ಬುಧವಾರ, ಸೆಪ್ಟೆಂಬರ್ 29, 2021
20 °C
ಕೇರಳ, ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರ ಮೇಲೆ ವಿಶೇಷ ನಿಗಾ

1,736 ಮಂದಿಗೆ ಪರೀಕ್ಷೆ: ಒಬ್ಬರಿಗೂ ಕೋವಿಡ್‌ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಾ ಇರುವುದರಿಂದ ಈ ರಾಜ್ಯಗಳಿಂದ ಬಂದಿರುವ 1,736 ಮಂದಿಯನ್ನು ನಗರದಲ್ಲಿ ಎರಡು ದಿನಗಳಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ.

‘ಕೇರಳ ಹಾಗೂ ಮಹಾರಾಷ್ಟ್ರದಿಂದ ನಗರಕ್ಕೆ ಪ್ರಯಾಣಿಕರನ್ನು ಬಿಬಿಎಂಪಿ ವಿಶೇಷ ತಪಾಸಣಾ ತಂಡಗಳು ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸುತ್ತಿವೆ. ಅವರು 72 ಗಂಟೆಯ ಈಚೆಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡ ವರದಿ ಹಾಜರುಪಡಿಸುವ ಮೂಲಕ ತಮಗೆ ಕೋವಿಡ್‌ ಇಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಆರ್‌ಟಿಪಿಸಿಆರ್‌ ವರದಿ ಹಾಜರುಪಡಿಸದವರನ್ನು ನಮ್ಮ ಸಿಬ್ಬಂದಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಎರಡು ದಿನಗಳಲ್ಲಿ ಪರೀಕ್ಷೆಗೆ ಒಳಪಡಿಸಿದ ಯಾರೊಬ್ಬರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈ ರೀತಿ ಕೋವಿಡ್‌ ಪರೀಕ್ಷೆಗೆ ಒಳಪಡುವ ಪ್ರಯಾಣಿಕರನ್ನು ಫಲಿತಾಂಶ ಬರುವವರೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಬಿಬಿಎಂಪಿ ಸಿದ್ಧತೆ ನಡೆದಿದೆ. ಸದ್ಯಕ್ಕೆ ಈ ವ್ಯವಸ್ಥೆ ಸಜ್ಜಾಗಿಲ್ಲ. ಹಾಗಾಗಿ ಪರೀಕ್ಷೆಗೆ ಒಳಗಾದವರು ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿರಬೇಕು. ಹೊರಗಡೆ ಅಡ್ಡಾಡಬಾರದು ಎಂದು ಸೂಚನೆ ನೀಡಿ ಅವರನ್ನು ಬಿಬಿಎಂಪಿ ಸಿಬ್ಬಂದಿ ಬಿಟ್ಟು ಕಳುಹಿಸುತ್ತಿದ್ದಾರೆ.

‘ಸಾಂಸ್ಥಿಕ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಂತಹ ಕ್ವಾರಂಟೈನ್‌ ಕೇಂದ್ರಗಳಲ್ಲಿ ಒಳಗಾಗುವ ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು ಪಾಲಿಕೆ ವತಿಯಿಂದಲೇ ಉಚಿತವಾಗಿ ಒದಗಿಸುತ್ತೇವೆ. ಒಂದು ವೇಳೆ ಕೆಲವು ಪ್ರಯಾಣಿಕರು ಹೆಚ್ಚಿನ ಸೌಕರ್ಯಗಳಿರುವ ವ್ಯವಸ್ಥೆ ಬಯಸಿದರೆ, ಅಂತಹವರು ಖಾಸಗಿ ಹೋಟೆಲ್‌ಗಳಲ್ಲಿ ಪ್ರತ್ಯೇಕವಾಸಕ್ಕೆ ಒಳಗಾಗಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು. 

ಆರ್‌ಟಿಪಿಸಿಆ್‌ರ್ ಪರೀಕ್ಷಾ ವರದಿ ಹೊಂದಿಲ್ಲದ ಕೆಲವು ಪ್ರಯಾಣಿಕರು ಕಡ್ಡಾಯ ಕೋವಿಡ್‌ ಪರೀಕ್ಷೆಗೆ ಒಳಗಾಗಲು ಒಪ್ಪುತ್ತಿಲ್ಲ. ಅವರಿಗೆ ಮನವರಿಕೆ ಮಾಡಲು ಪಾಲಿಕೆಯ ವಿಶೇಷ ತಂಡದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೆಲವು ಪ್ರಯಾಣಿಕರು ಪಾಲಿಕೆ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೂ ಇಳಿಯುತ್ತಿದ್ದಾರೆ. 

‘ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿದೆ. ಅಲ್ಲಿಂದ ಇಲ್ಲಿಗೆ ಪ್ರಯಾಣಿಸುವ ಮೂಲಕ ಇಲ್ಲೂ ಸೋಂಕು ಹೆಚ್ಚಳ ಆಗುವುದಕ್ಕೆ ಆಸ್ಪದ ಕಲ್ಪಿಸಬಾರದು ಎಂಬ ಕಾರಣಕ್ಕೆ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇದು ಜನರ ಒಳಿತಿನ ಸಲುವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನು ಪ್ರಯಾಣಿಕರು ಕೂಡಾ ಅರ್ಥಮಾಡಿಕೊಳ್ಳಬೇಕು’ ಎಂದರು.

ದಾರಿ ತಪ್ಪಿಸುತ್ತಿರುವ ಪ್ರಯಾಣಿಕರು

ಬಿಬಿಎಂಪಿಯು ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಹಾಗೂ ನಗರದ ಕೆಲವು ಬಸ್‌ ನಿಲ್ದಾಣಗಳಲ್ಲಿ ಮಾತ್ರ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಟ್ಟಿದೆ. ಆದರೆ, ಕೆಲವು ಪ್ರಯಾಣಿಕರು ಬಸ್‌ಗಳು ಈ ನಿಲ್ದಾಣಕ್ಕೆ ತಲುಪುವುದಕ್ಕೆ ಮುನ್ನವೇ ಇಳಿದು ಹೋಗುತ್ತಿದ್ದಾರೆ. ಇಂತಹ ಪ್ರಯಾಣಿಕರ ಮೇಲೆ ನಿಗಾ ಇಡಲು ಬಿಬಿಎಂಪಿಯ ವಿಶೇಷ ತಂಡಗಳಿಗೂ ಸಾಧ್ಯವಾಗುತ್ತಿಲ್ಲ. ಇದನ್ನು ನಿಭಾಯಿಸುವುದು ಬಿಬಿಎಂಪಿ ಪಾಲಿಗೂ ತಲೆನೋವಾಗಿ ಪರಿಣಮಿಸಿದೆ.

ಹೋಟೆಲ್‌ ಕಾರ್ಮಿಕನಿಗೆ ಕೋವಿಡ್‌

ಜ್ಞಾನಭಾರತಿ ವಾರ್ಡ್‌ನ ಎನ್.ಜಿ.ಎಫ್ ಬಡಾವಣೆಯ ಹೋಟೆಲ್‌ನ ಕಾರ್ಮಿಕರೊಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಹಾಗಾಗಿ ಹೋಟೆಲ್‌ನ ಎಲ್ಲ ಕಾರ್ಮಿಕರನ್ನೂ ಬಿಬಿಎಂಪಿ ಕೋವಿಡ್‌  ಪರೀಕ್ಷೆಗೆ ಒಳಪಡಿಸಿದೆ. ಹೋಟೆಲ್‌ ಕಟ್ಟಡಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದ್ದು, ಹೋಟೆಲನ್ನು ಮುಚ್ಚಲಾಗಿದೆ.

‘ನಾಗರಭಾವಿ ಮುಖ್ಯರಸ್ತೆ ಬಳಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ ಕಾರ್ಮಿಕರನ್ನು ಕೋವಿಡ್- ಪರೀಕ್ಷೆಗೆ ಒಳಪಡಿಸಿದ್ದೆವು. ಈ ವೇಳೆ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಪರೀಕ್ಷೆಗೆ ಒಳಪಟ್ಟ ಇತರ ಕಾರ್ಮಿಕರನ್ನು ಫಲಿತಾಂಶ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜರಾಜೇಶ್ವರಿನಗರ ವಲಯದ ಎಲ್ಲ ಹೋಟೆಲ್‌ಗಳ ಕಾರ್ಮಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುವಂತೆ ಮತ್ತು ಅವರೆಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವಂತೆ ವಲಯ ಆಯುಕ್ತ ರೆಡ್ಡಿ ಶಂಕರಬಾಬು ಅವರು ಹೋಟೆಲ್‌ಗಳ ಮಾಲೀಕರಲ್ಲಿ ಮನವಿ ಮಾಡಿದ್ದಾರೆ.  

ರಾತ್ರಿ 10ರ ಬಳಿಕ ಹೋಟೆಲ್‌ ವಹಿವಾಟಿಗೆ ಇಲ್ಲ ಅವಕಾಶ: ಬಿಬಿಎಂಪಿ ಸೂಚನೆ

ಬೆಂಗಳೂರು: ನಗರದ ಹೋಟೆಲ್‌ ಗಳು ರಾತ್ರಿ 10 ಗಂಟೆ ಬಳಿಕ ವಹಿವಾಟು ನಡೆಸಬಾರದು ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ವರ್ಚುವಲ್ ರೂಪದಲ್ಲಿ ಮಂಗಳವಾರ ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿರಬೇಕಾದರೆ ಎಲ್ಲ ಹೋಟೆಲ್‌ಗಳಲ್ಲೂ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸೂಚನೆ ನೀಡಿದರು.

‘ನಗರದಲ್ಲಿ ರಾತ್ರಿ 10 ರಿಂದ ಮುಂಜಾನೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಬಹುತೇಕ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 10 ಬಳಿಕವೂ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ನಾಗರಿಕರು ಹೊರಗಡೆ ಅಡ್ಡಾಡುತ್ತಿದ್ದಾರೆ. ಇನ್ನು ರಾತ್ರಿ 10ರ ಒಳಗೆ ಹೋಟೆಲ್‌ಗಳನ್ನು ಮುಚ್ಚಬೇಕು’ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

‘ಅಡುಗೆ ಸಿಬ್ಬಂದಿ, ಊಟ ಬಡಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗ್ರಾಹಕರು ಊಟ/ ತಿಂಡಿ ತಿನಿಸು ಸೇವಿಸುವ ಸಂದರ್ಭದ ಹೊರತಾಗಿ ಇತರ ವೇಳೆ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಗ್ರಾಹಕರು ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ನಿಯಮ ಪಾಲನೆ ಕುರಿತು ಅವರಲ್ಲಿ ಅರಿವು ಮೂಡಿಸಬೇಕು’ ಎಂದರು.

‘ಹೋಟೆಲ್‌ನ ಸಿಬ್ಬಂದಿಯನ್ನೂ ಆಗಿಂದಾಗ್ಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ಪತ್ತೆಯಾದಲ್ಲಿ, ಅಂತಹ ಸಿಬ್ಬಂದಿಯ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಸಜ್ಜಾಗಿರಬೇಕು’ ಎಂದು ತಿಳಿಸಿದರು.

‘ರೆಸ್ಟೋರಂಟ್‌ಗಳಲ್ಲಿ, ಪಾರ್ಟಿ ಹಾಲ್‌ಗಳಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಯಾವುದಾ ದರೂ ಸಮಾರಂಭ ನಡೆಯುವಾಗ ನಿಯಮಗಳ ಉಲ್ಲಂಘನೆ ಆಗದಂತೆ ಸಂಬಂಧಪಟ್ಟ ಸಿಬ್ಬಂದಿ ಎಚ್ಚರ ವಹಿಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು