ಗುರುವಾರ , ಫೆಬ್ರವರಿ 25, 2021
20 °C
ಲಸಿಕೆ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು

12 ದಿನಗಳಲ್ಲಿ 2.62 ಲಕ್ಷ ಮಂದಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ವಿತರಣೆ ಪ್ರಾರಂಭವಾದ 12 ದಿನಗಳ ಅವಧಿಯಲ್ಲಿ 2,62,193 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಈ ಅವಧಿಯಲ್ಲಿ ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಶೇ 52ರಷ್ಟು ಮಂದಿ ಹಾಜರಾಗಿದ್ದಾರೆ.

ಬುಧವಾರ 923 ಕೇಂದ್ರಗಳಿಂದ 78,722 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 30,589 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ನಿಗದಿಪಡಿಸಿದ ಫಲಾನುಭವಿಗಳಲ್ಲಿ ಶೇ 39 ರಷ್ಟು ಮಂದಿ ಮಾತ್ರ ಹಾಜರಾಗಿದ್ದು, ಉಳಿದವರು ನಾನಾ ಕಾರಣಗಳಿಂದ ಗೈರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಮಾತ್ರ ಶೇ 100ರಷ್ಟು ಸಾಧನೆ ಮಾಡಿದೆ. ಅಲ್ಲಿ ಎರಡು ಕೇಂದ್ರಗಳಿಂದ 169 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು.

ಕೊಡಗು (ಶೇ 76), ಉತ್ತರ ಕನ್ನಡ (ಶೇ 66), ಕೋಲಾರ (ಶೇ 60) ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಮನಗರ, ಮೈಸೂರು ಸೇರಿದಂತೆ 20 ಜಿಲ್ಲೆಗಳಲ್ಲಿ ಅರ್ಧಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಳ್ಳಲು ಬರಲಿಲ್ಲ. ಲಸಿಕೆ ಪಡೆದವರಲ್ಲಿ ಯಾರಲ್ಲಿಯೂ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಲಸಿಕೆ ಪಡೆದ ಅಧಿಕಾರಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸೌಧದಲ್ಲಿ ಕೂಡ ಲಸಿಕೆ ವಿತರಣಾ ಅಭಿಯಾನವನ್ನು ಬುಧವಾರ ನಡೆಸಲಾಯಿತು. ಇಲಾಖೆಯ ಸಿಬ್ಬಂದಿ ಶ್ರೀನಿವಾಸ್ ಅವರು ಮೊದಲಿಗರಾಗಿ ಅಲ್ಲಿ ಲಸಿಕೆ ಪಡೆದುಕೊಂಡರು. ಬಳಿಕ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್, ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್, ಲಸಿಕೆ ವಿಭಾಗದ ಉಪನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್ ಸೇರಿದಂತೆ ಹಲವರು ಲಸಿಕೆ ಪಡೆದು, ಜಾಗೃತಿ ಮೂಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು