ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆದರೂ ಮುಖಗವಸು ಕಡ್ಡಾಯ: ಆರೋಗ್ಯ ಇಲಾಖೆ ಸೂಚನೆ

Last Updated 19 ಡಿಸೆಂಬರ್ 2020, 15:54 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಲಸಿಕೆ ಪಡೆದರೂ ಮುಖಗವಸು ಧರಿಸುವಿಕೆ, ದೈಹಿಕ ಅಂತರ ಪಾಲನೆ, ಸೋಂಕು ನಿವಾರಕದಿಂದ ಕೈಗಳ ಸ್ವಚ್ಛತೆ ಸೇರಿದಂತೆ ವಿವಿಧ ಅಭ್ಯಾಸಗಳು ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಕೋವಿಡ್‌ ಲಸಿಕೆಗಳನ್ನು ರಾಜ್ಯಗಳಿಗೆ ವಿತರಿಸಲು ಕೇಂದ್ರ ಸರ್ಕಾರವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಕೂಡ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. 1,600ರಿಂದ 1,800 ಜನರಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ಮೊದಲು ನೀಡಲು ಇಲಾಖೆ ನಿರ್ಧರಿಸಿದೆ. 29,451 ಕೇಂದ್ರಗಳನ್ನು ಲಸಿಕೆ ವಿತರಣೆಗೆ ಗುರುತಿಸಲಾಗಿದೆ. ಲಸಿಕೆ ಹಾಕಲು 10 ಸಾವಿರ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ.

ದೇಶದ 12 ರಾಜ್ಯಗಳ 25 ಭಾಗಗಳಲ್ಲಿ ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಲಸಿಕೆ ಪಡೆದ ಬಳಿಕ ದೇಹದಲ್ಲಿ ಅಭಿವೃದ್ಧಿಯಾಗುವ ರೋಗನಿರೋಧಕ ಪ್ರತಿಕಾಯಗಳು ದೀರ್ಘಾವಧಿ ಇರದ ಕಾರಣ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಹಂತ ಹಂತವಾಗಿ ಕೋವಿಡ್ ಲಸಿಕೆ ವಿವಿಧ ವರ್ಗದವರಿಗೆ ದೊರೆಯಲಿದೆ. ಲಸಿಕೆ ಪಡೆದ ಬಳಿಕ ಕೂಡ ದೈಹಿಕ ಅಂತರ ಸೇರಿದಂತೆ ವಿವಿಧ ನಿಯಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.

ಕೋವಿಡ್ ಬಗ್ಗೆ ಗಣ್ಯರಿಂದ ಜಾಗೃತಿ: ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಜನವರಿ ಅಥವಾ ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಹೀಗಾಗಿ ಇಲಾಖೆಯು ಅಗತ್ಯ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಗಣ್ಯರಿಂದ ಜಾಗೃತಿ ಮೂಡಿಸಲಾರಂಭಿಸಿದೆ. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ಚಲನಚಿತ್ರ ನಟಾರದ ರಮೇಶ್ ಅರವಿಂದ್, ದರ್ಶನ್, ಪುನೀತ್ ರಾಜಕುಮಾರ್, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಸಂಸದೆ ಸುಮಲತಾ ಸೇರಿದಂತೆ ಹಲವರು ಕೋವಿಡ್ ಹರಡುವಿಕೆ ತಡೆಯಲು ನಿಯಮಗಳನ್ನು ಪಾಲಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಕೋವಿಡ್ ಪ್ರಕರಣಗಳು ಇಳಿಕೆಯಾದರೂ ಈ ಅವಧಿಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಶೀಘ್ರದಲ್ಲಿಯೇ ವಿವಿದ ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳು ಬರಲಿವೆ. ಅವು ಶೇಕಡಾ ನೂರರಷ್ಟು ಫಲಿತಾಂಶ ನೀಡುವ ಬಗ್ಗೆ ದೃಢಪಟ್ಟಿಲ್ಲ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಮುಂದಿನ ಆರು ತಿಂಗಳು ಪಾಲಿಸಬೇಕು’ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT