ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ.ಪ್ರಕರಣದ ಯುವತಿಗೆ ಒಂದು ರೂಪಾಯಿಯೂ ನೀಡಿಲ್ಲ: ಡಿ.ಸುಧಾಕರ್

Last Updated 4 ಏಪ್ರಿಲ್ 2021, 21:51 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಹಗರಣದಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡಿರುವುದು ಕಂಡು ಆಚ್ಚರಿಯಾಗಿದೆ. ನನಗೂ, ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಮಾಜಿ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.

ಚಳ್ಳಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸಿ.ಡಿ ಪ್ರಕರಣದಲ್ಲಿರುವ ಯುವತಿಗೆ ಹಣ ವರ್ಗಾವಣೆ ಮಾಡಿದ್ದೇನೆ ಎಂಬುದು ಸುಳ್ಳು. ಯಾರಿಗೂ ಒಂದು ರೂಪಾಯಿಯನ್ನೂ ನೀಡಿಲ್ಲ. ಎಸ್ಐಟಿ ತನಿಖೆಗೆ ಕರೆದರೆ ಸಹಕರಿಸುವೆ. ಸತ್ಯ ಹೇಳಲು ನಾನೇಕೆ ಭಯಪಡಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಯುವತಿಯೊಂದಿಗೆ ದೂರವಾಣಿಯಲ್ಲಿ ಹಲವು ಬಾರಿ ಮಾತನಾಡಿರುವುದಾಗಿ ಮಾಧ್ಯಮಗಳು ಬಿತ್ತರಿಸಿವೆ. ಇದು ತಪ್ಪು ಸಂದೇಶಕ್ಕೆ ಎಡೆಮಾಡಿಕೊಡುತ್ತಿದೆ. ಚಿತ್ರದುರ್ಗದ ರಾಜಕಾರಣಿಯೊಬ್ಬರು ಪ್ರಕರಣದಲ್ಲಿದ್ದಾರೆ ಎಂಬ ಮಾತು ಹಲವು ದಿನಗಳಿಂದ ಕೇಳಿ
ಬರುತ್ತಿತ್ತು.ಭಯ ಇದ್ದಿದ್ದರೆ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿ ಪ್ರಕಟವಾಗದಂತೆ ತಡೆಯಾಜ್ಞೆ ತರುತ್ತಿದ್ದೆ. ಯಾವುದೇ ತಪ್ಪು ಮಾಡದಿರುವುದರಿಂದ ನಿರ್ಭೀತಿಯಿಂದ ಇದ್ದೇನೆ’ ಎಂದರು.

‘ಶಾಸಕ, ಸಚಿವನಾಗಿ ಕೆಲಸ ಮಾಡಿರುವುದರಿಂದ ನಿತ್ಯ ನೂರಾರು ಜನರು ದೂರವಾಣಿಯಲ್ಲಿ ಸಂಪರ್ಕಿಸುತ್ತಾರೆ. ಅವರ ಗುರುತು ಇಟ್ಟುಕೊಳ್ಳುವುದು ಕಷ್ಟ. ಆದರೆ, ಸ್ವತಃ ನಾನು ಯಾರೊಬ್ಬರನ್ನೂ ಸಂಪರ್ಕಿಸಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಆಪ್ತವಾಗಿರುವ ಕಾರಣಕ್ಕೆ ಇಂತಹ ಪ್ರಕರಣದಲ್ಲಿ ಸಿಲುಕಿಸುವುದು ತಪ್ಪು’ ಎಂದರು.

ತನಿಖೆಯ ವೇಳೆ, ಮಾಜಿ ಸಚಿವ ಡಿ.ಸುಧಾಕರ್ ಸಂತ್ರಸ್ತೆಯ ಜೊತೆ ಮೊಬೈಲ್‌ ಸಂಪರ್ಕ ಹೊಂದಿದ್ದರು. ಹಣದ ವ್ಯವಹಾರವನ್ನೂ ನಡೆಸಿದ್ದರು ಎಂಬುದಕ್ಕೆ ಸಾಕ್ಷ್ಯ ಲಭಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಭಾನುವಾರ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT