ಭಾನುವಾರ, ಸೆಪ್ಟೆಂಬರ್ 25, 2022
21 °C

ಕೌಟುಂಬಿಕ ಕಲಹ; ತಂದೆಯನ್ನು ಹತ್ಯೆ ಮಾಡಿದ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕೌಟುಂಬಿಕ ಕಲಹದಿಂದ ಸಿಟ್ಟಿಗೆದ್ದ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಣೇಶ್‌ ಚಿಕ್ಕನಟ್ಟಿ (58) ಮೃತರು. ಕೊಲೆ ಮಾಡಿದ ಬಳಿಕ ಆರೋಪಿ ವಿಜಯ್‌ (24) ಪೊಲೀಸರಿಗೆ ಶರಣಾಗಿದ್ದಾನೆ.

‘ಮೃತ ಗಣೇಶ್‌ ಚಿಕ್ಕನಟ್ಟಿ ಪ್ರತಿದಿನ ಬೆಳಿಗ್ಗೆ ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಇದರಿಂದ ಮನೆಯಲ್ಲಿ ದಿನಂಪ್ರತಿ ಜಗಳ ನಡೆಯುತ್ತಿತ್ತು. ಅವರ ಇಬ್ಬರು ಮಕ್ಕಳು ಕೂಡ ಮನೆ ಬಿಟ್ಟು ಹೋಗಿದ್ದರು. ಕುಡಿದು ಗಲಾಟೆ ಮಾಡುವುದರ ಜತೆಗೆ ಮನೆಯ ವಾಸ್ತು ಸರಿ ಇಲ್ಲ; ಮನೆ ಒಡೆದು ಹಾಕುವೆ ಎಂದು ಹೇಳುತ್ತಿದ್ದರು. ಬುಧವಾರ ನಡೆದ ಜಗಳದಲ್ಲಿ ವಿಜಯ್‌ ತಂದೆಯನ್ನು ಹತ್ಯೆ ಮಾಡಿದ್ದಾನೆ’ ಎಂದು ಗದಗ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ತಂದೆಯನ್ನು ಕೊಲೆ ಮಾಡಿದ ವಿಷಯವನ್ನು ವಿಜಯ್‌ ಊರಿನ ಕೆಲವರಿಗೆ ತಿಳಿಸಿದ್ದಾನೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಶರಣಾಗಿದ್ದಾನೆ’ ಎಂದು ಅವರು ತಿಳಿಸಿದರು.

ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.