ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಸಾಕೆನಿಸಿದೆ; ಭಗವಂತನಿಗೂ ಕರುಣೆ ಇಲ್ಲ: ಬೀದಿ ಬದಿ ವ್ಯಾಪಾರಿಗಳ ಗೋಳು

ಸರ್ಕಾರದ ಪರಿಹಾರ ಮೊತ್ತ ಬಹುಪಾಲು ಮಂದಿಗೆ ತಲುಪಿಯೇ ಇಲ್ಲ
Last Updated 5 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಿರಿಯ ಮಗ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತಿಂಗಳಿಗೆ ₹40 ಸಾವಿರ ಸಂಬಳ ಬರುತ್ತಿತ್ತು. ಕೋವಿಡ್‌ ಕಾರಣ ಕಂಪನಿಗೆ ಬೀಗ ಬಿತ್ತು. ಕೆಲಸವಿಲ್ಲದೇ ಆತ ಮನೆಯಲ್ಲಿದ್ದಾನೆ. ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಹೆಂಡತಿ, ನಾದಿನಿ ಹೀಗೆ ಸಂಸಾರ ದೊಡ್ಡದಿದೆ. ಈ ಇಳಿ ವಯಸ್ಸಿನಲ್ಲಿ ಅವರನ್ನೆಲ್ಲಾ ಹೇಗೆ ಸಾಕಬೇಕೆಂಬ ಯೋಚನೆ ಕಾಡುತ್ತಿದೆ. ಆತ್ಮಹತ್ಯೆ ಬಿಟ್ಟರೆ ಬೇರೆ ಯಾವ ದಾರಿಯೂ ನಮಗೆ ತೋಚುತ್ತಿಲ್ಲ’....

ಶ್ರೀನಿವಾಸನಗರದ 9ನೇ ತಿರುವಿನ ಬಳಿ ಪೂಜಾ ಸಾಮಗ್ರಿ ಮಾರುತ್ತಿದ್ದ ಬಿ.ಆರ್‌.ವಾಸುದೇವ್‌ ಹೀಗೆ ಹೇಳುತ್ತಾ ಗದ್ಗದಿತರಾದರು.

ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ವೃದ್ಧಾಪ್ಯ ಜೀವನ ಕಳೆಯಬೇಕಿದ್ದ ಅವರು ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ70ನೇ ವಯಸ್ಸಿನಲ್ಲೂ ವ್ಯಾಪಾರ ಮಾಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ರಾಜ್ಯದ ವಿವಿಧೆಡೆ ಬೀದಿ ಬದಿ ವ್ಯಾಪಾರ ಮಾಡುತ್ತಾ ಬದುಕು ಸಾಗಿಸುತ್ತಿರುವವರನ್ನು ಮಾತಿಗೆಳೆದರೆ ಇಂತಹ ನೂರಾರು ನೋವಿನ ಕಥೆಗಳು ತೆರೆದುಕೊಳ್ಳುತ್ತವೆ.

ಸಾಲ ಕೇಳಲು ಬ್ಯಾಂಕ್‌ಗೆ ಹೋದರೆ ಬೈಯ್ದು ಆಚೆ ಕಳುಹಿಸುತ್ತಾರೆ. ಸ್ವಂತ ಬಲದ ಮೇಲೆ ವ್ಯಾಪಾರ ಮಾಡುವಷ್ಟು ಹಣ ಕೆಲವರ ಬಳಿ ಇರುವುದಿಲ್ಲ. ಅಂತಹವರು ಫೈನಾನ್ಸ್‌ ಕಂಪನಿಗಳಿಗೆ ಎಡತಾಕುತ್ತಾರೆ. ಅವರು ಕೇಳಿದಷ್ಟು ಬಡ್ಡಿಗೆ ಸಾಲ ಪಡೆದು ವ್ಯಾಪಾರ ಮಾಡುವುದು ಅನಿವಾರ್ಯವಾಗಿದೆ.

‘ಹತ್ತು ವರ್ಷದಿಂದ ಮನೆಯೊಂದರಲ್ಲಿ ಬಾಡಿಗೆ ಇದ್ದೆವು. ಅವರು ಕಟ್ಟಡ ನೆಲಸಮ ಮಾಡುವುದಾಗಿ ಹೇಳಿ ಅಲ್ಲಿಂದ ಹೊರಹಾಕಿದರು. ಬಳಿಕ ಗಿರಿನಗರದ ವ್ಯಕ್ತಿಯೊಬ್ಬರು ಆಶ್ರಯ ನೀಡಿದ್ದರು. ಈಗ ಅವರೂ ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಎಲ್ಲಿ ಹೋಗಬೇಕು, ಮುಂದೇನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸಂಬಂಧಿಕರಂತೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ನಾನು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದೇನೆ. ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲೂ ಹಣವಿಲ್ಲ. ಒಮ್ಮೊಮ್ಮೆ ವ್ಯಾಪಾರವೇ ಆಗುವುದಿಲ್ಲ. ಆಗ ಖಾಲಿ ಹೊಟ್ಟೆಯಲ್ಲಿ ಮಲಗುವುದು ಅನಿವಾರ್ಯ. ಮೊಮ್ಮಕ್ಕಳ ಮುಖ ನೋಡಿದರೆ ಕರುಳು ಕಿತ್ತು ಬಂದಂತಾಗುತ್ತದೆ. ಅವರೇನು ಪಾಪ ಮಾಡಿದ್ದರೋ’ ಎನ್ನುವಾಗ ಅವರ ಕಣ್ಣುಗಳು ಹನಿಗೂಡಿದವು.

‘ಲಾಕ್‌ಡೌನ್‌ ಸಮಯದಲ್ಲಿ ನಾವು ಅನುಭವಿಸಿದ ಕಷ್ಟ ಶತ್ರುಗಳಿಗೂ ಬರಬಾರದು. ಒಂದು ಹೊತ್ತು ಊಟ ಸಿಕ್ಕರೆ ಸಾಕು ಎಂಬ ದೈನೇಸಿ ಸ್ಥಿತಿಯಲ್ಲೇ ದಿನಗಳನ್ನು ದೂಡಿದ್ದೆವು’ ಎಂದರು.

‘ಸೊಂಟಕ್ಕೆ ಬೆಲ್ಟ್‌ ಕಟ್ಟಿಕೊಂಡು ವ್ಯಾಪಾರ ಮಾಡ್ತಿದೀನಿ’

‘10 ವರ್ಷಗಳಿಂದಲೂ ತರಕಾರಿ ವ್ಯಾಪಾರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಮೊದಲು ತಳ್ಳುಗಾಡಿಯಲ್ಲಿ ಬೀದಿ ಬೀದಿ ಸುತ್ತುತ್ತಿದ್ದೆ. ಸೊಂಟ ನೋವು ಕಾಣಿಸಿಕೊಂಡ ನಂತರ ತಳ್ಳುಗಾಡಿ ವ್ಯಾಪಾರ ನಿಲ್ಲಿಸಿದೆ. ಆಸ್ಪತ್ರೆಗೆ ತೋರಿಸಿದಾಗ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಮನೆಯಲ್ಲಿ ಮಲಗಿಬಿಟ್ಟರೆ ಹೊಟ್ಟೆ ತುಂಬಬೇಕಲ್ಲ. ಹೀಗಾಗಿ ಸೊಂಟಕ್ಕೆ ಬೆಲ್ಟ್‌ ಕಟ್ಟಿಕೊಂಡೇ ವ್ಯಾಪಾರ ನಡೆಸುತ್ತಿದ್ದೇನೆ’ ಎಂದು 55 ವರ್ಷದ ಶಂಕರ್‌ ತಮ್ಮ ಕಷ್ಟ ಬಿಚ್ಚಿಟ್ಟರು.

‘ದಿನವಿಡೀ ನಿಂತುಕೊಂಡು ವ್ಯಾಪಾರ ಮಾಡೋದು ಕಷ್ಟ. ಒಮ್ಮೊಮ್ಮೆ ಜೀವ ಹಿಂಡಿದಂತಾಗುತ್ತದೆ. ಅದನ್ನೆಲ್ಲಾ ಸಹಿಸಿಕೊಂಡೇ ದಿನ ದೂಡುತ್ತಿದ್ದೇನೆ. ಒಮ್ಮೆ ತರಕಾರಿಗಳನ್ನು ತಂದರೆ ಅದು ಖಾಲಿಯಾಗಲು ಮೂರು ದಿನ ಬೇಕಾಗುತ್ತದೆ. ಒಂದಷ್ಟು ತರಕಾರಿಗಳು ಕೊಳೆತೇ ಹೋಗುತ್ತವೆ. ಬಡ್ಡಿ ಕಟ್ಟದಿದ್ದರೆ ಸಾಲ ಕೊಟ್ಟವರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ. ಬಾಡಿಗೆ ಕಟ್ಟದಿದ್ದರೆ ಮನೆ ಖಾಲಿ ಮಾಡಿಸುತ್ತಾರೆ. ಹೀಗಾಗಿ ನೋವನ್ನೆಲ್ಲಾ ಸಹಿಸಿಕೊಂಡೇ ಕೆಲಸ ಮಾಡಬೇಕು. ಅದು ಅನಿವಾರ್ಯ ಕೂಡ’ ಎಂದು ಭಾವುಕರಾದರು.

‘ಮಕ್ಕಳು ದೂರ ತಳ್ಳಿದ್ರು’

‘ಮಕ್ಕಳನ್ನು ಸಾಕಿ ಸಲುಹಿದ್ದೆ. ಇಳಿ ವಯಸ್ಸಿನಲ್ಲಿ ಅವರು ದೂರ ತಳ್ಳಿಬಿಟ್ರು. ಹೀಗಾಗಿ ಅತ್ತೆಯ ಜೊತೆ ಬೇರೆ ಮನೆಯಲ್ಲಿ ವಾಸವಾಗಿದ್ದೇನೆ. ನಾನೇ ದುಡಿದು ಅವರನ್ನೂ ಸಾಕುತ್ತಿದ್ದೇನೆ’ ಎಂದು 61 ವರ್ಷದ ಚಿಕ್ಕಮ್ಮ ಬೇಸರ ತೋಡಿಕೊಂಡರು.

‘ಅಪ್ಪ, ಅಮ್ಮನಿಗೆ ಮೂರು ಹೊತ್ತು ಊಟ ಹಾಕಲೂ ಆಗದಿದ್ದ ಮೇಲೆ ಅವರ ಹಂಗಿನಲ್ಲೇಕೆ ಬದುಕಬೇಕು. 30 ವರ್ಷಗಳಿಂದ ಹೂವು ಮತ್ತು ವೀಳ್ಯದೆಲೆ ವ್ಯಾಪಾರ ಮಾಡುತ್ತಿದ್ದೇನೆ. ಈಗ ಕಣ್ಣು ಕಾಣುವುದಿಲ್ಲ. ಎದ್ದು ಓಡಾಡುವುದಕ್ಕೂ ಕಷ್ಟ. ಹಾಗಂತ ಮನೆಯಲ್ಲಿ ಕೂರುವಂತಿಲ್ಲ. ಅವರಿವರ ಸಹಾಯ ಪಡೆದು ಮನೆಯಿಂದ ವ್ಯಾಪಾರದ ಸ್ಥಳಕ್ಕೆ ನಡೆದುಕೊಂಡೇ ಬರುತ್ತೇನೆ. ಅಕ್ಕಪಕ್ಕದ ವ್ಯಾಪಾರಿಗಳು ಟೇಬಲ್‌ ಜೋಡಿಸಿಕೊಡುತ್ತಾರೆ. ಬೆಳಿಗ್ಗೆ ಮಾರುಕಟ್ಟೆಗೆ ಹೋಗುವವರಿಂದ ಹೂವು ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇನೆ’ ಎಂದರು.

‘ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ನಮ್ಮನ್ನು ನೋಡಿಕೊಳ್ಳುವುದಿಲ್ಲ. ಅತ್ತೆಗೆ 90 ವರ್ಷ ವಯಸ್ಸು. ಅವರ ಮೂವರೂ ಮಕ್ಕಳು ತೀರಿಕೊಂಡಿದ್ದಾರೆ. ಅವರೂ ವೀಳ್ಯದೆಲೆ ವ್ಯಾಪಾರ ಮಾಡುತ್ತಿದ್ದರು. ಎಲ್ಲಾದರೂ ಬಿದ್ದು ಪೆಟ್ಟು ಮಾಡಿಕೊಂಡರೆ ಕಷ್ಟ ಎಂದು ಮನೆಯಲ್ಲೇ ಇರುವುದಕ್ಕೆ ಹೇಳಿದ್ದೇನೆ. ಇರುವಷ್ಟು ದಿನ ಹೇಗೋ ಜೀವನ ಮಾಡಬೇಕಲ್ಲ’ ಎಂದು ಹೇಳುತ್ತಾ ಕಣ್ಣೀರು ಒರೆಸಿಕೊಂಡರು.

₹ 2 ಸಾವಿರ ಯಾರಿಗೆ ಕೊಟ್ರು?

‘ಲಾಕ್‌ಡೌನ್‌ನಿಂದಾಗಿ ಬದುಕು ಬೀದಿಗೆ ಬಂದಿತ್ತು. ನಮಗೆಲ್ಲಾ ₹ 2 ಸಾವಿರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. ಆ ಹಣ ಇದುವರೆಗೂ ಕೈಸೇರಿಲ್ಲ’ ಎಂದು ಭದ್ರಾವತಿಯ ಸುಗುಣ ಹೇಳಿದರು.

‘ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆಗೆ ಹಣ ಹೊಂದಿಸುವುದೇ ಕಷ್ಟವಾಗಿದೆ. ಹೀಗಾಗಿ ಮನೆ ಕೆಲಸದ ಜೊತೆಗೆ ಹೂವಿನ ವ್ಯಾಪಾರವನ್ನೂ ಮಾಡುತ್ತಿದ್ದೇನೆ. ಈಗ ಮೊದಲಿನಷ್ಟು ವ್ಯಾಪಾರ ಇಲ್ಲ. ಹಾಕಿದ ಬಂಡವಾಳ ವಾಪಸ್‌ ಬಂದರೆ ಸಾಕು ಎನ್ನುವ ಸ್ಥಿತಿ ಇದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲ ದರವನ್ನೂ ಹೆಚ್ಚಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮಂತಹವರು ಹೇಗೆ ಬದುಕಬೇಕು’ ಎಂದು ಪ್ರಶ್ನಿಸಿದರು.

‘ಪರಿಹಾರ ಕೊಡಿಸುವುದಾಗಿ ನಮ್ಮಿಂದಲೇ ₹100 ಹಣ ಪಡೆದುಕೊಂಡರು. ಗುರುತಿನ ಚೀಟಿ ಮಾಡಿಸಬೇಕೆಂದು ಹೇಳಿದರು. ಅದಕ್ಕಾಗಿ ಕೆಲಸ ಬಿಟ್ಟು ಅಲೆದದ್ದೇ ಆಯಿತು. ಅದರಿಂದ ಪ್ರಯೋಜನವಂತೂ ಆಗಲಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ‌’ ಎಂದರು.

‘ಕಚೇರಿಗೆ ಅಲೆಯೋದೇ ಆಯಿತು’

‘ಪ್ರತಿಯೊಬ್ಬರಿಗೂ ₹2 ಸಾವಿರ ಪರಿಹಾರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ ಹತ್ತಾರು ದಾಖಲೆಗಳನ್ನು ಕೇಳಿದರು. ದಲ್ಲಾಳಿಗಳು ಒಂದಷ್ಟು ಹಣವನ್ನೂ ಪಡೆದುಕೊಂಡರು. ಬಳಿಕ ಕೆಲಸ ಬಿಟ್ಟು ಕಚೇರಿಗೆ ಅಲೆದು ಅಲೆದು ಸಾಕಾಯಿತು. ಕೊನೆಗೆ ಆ ಹಣದ ಆಸೆಯನ್ನೇ ಕೈಬಿಟ್ಟೆ’ ಎಂದು ಶಿವಮೊಗ್ಗದ ಸೋಮಶೇಖರ್‌ ಬೇಸರ ವ್ಯಕ್ತಪಡಿಸಿದರು.

***

ಮೊದಲು ಗೋಬಿ ಮಂಚೂರಿ ವ್ಯಾಪಾರ ಮಾಡುತ್ತಿದ್ದೆ. ಲಾಕ್‌ಡೌನ್‌ನಿಂದಾಗಿ ತುಂಬಾ ನಷ್ಟವಾಯಿತು. ಹೀಗಾಗಿ ತಳ್ಳುಗಾಡಿಯಲ್ಲಿ ಸೊಪ್ಪಿನ ವ್ಯಾಪಾರ ಶುರು ಮಾಡಿದ್ದೇನೆ. ದಿನಕ್ಕೆ ₹500 ದುಡಿಮೆಯಾದರೆ ಹೆಚ್ಚು. ಅದರಲ್ಲೇ ಹೇಗೊ ಜೀವನ ನಡೆಸುತ್ತಿದ್ದೇವೆ.

-ಗೋವಿಂದರಾಜು, ನಾಗೇಂದ್ರ ಬ್ಲಾಕ್‌ನ ವ್ಯಾಪಾರಿ

***

1.76 ಲಕ್ಷ ಮಂದಿಗೆ ತಲಾ ₹2 ಸಾವಿರ ಪರಿಹಾರ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಪೈಕಿ ಶೇ 50ರಷ್ಟು ಮಂದಿಗೆ ಹಣವೇ ಸಿಕ್ಕಿಲ್ಲ. ಕೆಲ ಬ್ಯಾಂಕ್‌ಗಳು ಈ ಹಣವನ್ನು ಹಳೆಯ ಸಾಲಕ್ಕೆ ಜಮೆ ಮಾಡಿಕೊಂಡಿವೆ. ಪಟ್ಟಣ ವ್ಯಾಪಾರ ಸಮಿತಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ.

–ಸಿ.ಇ.ರಂಗಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ.

***

ಅಂಕಿ ಅಂಶ

5 ಲಕ್ಷ

ರಾಜ್ಯದಲ್ಲಿರುವ ಬೀದಿಬದಿ ವ್ಯಾಪಾರಿಗಳು

2.45 ಲಕ್ಷ

ಸಮೀಕ್ಷೆಗೆ ಒಳಪಟ್ಟವರು

1.20 ಲಕ್ಷ

ಗುರುತಿನ ಚೀಟಿ ಪಡೆದಿರುವವರು

1.10 ಲಕ್ಷ

ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರ ಅಂದಾಜು ಸಂಖ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT