ಭಾನುವಾರ, ಏಪ್ರಿಲ್ 2, 2023
31 °C
30 ದಿನಗಳಲ್ಲಿ 20.74 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿಬಿಟಿ

ಆರ್ಥಿಕ ಪ್ಯಾಕೇಜ್‌: 2.92 ಲಕ್ಷ ಕಾರ್ಮಿಕರಿಗೆ ಜಮೆ ಆಗದ ಪರಿಹಾರ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವವರಿಗೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‌ನಡಿ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವರ್ಗದ 20.74 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕೇವಲ 30 ದಿನಗಳಲ್ಲಿ ಕಾರ್ಮಿಕ ಇಲಾಖೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡಿದೆ. ಆ ಪೈಕಿ, ಆಧಾರ್‌ ಸಂಖ್ಯೆ ಸರಿ ಇಲ್ಲದ ಕಾರಣಕ್ಕೆ 2.92 ಲಕ್ಷ ಕಾರ್ಮಿಕರ ಖಾತೆಗಳಿಗೆ ಹಣ ಜಮೆ ಆಗಿಲ್ಲ. 

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಖಾತೆಗಳಿಗೆ ತಲಾ ₹ 3 ಸಾವಿರ ಪರಿಹಾರ ಮೊತ್ತ ಡಿಬಿಟಿ ಮಾಡಲಾಗಿದೆ. ಟೈಲರ್‌ಗಳು, ಗೃಹ ಕಾರ್ಮಿಕರು, ಹಮಾಲರು, ಮೆಕ್ಯಾನಿಕ್‌ಗಳು, ಕುಂಬಾರರು, ಅಗಸರು, ಕಮ್ಮಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಕ್ಷೌರಿಕರು, ಅಕ್ಕಸಾಲಿಗರು, ಚಿಂದಿ ಆಯುವವರು ಈ 11 ವರ್ಗಗಳ ಫಲಾನುಭವಿಗಳಿಗೆ ತಲಾ ₹ 2 ಸಾವಿರದಂತೆ ನೆರವು ನೀಡಲಾಗುತ್ತಿದೆ. ಈ ಪ್ರಕ್ರಿಯೆಗೆ ಜೂನ್‌ 5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದರು.

‘ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಪರಿಹಾರ ಹಣವನ್ನು ಕಾರ್ಮಿಕರ ಬ್ಯಾಂಕ್‌ ಖಾತೆ ಆಧರಿಸಿ ಜಮೆ ಮಾಡಲಾಗಿತ್ತು. ಇಲಾಖೆಯಲ್ಲಿ ನೋಂದಾಯಿತ ಮತ್ತು ಜಿಲ್ಲಾ ಮಟ್ಟದಲ್ಲಿ ನೋಂದಾಯಿತ ಖಾತೆಗಳಿಗೆ ಹಣ ಜಮೆ ಮಾಡಿದ್ದರಿಂದ ಗೊಂದಲ ಉಂಟಾಗಿತ್ತು. ಪರಿಹಾರ ಹಣವನ್ನು ಪಾರದರ್ಶಕವಾಗಿ ವಿತರಿಸುವ ಉದ್ದೇಶದಿಂದ ಬ್ಯಾಂಕ್‌ ಖಾತೆಗೆ ಜೋಡಣೆಯಾದ ಆಧಾರ್‌ ಸಂಖ್ಯೆ ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ (ಯುಐಡಿ) ಪರವಾನಗಿ ಪಡೆಯಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷಾ ತಿಳಿಸಿದರು.

‘ಇನ್ನೂ ₹ 205.78 ಕೋಟಿ ಬೇಕು’: ‘ಅಸಂಘಟಿತ ವಲಯದ 11 ವರ್ಗಗಳಲ್ಲಿ ಸೇವಾ ಸಿಂಧು ಪೋರ್ಟಲ್‌ ಮೂಲಕ ಈವರೆಗೆ (ಜುಲೈ 5) 9.80 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಅಲ್ಲದೆ, ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿತ 3.59 ಲಕ್ಷ ಕಾರ್ಮಿಕರು ಸೇರಿ ಒಟ್ಟು 13.39 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿವೆ. ಅಷ್ಟೂ ಕಾರ್ಮಿಕರಿಗೆ ₹ 2 ಸಾವಿರದಂತೆ ಪರಿಹಾರ ನೀಡಲು ₹ 267.73 ಕೋಟಿ ಬೇಕಾಗಿದೆ. 3.10 ಲಕ್ಷ ಮಂದಿಗೆ ಪರಿಹಾರ ನೀಡಲು ₹ 61.95 ಕೋಟಿ ಸರ್ಕಾರ ನೀಡಿದ್ದು, ಇನ್ನೂ 10.29 ಲಕ್ಷ ಮಂದಿಗೆ ನೀಡಲು ₹ 205.78 ಕೋಟಿ ಹೆಚ್ಚುವರಿಯಾಗಿ ಬೇಕಾಗಿದೆ. ಅರ್ಜಿ ಸಲ್ಲಿಸಲು ಇದೇ 31 ಕೊನೆಯ ದಿನವಾಗಿದ್ದು, ಇನ್ನೂ 5 ಲಕ್ಷದಿಂದ 6 ಲಕ್ಷ ಅರ್ಜಿ ಸಲ್ಲಿಯಾಗುವ ನಿರೀಕ್ಷೆ ಇದೆ’ ಎಂದು ಅಕ್ರಂ ಪಾಷಾ ತಿಳಿಸಿದರು.

*
ಈ ಬಾರಿ ಆಧಾರ್‌ ನಂಬರ್‌ ಆಧರಿಸಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಪರಿಹಾರ ಮೊತ್ತ ಡಿಬಿಟಿ ಮಾಡಲಾಗಿದೆ. ಹೀಗಾಗಿ ಗೊಂದಲ ಇಲ್ಲದೆ ಹಣ ವರ್ಗಾವಣೆ ಸಾಧ್ಯವಾಗಿದೆ.
-ಅಕ್ರಂ ಪಾಷಾ, ಆಯುಕ್ತ, ಕಾರ್ಮಿಕ ಇಲಾಖೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು