ಗುರುವಾರ , ಜನವರಿ 28, 2021
22 °C

ಕೋವಿಡ್: ಶುಕ್ರವಾರ ಲಸಿಕೆ ವಿತರಣೆ ಪೂರ್ವಾಭ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಸಿಕೆಯ ಪೂರ್ವಾಭ್ಯಾಸ (ಡ್ರೈ ರನ್‌) ನಡೆಯುವ ಕೇಂದ್ರ–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಲಸಿಕೆಯ ವಿತರಣೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಕಾರಣ ಶುಕ್ರವಾರ (ಜ.8) ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಸಿಕೆಯ ಪೂರ್ವಾಭ್ಯಾಸ (ಡ್ರೈ ರನ್‌) ನಡೆಯಲಿದೆ. 

ಕೇಂದ್ರ ಸರ್ಕಾರದ ಸೂಚನೆ ಅನುಸಾರ ಈ ತಾಲೀಮನ್ನು ನಡೆಸಲಾಗುತ್ತಿದೆ. ಕಳೆದ ಜ.2ರಂದು ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರ್ಗಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಪೂರ್ವಾಭ್ಯಾಸವನ್ನು ನಡೆಸಲಾಗಿತ್ತು. ಬೆಂಗಳೂರಿನ 4 ಹಾಗೂ ಉಳಿದ ಜಿಲ್ಲೆಗಳ 3 ಆರೋಗ್ಯ ಕೇಂದ್ರಗಳಲ್ಲಿ ಈ ತಾಲೀಮು ಯಶಸ್ವಿಯಾಗಿ ನಡೆದಿತ್ತು. ಈಗ ಎರಡನೇ ಹಂತದಲ್ಲಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಮಹಾವಿದ್ಯಾಲಯಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪೂರ್ವಾಭ್ಯಾಸ ನಡೆಯಲಿದೆ.

‘ಪ್ರತಿ ಕೇಂದ್ರದಲ್ಲಿ ಪೂರ್ವಾಭ್ಯಾಸಕ್ಕೆ 25 ಮಂದಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗುತ್ತದೆ. ಲಸಿಕೆ ಪಡೆಯಲು ಬಂದವರ ದಾಖಲಾತಿ ಪರಿಶೀಲನೆ, ಲಸಿಕೆ ವಿತರಣೆ, ನಿಗಾ ವ್ಯವಸ್ಥೆ, ಪೋರ್ಟಲ್‌ನಲ್ಲಿ ಮಾಹಿತಿ ನಮೂದನೆ ಸೇರಿದಂತೆ ವಿವಿಧ ಪ್ರಕ್ರಿಯೆಯನ್ನು ಸಿಬ್ಬಂದಿ ಇಡೀ ದಿನ ನಡೆಸಲಿದ್ದಾರೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ರಾಜ್ಯದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲು ಸರ್ಕಾರಿ ಕ್ಷೇತ್ರದ 2,73,211 ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. 2,780 ಶೀತಲೀಕರಣ ಘಟಕಗಳನ್ನು ರಾಜ್ಯ ಹೊಂದಿದೆ. ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಮೈಸೂರು, ಮಂಗಳೂರು, ಕಲಬುರ್ಗಿ ಮತ್ತು ಬಾಗಲಕೋಟೆಯಲ್ಲಿ ಲಸಿಕಾ ಉಗ್ರಾಣವನ್ನು ಸಿದ್ಧಗೊಳಿಸಲಾಗಿದೆ. ಲಸಿಕೆ ಹಾಕಲು 10 ಸಾವಿರ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು