ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಶೇ 50ಕ್ಕೂ ಹೆಚ್ಚು ಹಾಸಿಗೆ ಖಾಲಿ

ಆಸ್ಪತ್ರೆಗಳಲ್ಲಿನ ಹಾಸಿಗೆ ಬೇಡಿಕೆ ಕುಸಿತ
Last Updated 10 ಜೂನ್ 2021, 20:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಏರಿಕೆ ಕಂಡ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ಈಗ ಸೋಂಕಿತರ ಸಂಖ್ಯೆ ಇಳಿಮುಖ ಆಗಿರುವುದರಿಂದ ಶೇ 50ಕ್ಕೂ ಹೆಚ್ಚು ಹಾಸಿಗೆಗಳು ಖಾಲಿ ಉಳಿದಿವೆ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಮೀಸಲಾಗಿರುವ 61,979 ಹಾಸಿಗೆಗಳಲ್ಲಿ 36 ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಈಗ ಖಾಲಿ ಉಳಿದಿವೆ. ಸಂಭಾವ್ಯ ಮೂರನೇ ಅಲೆಯ ಹೊಡೆತ ತಡೆಯಲು ಬೇಕಾಗಬಹುದು ಎಂಬ ಲೆಕ್ಕಾಚಾರದಲ್ಲಿ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಫೆಬ್ರವರಿಯಲ್ಲಿ ಕೆಲದಿನಗಳು 500ರ ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳ ಸಂಖ್ಯೆ ಏಪ್ರಿಲ್ ತಿಂಗಳಲ್ಲಿ ದಿನವಹಿ 50 ಸಾವಿರದ ಆಸುಪಾಸು ತಲುಪಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷದ ಗಡಿ ದಾಟಿತ್ತು.

ಪರೀಕ್ಷೆ ವಿಳಂಬ, ಮನೆ ಆರೈಕೆ ವೇಳೆ ನಿರ್ಲಕ್ಷ್ಯ ಸೇರಿದಂತೆ ವಿವಿಧ ಕಾರಣಗಳಿಂದ ಗಂಭೀರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಯತ್ತ ಮುಖ ಮಾಡಿದವರ ಸಂಖ್ಯೆ ಏರಿಕೆಯಾಗಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಅಭಾವ ತೀವ್ರತರವಾಗಿ ಕಾಡಿತ್ತು.

ಆಮ್ಲಜನಕ ಸಂರ್ಪಕ ಸಹಿತ ಹಾಗೂ ಐಸಿಯು ಹಾಸಿಗೆಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕಾಣಿಸಿಕೊಳ್ಳುವ ಮೊದಲು ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ 1,970 ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳಿದ್ದವು. ಈಗ ಆ ಸಂಖ್ಯೆ 24 ಸಾವಿರಕ್ಕೆ ಏರಿಕೆಯಾಗಿದೆ.

ಅದೇ ರೀತಿ, ಐಸಿಯು ಹಾಸಿಗೆಗಳು 444 ರಿಂದ 1,145, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು 610 ರಿಂದ 2,059ಕ್ಕೆ ಹೆಚ್ಚಳವಾಗಿವೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ 4,700 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿತ್ತು. ಈಗ ಆ ಸಂಖ್ಯೆ 9,405ಕ್ಕೆ ಏರಿಕೆಯಾಗಿದೆ. ಐಸಿಯು ಹಾಸಿಗೆಗಳು 341 ರಿಂದ 646ಕ್ಕೆ ಹೆಚ್ಚಳವಾಗಿದೆ. ‌

ಮೂರನೇ ಅಲೆಗೆ ಸಹಕಾರಿ: ಮೊದಲನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಬಳಿಕ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಅಳವಡಿಸಿದ್ದ ಹಾಸಿಗೆಗಳನ್ನು ತೆರವು ಮಾಡಲಾಗಿತ್ತು. ಹೀಗಾಗಿ, ಎರಡನೇ ಅಲೆ ಕಾಣಿಸಿಕೊಂಡಾಗ ಹಾಸಿಗೆಗಳನ್ನು ಸಜ್ಜು ಮಾಡುವುದು ಸವಾಲಾಗಿತ್ತು. ಈಗ ಕೋವಿಡ್‌ ನಿಯಂತ್ರಣಕ್ಕೆ ಬಂದರೂ ಮುಂದೆ ಬಂದೊದಗಬಹುದಾದ ಸಮಸ್ಯೆ ತಪ್ಪಿಸಲು ಆಮ್ಲಜನಕ ಸಂಪರ್ಕ ಹೊಂದಿರುವ ಹಾಗೂ ಇತರ ಹಾಸಿಗೆಗಳನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

‘ಏಕಾಏಕಿ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆ ವ್ಯವಸ್ಥೆ ಮಾಡುವುದು ಕಷ್ಟವಾಯಿತು. ಈಗ ಹಾಸಿಗೆ ಕೊರತೆಯಿಲ್ಲ. ಮೂರನೇ ಅಲೆ ಕಾಣಿಸಿಕೊಂಡಲ್ಲಿ ಈಗಿನ ವ್ಯವಸ್ಥೆ ಸಹಕಾರಿಯಾಗಲಿದೆ’ ಎಂಬುದು ಇಲಾಖೆ ವಿಶ್ವಾಸ.

* ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಪೀಡಿತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಹೆಚ್ಚಿನ ಹಾಸಿಗೆಗಳು ಖಾಲಿಯಿವೆ.

-ಡಾ. ಓಂಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT