ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಅವರನ್ನು ಭೇಟಿಯಾದ ಯೋಗೇಶ್ವರ, ರಾಮದಾಸ್‌

ಮುಚ್ಚಿದ ಲಕೋಟೆಯಲ್ಲಿ ಕಾರಣ ಕೊಟ್ಟಿದ್ದೇನೆ– ರಾಮದಾಸ್‌
Last Updated 14 ಆಗಸ್ಟ್ 2021, 6:32 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳಾದ ಸಿ.ಪಿ. ಯೋಗೇಶ್ವರ ಮತ್ತು ಎಸ್‌.ಎ. ರಾಮದಾಸ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಭೇಟಿ ಮಾಡಿ, ಕೆಲಹೊತ್ತು ಮಾತುಕತೆ ನಡೆಸಿದರು.

ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ರಾಮದಾಸ್‌, ‘ಮೈಸೂರಿಗೆ ಮುಖ್ಯಮಂತ್ರಿ ಬಂದಿದ್ದಾಗ ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಯಾಕೆ ಭೇಟಿ ಮಾಡಿಲ್ಲ ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ, ಇವತ್ತು ಭೇಟಿ ಮಾಡಿ ಲಕೋಟೆ ಕೊಟ್ಟಿದ್ದೇನೆ’ ಎಂದರು.

‘ಪತ್ರದಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಸಮಯ ಸಿಕ್ಕಿದಾಗ ಪತ್ರವನ್ನು ಓದುವಂತೆಯೂ ಮುಖ್ಯಮಂತ್ರಿಗೆ ಹೇಳಿದ್ದೇನೆ’ ಎಂದರು.

‘ನಾನೊಬ್ಬ ಸ್ವಯಂಸೇವಕ. ಪಕ್ಷ ಕಟ್ಟುವ ಕಷ್ಟದ ಅನುಭವ ಇದೆ. ಪಕ್ಷದ ವಿರುದ್ಧ ನನ್ನ ಅಭಿಪ್ರಾಯ, ಅಸಮಾಧಾನ ಹೇಳಿಕೊಂಡಿಲ್ಲ. ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಯ ಮಗ. ಹೀಗಾಗಿ ಪರಿಸ್ಥಿತಿಗಳು ಅವರಿಗೆ ಗೊತ್ತಿದೆ’ ಎಂದರು.

ಸಚಿವ ಸ್ಥಾನದ ವಿಷಯದಲ್ಲಿ ಮೈಸೂರಿಗೆ ಅನ್ಯಾಯ ಆಗಿರುವ ಬಗ್ಗೆ ಕೇಳಿದ ಪ‍್ರಶ್ನೆಗೆ, ‘ಈ ವಿಚಾರ ಮೈಸೂರಿನ ನಾಯಕರಿಗೆ ಗೊತ್ತಿದೆ. ಮೈಸೂರಿನಲ್ಲಿ ಬಿಜೆಪಿ ದುರ್ಬಲ‌ ಅಲ್ಲ. ಆದರೆ, ಪರಿಸ್ಥಿಯ ಕಾರಣಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ’ ಎಂದರು.

ಸಚಿವ ಆನಂದ್ ಸಿಂಗ್ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆನಂದ್‌ ಸಿಂಗ್‌ ನನ್ನ ಆತ್ಮೀಯ ಸ್ನೇಹಿತ. ರಾಜಕೀಯದಲ್ಲಿ ಒಬ್ಬೊಬ್ಬರ ನಿಲುವು ಒಂದೊಂದು ಥರ ಇರುತ್ತದೆ’ ಎಂದರು.

ಯಾವ ಅಸಮಾಧಾನವೂ ಇಲ್ಲ: ಯೋಗೇಶ್ವರ ಮಾತನಾಡಿ ‘ನನಗೆ ಯಾವ ಅಸಮಾಧಾನವೂ ಇಲ್ಲ. ನಾನು ಪಕ್ಷದ ಕಾರ್ಯಕರ್ತ. ಕಾರ್ಯಕರ್ತನಾಗಿ ಇರುತ್ತೇನೆ’ ಎಂದರು.

‘ಮುಖ್ಯಮಂತ್ರಿ ಅವರನ್ನು ಈ ಹಿಂದೆಯೂ ಭೇಟಿ ಮಾಡಿದ್ದೆ. ಮಾಧ್ಯಮಗಳ ಮುಂದೆ ಈಗ ಬಂದಿದ್ದೇನೆ ಅಷ್ಟೇ. ಯಾವುದೇ ವಿಶೇಷ ಇಲ್ಲ’ ಎಂದೂ ಹೇಳಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ’ ಎಂದಷ್ಟೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT