ಗುರುವಾರ , ಆಗಸ್ಟ್ 11, 2022
23 °C
‘ಗೋಮಾತೆ ಎಂದು ಪೂಜಿಸಿದಾಕ್ಷಣ ಗೋ ರಕ್ಷಣೆ ಆಗುವುದಿಲ್ಲ‘

ಗೋಹತ್ಯೆ ನಿಷೇಧ ‘ಕರಾಳ’ ಕಾನೂನು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ಕರಾಳ ಮಸೂದೆಯಾಗಿದ್ದು, ಇದರಿಂದ ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಇದು ಜಾರಿಯಾದರೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಉದ್ಭವಿಸಲಿದೆ ಎಂದು ಅವರು  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಮಾತೆ ಎಂದು ಪೂಜೆ ಮಾಡಿದಾಕ್ಷಣ ಗೋವಿನ ರಕ್ಷಣೆ ಆಗುವುದಿಲ್ಲ. ಮುದಿ ಹಸುಗಳು, ಎತ್ತುಗಳು, ಗಂಡು ಕರುಗಳನ್ನು ರೈತರು ಇಟ್ಟುಕೊಂಡು ಏನು ಮಾಡಬೇಕು? ಒಂದು ಹಸುವಿಗೆ ಪ್ರತಿ ದಿನ 5 ರಿಂದ 6 ಕೆ.ಜಿ ಮೇವು ಬೇಕಾಗುತ್ತದೆ. ರೈತನ ತನ್ನ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ವಯಸ್ಸಾದ, ಹಾಲು ಕೊಡದ, ಅಂಗವಿಕಲ ಜಾನುವಾರುಗಳನ್ನು ಹೇಗೆ ಸಾಕಲು ಸಾಧ್ಯ. ಅವನಿಗೆ ಎಲ್ಲಿಂದ ಹಣ ಬರುತ್ತದೆ ಎಂದು ಅವರು ಪ್ರಶ್ನಿಸಿದರು.

ಇಂತಹ ಜಾನುವಾರುಗಳನ್ನು ಗೋಶಾಲೆ ಮಾಡಿ ಸಾಕುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೆ, ಅದು ಸಾಧ್ಯವಿಲ್ಲದ ಮಾತು. ರಾಜ್ಯದಲ್ಲಿರುವ ಗೋಶಾಲೆಗಳಿಗೆ ಹೋಗಿ ನೋಡಿ, ಅಲ್ಲಿರುವ ಹಸುಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.

ದೇಶಕ್ಕೊಂದು ಕಾನೂನು ಮಾಡಲಿ:

ಬಿಜೆಪಿಗೆ ಗೋವಿನ ಬಗ್ಗೆ ಕಾಳಜಿ ಇದ್ದರೆ, ಗೋಹತ್ಯೆ ನಿಷೇಧ ಸಂಬಂಧ ದೇಶಕ್ಕೊಂದು ಕಾನೂನು ತರಲಿ. ಅದಕ್ಕೊಂದು ನೀತಿ ಮಾಡಿ, ತಜ್ಞರ ಸಮಿತಿ ರಚಿಸಿ ಸಾಮಾಜಿಕ– ಆರ್ಥಿಕ ಅಧ್ಯಯನ ನಡೆಸಲಿ. ಅದರ ವರದಿಯನ್ನು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಚರ್ಚೆಯಾಗಬೇಕು. ಸಾರ್ವಜನಿಕರೂ ಚರ್ಚಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ದೇಶದಲ್ಲಿ 1964 ರಲ್ಲಿ ಗೋಹತ್ಯೆ ನಿಷೇಧ ಕಾನೂನು ತಂದಿದ್ದು ಬಿಜೆಪಿಯಲ್ಲ. ಕಾಂಗ್ರೆಸ್‌ ಪಕ್ಷ ಆ ಕಾನೂನು ಜಾರಿಗೆ ತಂದಿತು. ಈ ತಿದ್ದುಪಡಿ ಮಾಡಿ ಹೊಸ ಕಾನೂನು ತರಲು ಹೊರಟ್ಟಿದ್ದು ಸರಿಯಲ್ಲ. ಈ ತರಲು ಹೊರಟಿರುವ ಕಾನೂನು ಅವೈಜ್ಞಾನಿಕ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ನ ಇತರ ನಾಯಕರಾದ ಈಶ್ವರಖಂಡ್ರೆ, ಸಲೀಂ ಅಹಮದ್‌, ಪ್ರಿಯಾಂಕ್‌ ಖರ್ಗೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು