ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ ಸಿಸಿಬಿಗೆ

Last Updated 25 ಆಗಸ್ಟ್ 2020, 21:14 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ್ದ ಪ್ರಕರಣವನ್ನು ಈಗಾಗಲೇ ಸಿಸಿಬಿಗೆ ವಹಿಸಲಾಗಿದ್ದು, ಇದೀಗ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣವನ್ನೂ ಸಿಸಿಬಿಗೆ ಒಪ್ಪಿಸಲಾಗಿದೆ.

ಡಿ.ಜೆ. ಹಳ್ಳಿ ಠಾಣೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದ ಗಲಭೆಕೋರರ ವಿರುದ್ಧ ಇನ್‌ಸ್ಪೆಕ್ಟರ್ ಕೇಶವಮೂರ್ತಿ ದೂರು ನೀಡಿದ್ದರು. ಕೆ.ಜಿ.ಹಳ್ಳಿ ಠಾಣೆಗೆ ನುಗ್ಗಿ ಪೊಲೀಸರ ಕೊಲೆಗೆ ಯತ್ನಿಸಿ ಗಲಾಟೆ ಮಾಡಿದ್ದವರ ವಿರುದ್ಧ ಇನ್‌ಸ್ಪೆಕ್ಟರ್ ಅಜಯ್ ಸಾರಥಿ ದೂರು ಕೊಟ್ಟಿದ್ದರು.

ಎರಡೂ ಪ್ರಕರಣಗಳನ್ನು ಸಿಸಿಬಿಗೆ ವಹಿಸಿ ಕಮಿಷನರ್ ಕಮಲ್ ಪಂತ್ ಈ ಹಿಂದೆಯೇ ಆದೇಶ ಹೊರಡಿಸಿದ್ದರು. ಘಟನೆ ನಡೆದ ರಾತ್ರಿಯಿಂದಲೇ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಇದುವರೆಗೂ 65 ಆರೋಪಿಗಳನ್ನು ಬಂಧಿಸಿದ್ದಾರೆ.

ಕಾವಲ್ ‌ಭೈರಸಂದ್ರದಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ಮಾಡಿ ಸುಟ್ಟಿರುವ ಗಲಭೆಕೋರರ ವಿರುದ್ಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಡಿ.ಜೆ.ಹಳ್ಳಿ ಠಾಣೆಗೆ ಪ್ರತ್ಯೇಕವಾಗಿ ದೂರು ಕೊಟ್ಟಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಕಮಲ್ ಪಂತ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ಅದರನ್ವಯ ಸಿಸಿಬಿ ಹಿರಿಯ ಅಧಿಕಾರಿಗಳು, ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು, ಕಾರ್ಪೋರೇಟರ್ ಸಂಪತ್ ರಾಜ್ ಅವರ ಆಪ್ತ ಸಹಾಯಕ ಅರುಣ್‌ಕುಮಾರ್‌ನನ್ನು ಬಂಧಿಸಿದ್ದರು. ವಿಚಾರಣೆಗಾಗಿ ಆತನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ಸೋಮವಾರ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆತನನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಗಲಭೆ ಸಂಬಂಧ 65ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆಯನ್ನು ಪೂರ್ವ ವಿಭಾಗದ ಪೊಲೀಸರೇ ನಡೆಸುತ್ತಿದ್ದಾರೆ.

ರೌಡಿ ಪಟ್ಟಿ ತೆರೆಯಲು ಸಿದ್ಧತೆ: ಗಲಭೆ ಸಂಬಂಧ ಬಂಧಿಸಲಾಗಿರುವ ಆರೋಪಿಗಳ ವಿರುದ್ಧ ರೌಡಿ ಪಟ್ಟಿ ತೆರೆಯಲು ಸಿದ್ಧತೆ ನಡೆಯುತ್ತಿದ್ದು, ಪೂರ್ವ ವಿಭಾಗದ ಪೊಲೀಸರು ದಾಖಲೆಗಳನ್ನು ಹೊಂದಿಸುತ್ತಿದ್ದಾರೆ. ಸದ್ಯದಲ್ಲೇ ಡಿಸಿಪಿ ಮೂಲಕ ಕಮಿಷನರ್ ಅವರಿಗೆ ಪ್ರಸ್ತಾವ ಕಳುಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT