ಗುರುವಾರ , ಮೇ 26, 2022
28 °C

ಸಲಹಾ ಸಮಿತಿ ಅನುಮತಿ ನೀಡಿದರೆ ತರಗತಿ ಮತ್ತೆ ಆರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ತರಗತಿಗಳನ್ನು ಮತ್ತೆ ತೆರೆಯಲಾಗುವುದು‘ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನಂತೆ ಕೆಲ ನಗರಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಶುಕ್ರವಾರದ ಸಭೆಯಲ್ಲಿ ಸಮಿತಿ ಸಲಹೆಯಂತೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ನಡೆಸುವುದೇ ಸೂಕ್ತ. ಶಾಲೆಯಲ್ಲಿ ಕಲಿತರೆ ಹೆಚ್ಚು ಪರಿಣಾಮಕಾರಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದೂ ಹೇಳಿದರು.

‘ಮಕ್ಕಳಿಗೆ ತೊಂದರೆ ಕೊಟ್ಟು ನಾವು ಶಾಲೆ ಆರಂಭಿಸುವ ಉದ್ದೇಶವಿಲ್ಲ. ಮಕ್ಕಳ ಆರೋಗ್ಯ ಆಧರಿಸಿ ಶಾಲಾ-ಕಾಲೇಜುಗಳನ್ನು ಮುಚ್ಚಿದ್ದೆವು. ಈಗ ತೆರೆಯಲು ಯಾರಿಂದಲೂ ಒತ್ತಡವೂ ಇಲ್ಲ’ ಎಂದರು.

‘ಪ್ರಸ್ತುತ 1ರಿಂದ 5 ವರ್ಷದೊಳಗಿನ 2,250, 5 ರಿಂದ 10ರ ಒಳಗಿನ 6,762 ವಿದ್ಯಾರ್ಥಿಗಳು, ಪದವಿಪೂರ್ವ ಹಂತದ 166 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ’ ಎಂದು ಮಾಹಿತಿ ನೀಡಿದರು.

ಫೆಬ್ರುವರಿಗೆ ಮುಕ್ತಾಯ: ‘ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಕೆಲವು ದಿನಗಳ ಹಿಂದೆ ತಾಂತ್ರಿಕ ಕಾರಣಗಳಿಂದ ಸ್ವಲ್ಪ ಸಮಸ್ಯೆ ಆಗಿತ್ತು. ಮೂರು ದಿನಗಳ ಹಿಂದೆ ಸರ್ವರ್ ತೊಂದರೆಯಿಂದ ಮುಂದೂಡಲಾಗಿತ್ತು. ಈಗ ಎಲ್ಲ ಪ್ರಕ್ರಿಯೆಗಳು ಸರಿದಾರಿಗೆ ಬಂದಿದೆ. ಫೆಬ್ರುವರಿ ಒಳಗೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಕ್ತಾಯ ಆಗಲಿದೆ’ ಎಂದರು.

ಕೋವಿಡ್: ಮಾಹಿತಿಗೆ 14 ಮಂದಿ ವಕ್ತಾರರು

ಬೆಂಗಳೂರು: ಕೋವಿಡ್‌ಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಲು ಆರೋಗ್ಯ ಇಲಾಖೆಯು 14 ಮಂದಿ ವೈದ್ಯರನ್ನು ವಕ್ತಾರರನ್ನಾಗಿ ನೇಮಿಸಿದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್, ಕ್ಲಿನಿಕಲ್ ತಜ್ಞರ ಸಮಿತಿ ಅಧ್ಯಕ್ಷ ಡಾ.ಕೆ. ರವಿ, ಸದಸ್ಯರಾದ ಡಾ.ಸಿ.ಎನ್.ಮಂಜುನಾಥ್, ಡಾ.ಸಿ.ನಾಗರಾಜ್, ಡಾ.ಬಸವರಾಜ್, ಡಾ.ಪ್ರದೀಪ್ ರಂಗಪ್ಪ, ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಡಾ.ವಿ.ರವಿ, ಡಾ.ಬಿ.ಎಲ್.ಶಶಿಭೂಷಣ್, ಡಾ.ಗಿರಿಧರ್ ಬಾಬು, ಡಾ.ಶಿವಾನಂದ, ಡಾ.ಸವಿತಾ ಜಿ., ಶ್ವಾಸಕೋಶ ತಜ್ಞರಾದ ಡಾ. ಸತ್ಯನಾರಾಯಣ ಮೈಸೂರು, ಡಾ. ರವೀಂದ್ರ ಮೆಹ್ತಾ ಹಾಗೂ ಮಕ್ಕಳ ತಜ್ಞ ಡಾ. ವಿಶ್ವನಾಥ್ ಕಾಮೋಜಿ ಅವರು ವಕ್ತಾರರಾಗಿ ನೇಮಕಗೊಂಡಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು