102 ಮಂದಿಗೆ ಸೋಂಕು ತಗುಲಿದೆ. ಕೊಡಗಿನಲ್ಲಿ 81, ಹಾಸನದಲ್ಲಿ 91 ಸೋಂಕಿತರು ಪತ್ತೆಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಇವೆ. 14 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗಿವೆ.

20 ಜಿಲ್ಲೆಗಳಲ್ಲಿ ಕೋವಿಡ್‌ ಸಾವು ವರದಿಯಾಗಿಲ್ಲ. ಬೆಂಗಳೂರಿನಲ್ಲಿ ಹೆಚ್ಚು ಅಂದರೆ 5, ದಕ್ಷಿಣ ಕನ್ನಡ ಮತ್ತು ಮೈಸೂರು ತಲಾ 4 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT