ಸೋಮವಾರ, ಅಕ್ಟೋಬರ್ 18, 2021
22 °C

ಬದುಕು ಬೀದಿಗೆ ತಂದ ಕೋವಿಡ್‌| ಪ್ರವಾಸ ನೆಚ್ಚಿಕೊಂಡವರ ಬದುಕು ಪ್ರಯಾಸ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪ್ರವಾಸಿ ಗೈಡ್‌ ಆಗಿರುವ ನನ್ನ ತಮ್ಮ 2019ರ ಡಿಸೆಂಬರ್‌ನಲ್ಲಿ ಅಪಘಾತವಾಗಿ ಮುಂಗೈ ಕಳೆದುಕೊಂಡ. ಇದ್ದ ಹಣವೆಲ್ಲವೂ ಒಂದೆರಡು ತಿಂಗಳಲ್ಲೇ ಖರ್ಚಾಯಿತು. ದಿಢೀರನೆ ಎದುರಾದ ಲಾಕ್‌ಡೌನ್‌ನಲ್ಲಿ ಕೆಲಸವೂ ಇಲ್ಲದ ಆತನಿಗೆ ನನ್ನ ತಾಯಿ ತಮ್ಮ ವೃದ್ಧಾಪ್ಯ ವೇತನ ಕೊಟ್ಟರು. ನನ್ನ ದುಡಿಮೆಯ ಕೊಂಚ ಹಣವನ್ನೂ ಕೊಟ್ಟೆ. ಶಾಲೆ ತೆರೆಯದ ಕಾರಣ ಮಕ್ಕಳ ಶುಲ್ಕ ಪಾವತಿಸುವ ಕಷ್ಟದಿಂದ ಆತ ಬಚಾವಾದ. ನನ್ನ ಪತ್ನಿ ಶಿಕ್ಷಕಿಯಾಗಿರುವುದರಿಂದ ನಮ್ಮ ಜೀವನ ಹೇಗೋ ನಡೆಯಿತು...’

– ಬಾಗಲಕೋಟೆ ಜಿಲ್ಲೆಯ ಬಾದಾಮಿ–ಪಟ್ಟದಕಲ್ಲು ಪ್ರವಾಸಿ ಗೈಡ್‌ ಚಂದ್ರಗುಂಡ ಕಟಗೇರಿ, ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ಕುಟುಂಬದ ಕಷ್ಟಗಳನ್ನು ಸಂಕಟದಿಂದಲೇ ಬಿಡಿಸಿಟ್ಟರು.

‘ಅಸಂಘಟಿತರಾಗಿರುವ ನಮಗೆ ಗೈಡ್ ಕೆಲಸ ಬಿಟ್ಟರೆ ಬೇರೆ ಉದ್ಯೋಗ ವಿಲ್ಲ. ಲಾಕ್‌ಡೌನ್‌ನಲ್ಲಿ ಎಲ್ಲರಿಗೂ ನೆರವಾದ ಸರ್ಕಾರ ನಮ್ಮನ್ನು ಮರೆತಿತ್ತು. ಸುಧಾಮೂರ್ತಿ ₹ 10 ಸಾವಿರ ಕೊಟ್ಟು ನೆರವಾದರು. 15 ದಿನಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ₹ 5 ಸಾವಿರ ಬಂತು. ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಆ ಹಣವೂ ಬಂದಿಲ್ಲ. ಒಂದೂವರೆ ವರ್ಷದಿಂದ ನಮ್ಮ ಪಾಡು ಕೇಳೋರೇ ಇರಲಿಲ್ಲ’ ಎಂದು ಮೌನಕ್ಕೆ ಜಾರಿದರು.

2020ರ ಮಾರ್ಚ್‌ನಿಂದ 2021ರ ಏಪ್ರಿಲ್‌ವರೆಗೆ ಅವರಿಗೆ ಕೇವಲ 36 ದಿನ ಗೈಡ್‌ ಕೆಲಸ ಸಿಕ್ಕಿದೆ. ಲಾಕ್‌ಡೌನ್‌ಗೂ ಮೊದಲು 250 ದಿನ ಕೆಲಸವಿರುತ್ತಿತ್ತು. ಮೊದಲ ಅಲೆಯಲ್ಲಿ 4 ತಿಂಗಳು, 2ನೇ ಅಲೆಯಲ್ಲಿ ಎರಡು ತಿಂಗಳು ಸ್ಮಾರಕಗಳು ಮುಚ್ಚಿದ್ದವು. ಬಳಿಕ ತೆರೆದರೂ ಪ್ರವಾಸಿಗರು ನಿರೀಕ್ಷೆಯಂತೆ ಬರುತ್ತಿಲ್ಲ.

ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಲ್ಲಿರುವ ಬಹುತೇಕ ಗೈಡ್‌ಗಳನ್ನು ಲಾಕ್‌ಡೌನ್‌ ಇಂಥದ್ದೇ ಶೋಚನೀಯ ಸ್ಥಿತಿಗೆ ತಳ್ಳಿದೆ. ಲಾಕ್‌ಡೌನ್‌ ತೆರವಾದ ಬಳಿಕವೂ ಸನ್ನಿವೇಶ ಸುಧಾರಿಸಿಲ್ಲ.

‘ಪ್ರವಾಸಿಗರಿಗೆ ವಸತಿಗೃಹಗಳು ಇನ್ನೂ ತೆರೆದಿಲ್ಲ. ವಿಮಾನಗಳಿಲ್ಲ. ಹೀಗಾಗಿ ವಿದೇಶಿ ಪ್ರವಾಸಿಗರೂ ಬರುತ್ತಿಲ್ಲ. ಸ್ಮಾರಕಗಳ ಪ್ರವೇಶ ಶುಲ್ಕವೂ ಹೆಚ್ಚಾಗಿದೆ. 9 ತಿಂಗಳಿಂದ ವಿವಿಧ ರಾಜ್ಯಗಳ ಪ್ರವಾಸಿಗರೂ ಬಂದಿಲ್ಲ. ಕೆಲಸವಿಲ್ಲದೆ ನಾನು ಉದ್ಯೋಗ ಖಾತ್ರಿ ಕೂಲಿಯಾಗಿದ್ದೆ’ ಎಂದು ಹಂಪಿಯ ಗೈಡ್‌ ಬಿ.ನಾಗರಾಜ್ ಹೇಳಿದರೆ, ‘ಬದುಕು ನಡೆಸಲು ಮನೆ ಮುಂದೆಯೇ ಮೊಟ್ಟೆ ವ್ಯಾಪಾರ’ ಮಾಡಿದೆ ಎಂದು ಚಿತ್ರದುರ್ಗದ ಗೈಡ್ ಬಿ.ಮೊಹಿದ್ದೀನ್ ವ್ಯಥೆಪಟ್ಟರು. ಕೆಲವರು ಗೈಡ್‌ ಕೆಲಸ ಬಿಟ್ಟಿರುವುದರಿಂದ, ಪ್ರವಾಸಿಗರು ಬಂದಾಗ ಹೋಟೆಲ್‌ ಮತ್ತು ಟ್ರಾವೆಲ್‌ ಏಜೆಂಟರು ಗೈಡ್‌ಗಳಿಗಾಗಿ ಪರದಾಡು ತ್ತಾರೆ. ಪ್ರವಾಸೋದ್ಯಮವೇ ಬಹುತೇಕರ ಬದುಕಾಗಿ ರುವ ಮೈಸೂರಿನಲ್ಲಿ ಟೂರಿಸ್ಟ್‌ ಏಜೆನ್ಸಿಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಅವರನ್ನೇ ನೆಚ್ಚಿಕೊಂಡಿದ್ದ ನೂರಾರು ಕಾರು ಚಾಲಕರ ಬದುಕು ಕೂಡ ಅತಂತ್ರವಾಗಿದೆ. ಹೋಟೆಲ್‌ಗಳೂ ಮುಚ್ಚಿದ್ದರಿಂದ ಅಲ್ಲಿನ ಕೆಲಸಗಾರರೂ ತೊಂದರೆ ಅನುಭವಿಸಿದ್ದಾರೆ.

ಟೂರಿಸ್ಟ್‌ ಏಜೆನ್ಸಿಯೊಂದರಲ್ಲಿ ವಾಹನ ಚಾಲಕರಾಗಿದ್ದ ನಗರದ ನಿವಾಸಿ ನಾಗೇಶ್‌ ಸ್ವಂತ ಏಜೆನ್ಸಿ ಶುರು ಮಾಡಬೇಕೆಂಬ ಹಂಬಲದಿಂದ ಬ್ಯಾಂಕಿನಿಂದ ಸಾಲ ಪಡೆದು ಕಾರನ್ನು ಖರೀದಿಸಿದ್ದರು. ಲಾಕ್‌ಡೌನ್‌ಗೂ ಮುಂಚೆ, ಉಳಿತಾಯದ ಹಣದಿಂದ ಇನ್ನೊಂದು ಕಾರನ್ನು ಖರೀದಿಸಿದ್ದರು. ಆದರೆ, ಪ್ರವಾಸಿ ಟ್ಯಾಕ್ಸಿ ಕೇಳುವವರೇ ಇಲ್ಲದಂತಾದಾಗ, ಕಾರಿನ ನಿರ್ವಹಣೆ ಮಾಡಲಾಗದೆ ಮಾರಾಟ ಮಾಡಬೇಕಾಯಿತು.

‘ಈಗಲೂ ಪ್ರವಾಸಿಗರು ಮೈಸೂರಿಗೆ ಬರುತ್ತಿಲ್ಲ. ಆಗೊಂದು ಈಗೊಂದು ಟೂರ್ ಕಾಲ್‌ ಬರುತ್ತಿದೆ. ಲಾಕ್‌ಡೌನ್‌ ನಂತರ ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡಿದ್ದೆ. ಆದರೆ, ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದೆ. ಸ್ಥಳೀಯ ಪ್ರವಾಸಿಗರೇ ಗತಿ ಎಂಬಂತಾಗಿದೆ’ ಎಂದು ವಿಷಾದಿಸಿದರು.

‘ಶನಿವಾರ–ಭಾನುವಾರವೇ ನಮಗೆ ಅನ್ನ ಸಿಗೋದು. ಆದರೆ, ವಾರಾಂತ್ಯ ಕರ್ಫ್ಯೂ ಅದಕ್ಕೂ ಕಲ್ಲು ಹಾಕಿತು’ ಎಂದು ಮೈಸೂರು ಅರಮನೆಯಲ್ಲಿ ಪ್ರವಾಸಿಗರ ಫೋಟೋ ತೆಗೆಯುವ ಜಟ್ಟಿ ರಾಜೀವ್, ಚಾಮರಾಜನಗರದ ಭರಚುಕ್ಕಿ ಜಲಪಾತದಲ್ಲಿ ಫೋಟೋ ತೆಗೆಯುವ ಶಂಕರ್ ವಿಷಾದಿಸಿದರು. ‘ಪ್ರವಾಸಿಗರು ಈಗೀಗ ಬರುತ್ತಿದ್ದಾರೆ. ಆದರೆ, ಅವರ ಬಳಿ ಮೊಬೈಲ್‌ ಫೋನ್‌ಗಳಿರುವುದರಿಂದ ನಮ್ಮ ಫೋಟೋ ಬೇಡ ಎನ್ನುವವರೇ ಹೆಚ್ಚು’ ಎಂದರು.

ಮುಚ್ಚಿದ ಅಂಗಡಿ, ಮುಚ್ಚದ ಬದುಕು

ಪ್ರವಾಸಿ ತಾಣಗಳ ರಸ್ತೆ ಬದಿ ವ್ಯಾಪಾರಿಗಳೂ ಲಾಕ್‌ಡೌನ್‌ನಿಂದ ಬಸವಳಿದಿದ್ದಾರೆ. ಪೂಜೆ ಸಾಮಗ್ರಿ, ಮಕ್ಕಳ ಅಟಿಕೆಗಳು, ಎಳೆನೀರು, ಐಸ್‌ಕ್ರೀಂ, ಜ್ಯೂಸ್, ಹಚ್ಚಿದ ಹಣ್ಣುಗಳನ್ನು ಮಾರಾಟ ಮಾಡುತ್ತಾ ದಿನದೂಡುತ್ತಿದ್ದ ಬಹುತೇಕರು ದಿನಗೂಲಿ ಕೆಲಸ ಮಾಡಿದ್ದಾರೆ. ಈಗಲೂ ಪ್ರವಾಸಿಗರು ಬಾರದೇ ಇರುವುದರಿಂದ ಅಂಗಡಿ ಬದುಕನ್ನು ನೆಚ್ಚಿಕೊಳ್ಳುವ ಭರವಸೆ ಹಲವರಿಗೆ ಇಲ್ಲ.

‘ಅಂಗಡಿ ಮುಚ್ಚಿದಂತೆ, ಬದುಕನ್ನು ಮುಚ್ಚೋಕೆ ಆಗದ ಪರಿಸ್ಥಿತಿಯಲ್ಲಿ ಏನೇನೋ ಕೆಲಸ ಮಾಡಿದೆವು’ ಎಂದು ಅರಮನೆ ಸಮೀಪದ ವ್ಯಾಪಾರಿ ರಹಮತ್‌ ಹೇಳಿದರು.

ಲಾಡ್ಜ್‌: ಅರ್ಧ ಬಾಡಿಗೆಯೂ ಭಾರ!

ಲಾಡ್ಜ್‌ಗಳನ್ನು ಬಾಡಿಗೆ ಆಧಾರದಲ್ಲಿ ನಡೆಸುವವರಿಗೆ ಕಷ್ಟದ ದಿನಗಳು ಇನ್ನೂ ಮುಗಿದಿಲ್ಲ. ಲಾಕ್‌ಡೌನ್‌ ಕಾರಣಕ್ಕೆ ಹಲವೆಡೆ ಲಾಡ್ಜ್‌ಗಳ ಮಾಲೀಕರು ಉದಾರ ಭಾವದಿಂದ ಒಪ್ಪಂದದ ಅರ್ಧ ಬಾಡಿಗೆಯನ್ನಷ್ಟೇ ಪಡೆಯಲು ಒಪ್ಪಿದ್ದಾರೆ. ಆದರೆ, ಆ ಮೊತ್ತವನ್ನು ಕೊಡಲೂ ಆಗದ ಪರಿಸ್ಥಿತಿಯಲ್ಲಿ ಹಲವರಿದ್ದಾರೆ.

‘ಅರ್ಧದಷ್ಟು ಸಿಬ್ಬಂದಿ, ವಿದ್ಯುತ್‌ ಶುಲ್ಕ ಪಾವತಿಸಲೂ ಆಗದ ಪರಿಸ್ಥಿತಿಯಲ್ಲಿ ಲಾಡ್ಜ್‌ ನಡೆಸುವುದು ಕಷ್ಟ. ಲಾಡ್ಜ್‌ ಮಾಲೀಕರು ನಿಭಾಯಿಸಬಹುದು. ಬಾಡಿಗೆ ಆಧಾರದಲ್ಲಿ ನಡೆಸುವವರ ಕಷ್ಟ ತೀರಲು ಒಂದೂವರೆ ವರ್ಷ ಬೇಕಾಗಬಹುದು’ ಎನ್ನುತ್ತಾರೆ ಮೈಸೂರಿನ ಲಾಡ್ಜ್‌ ಮಾಲೀಕ ಎಂ.ಎಸ್.ಜಯಪ್ರಕಾಶ್‌.

***

ನನಗೆ ವ್ಯಾಪಾರವೇ ಗೊತ್ತಿರಲಿಲ್ಲ. ಟೂರಿಸ್ಟ್ ಗೈಡ್‌ ಕೆಲಸವಿಲ್ಲದೆ ಮನೆ ಮುಂದೆ ಮೊಟ್ಟೆ ವ್ಯಾಪಾರ ಮಾಡಿ ಬದುಕು ನಡೆಸಿದೆ

- ಬಿ.ಮೊಹಿದ್ದೀನ್, ಚಿತ್ರದುರ್ಗ

ಉಳಿತಾಯದ ಹಣವನ್ನೆಲ್ಲ ಹಾಕಿ ಖರೀದಿಸಿದ ಕಾರನ್ನು, ಪ್ರವಾಸಿಗರು ಬಾರದ ಕಾರಣ ಮಾರಾಟ ಮಾಡಬೇಕಾಯಿತು.

- ನಾಗೇಶ್‌, ಕಾರು ಚಾಲಕ, ಮೈಸೂರು

ಗೈಡ್‌ ಕೆಲಸವಿಲ್ಲದೆ ನಾನು ಉದ್ಯೋಗಖಾತ್ರಿ ಕೂಲಿ ಕೆಲಸ ಮಾಡಿದೆ. ಕೆಲವರು ಬಾಳೆತೋಟದ ಕೂಲಿ ಕೆಲಸಕ್ಕೆ ಹೋದರು.

- ಬಿ.ನಾಗರಾಜ್‌, ಹಂಪಿ

ಲಾಕ್‌ಡೌನ್‌ ಬಳಿಕವೂ ಪ್ರವಾಸಿಗರಿಲ್ಲದೆ ಲಾಡ್ಜ್‌ ನಡೆಸುವುದು ಕಷ್ಟಕರವಾಗಿದೆ. ಎಲ್ಲ ಸಿಬ್ಬಂದಿಗೆ ಸಂಬಳ ಕೊಡಲೂ ಆಗದ ಪರಿಸ್ಥಿತಿ ಇದೆ

- ಎಂ.ಎಸ್‌.ಜಯಪ್ರಕಾಶ್‌, ಲಾಡ್ಜ್‌ ಮಾಲೀಕ, ಮೈಸೂರು

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು