Covid-19 Karnataka Update: ಆರು ತಿಂಗಳಲ್ಲೇ ಅತಿ ಕಡಿಮೆ ಮರಣ

ಬೆಂಗಳೂರು: ಕೋವಿಡ್ ಪೀಡಿತರಲ್ಲಿ 5 ಮಂದಿ ಮೃತಪಟ್ಟಿರುವುದು ಭಾನುವಾರ ದೃಢಪಟ್ಟಿದೆ. ಆರು ತಿಂಗಳಲ್ಲಿಯೇ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಅತಿ ಕಡಿಮೆ ಮರಣ ಪ್ರಕರಣಗಳು ಇವಾಗಿವೆ.
ರಾಜ್ಯದಲ್ಲಿ ಹೊಸದಾಗಿ 1,194 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.09 ಲಕ್ಷ ದಾಟಿದೆ. ಈ ತಿಂಗಳು 20 ದಿನಗಳಲ್ಲಿ 24,573 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 1,228 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಒಂದೇ ದಿನ 96 ಸಾವಿರ ಆರ್‌ಟಿ–ಪಿಸಿಆರ್ ಸೇರಿದಂತೆ 1.10 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 1.30 ಕೋಟಿ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಕೋವಿಡ್ ಪೀಡಿತರಲ್ಲಿ 1,062 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 8.82 ಲಕ್ಷಕ್ಕೆ ತಲುಪಿದೆ. ಸದ್ಯ 14,497 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 219 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದ ಜ್ವರ ಚಿಕಿತ್ಸಾಲಯಗಳಲ್ಲಿ ಈವರೆಗೆ 32.70 ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಬೆಂಗಳೂರಿನಲ್ಲಿ 659 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.82 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 75 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 51,807ಕ್ಕೆ ತಲುಪಿದೆ. ತುಮಕೂರಿನಲ್ಲಿ 39, ಬೆಂಗಳೂರು ಗ್ರಾಮಾಂತರದಲ್ಲಿ 36, ಮಂಡ್ಯದಲ್ಲಿ 34, ದಕ್ಷಿಣ ಕನ್ನಡದಲ್ಲಿ 33 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ 27 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿಲ್ಲ.
Today's Media Bulletin 20/12/2020.
Please click on the link below to view bulletin.https://t.co/Jxl8q8mY1c pic.twitter.com/AmJgadbhUx— K'taka Health Dept (@DHFWKA) December 20, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.