ಮಂಗಳವಾರ, ಜನವರಿ 19, 2021
27 °C
ಬೆಂಗಳೂರು, ಬೆಳಗಾವಿಯಲ್ಲಿ ರಾಜ್ಯಮಟ್ಟದ ದಾಸ್ತಾನು ಕೇಂದ್ರ

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಾದ್ಯಂತ ಜ.16 ರಿಂದ ಕೋವಿಡ್‌ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರವು ಘೋಷಿಸಿದ ಕಾರಣ ರಾಜ್ಯದಲ್ಲಿ ಕೂಡ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ರಾಜ್ಯಮಟ್ಟದ ಲಸಿಕಾ ದಾಸ್ತಾನು ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ.

ಕೋವಿಡ್‌ ಲಸಿಕೆಯ ಮೊದಲನೇ ಕಂತು ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಬರಲಿರುವ ಕಾರಣ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ದಾಸ್ತಾನು ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ಲಸಿಕೆ ಬಂದ ಬಳಿಕ ಅದನ್ನು ಎಲ್ಲ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಮೊದಲ ಕಂತಿನಲ್ಲಿ 13.90 ಲಕ್ಷ ಲಸಿಕೆಯನ್ನು ರಾಜ್ಯಕ್ಕೆ ಕಳುಹಿಸಲಿದೆ. ಮೊದಲ ಹಂತದಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿದ ಬಳಿಕ 50 ವರ್ಷ ಮೇಲ್ಪಟ್ಟವರು ಹಾಗೂ ಅಪಾಯದಲ್ಲಿರುವವರಿಗೆ ಲಸಿಕೆ ನೀಡಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರವೇ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲವಿಲ್ಲ. ತಾಲೀಮಿನಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಅದನ್ನು ಸರಿಪಡಿಸಿಕೊಂಡು, ಲಸಿಕೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡಬೇಕೋ ಬೇಡವೋ ಎನ್ನುವುದನ್ನು ತಜ್ಞರ ಸಲಹೆ ಪಡೆದು, ಮುಂದುವರಿಯಲಾಗುವುದು. ಎಲ್ಲರಿಗೂ ಲಸಿಕೆ ತಲುಪಿಸಬೇಕಾದಲ್ಲಿ ಸುಮಾರು 2 ತಿಂಗಳು ಬೇಕಾಗಲಿದೆ’ ಎಂದರು. 

5 ಪ್ರಾದೇಶಿಕ ಕೇಂದ್ರಗಳು: ‘ಲಸಿಕೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎರಡು ವಾಕ್-ಇನ್ ಕೂಲರ್‌ಗಳಿವೆ. ಒಂದರಲ್ಲಿ 45 ಲಕ್ಷ ಡೋಸ್ ಸಂಗ್ರಹಿಸಲು ಅವಕಾಶವಿದೆ. ಇದೇ ರೀತಿ ಒಂದು ವಾಕ್-ಇನ್ ಫ್ರೀಜರ್ ಇದೆ. ಅದರಲ್ಲಿ 40 ಲಕ್ಷ ಡೋಸ್ ಸಂಗ್ರಹಿಸಬಹುದಾಗಿದೆ. ಕೇಂದ್ರ ಸರ್ಕಾರ ಇನ್ನೂ ಒಂದು ವಾಕ್-ಇನ್ ಫ್ರೀಜರ್ ನೀಡಲಿದೆ. ಚಿತ್ರದುರ್ಗ, ಕಲಬುರ್ಗಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ಪ್ರಾದೇಶಿಕ ದಾಸ್ತಾನು ಕೇಂದ್ರವನ್ನು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಗಳಿಗೆ ಲಸಿಕೆಗಳನ್ನು ಸಾಗಾಟ ಮಾಡಲು 900 ಲಾಜಿಸ್ಟಿಕ್ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ 24 ಲಕ್ಷ ಸಿರಿಂಜ್‌ಗಳು ಬಂದಿದ್ದು, ಅವುಗಳನ್ನು ದಾಸ್ತಾನು ಮಾಡಲಾಗಿದೆ’ ಎಂದರು.

‘ಫಲಾನುಭವಿಗಳನ್ನು ಖಾತರಿಪಡಿಸಿಕೊಳ್ಳಿ’

ನವದೆಹಲಿ: ಕೋವಿಡ್‌ ಲಸಿಕಾ ಅಭಿಯಾನದ ಸಂದರ್ಭದಲ್ಲಿ, ಗುರುತಿಸಲಾದ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಬೇಕು. ಅವರ ಬದಲು ಬೇರೆಯವರು ಲಸಿಕೆ ಪಡೆಯುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಭಾನುವಾರ ಸೂಚಿಸಿದೆ.

ಲಸಿಕೆಯ ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಬಳಸಲಾಗಿದ್ದ ‘ಕೋ–ವಿನ್‌’ ಸಾಫ್ಟ್‌ವೇರ್‌ನ ಕಾರ್ಯನಿರ್ವಹಣೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿವಿಧ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು, ಲಸಿಕಾ ಅಧಿಕಾರಿಗಳು ಹಾಗೂ ಇತರರ ಜತೆಗೆ ಭಾನುವಾರ ವರ್ಚುವಲ್‌ ಸಭೆ ಆಯೋಜಿಸಲಾಗಿತ್ತು. ಕೋವಿಡ್‌–19 ನಿರ್ವಹಣೆ ಕುರಿತು ರಚಿಸಲಾಗಿದ್ದ ತಂತ್ರಜ್ಞಾನ ಹಾಗೂ ದತ್ತಾಂಶ ನಿರ್ವಹಣಾ ಸಮಿತಿಯ ಅಧ್ಯಕ್ಷ ರಾಮ್‌ಸೇವಕ್‌ ಶರ್ಮಾ ಅವರು ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು