ಮಂಗಳವಾರ, ಜನವರಿ 25, 2022
24 °C

ಡೈರಿ ಕೇಸ್: ಐಟಿ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಡೈರಿ ಪ್ರಕರಣದ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಇಂದಿರಾನಗರ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಸಂಬಂಧ ಆದಾಯ ತೆರಿಗೆ (ತನಿಖೆ) ಮಹಾನಿರ್ದೇಶಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ‘ಗೋವಿಂದರಾಜು ನೀಡಿದ್ದ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ದುರುದ್ದೇಶ ಪೂರ್ವಕವಾಗಿ ಇದ್ದಂತಿದೆ. ಠಾಣಾಧಿಕಾರಿ, ದೂರುದಾರರ ಆಣತಿಯ ಮೇರೆಗೆ ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಪೊಲೀಸ್ ಠಾಣೆಯ ಅಧಿಕಾರಿ ಅಪರಾಧ ದಂಡ ಸಂಹಿತೆಯ ಕಲಂ 91 ಅನ್ನು ಬಳಸಿ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳಿಗೆ ಸಮನ್ಸ್ ನೀಡಿರುವುದು ಸರಿಯಾದ ಕ್ರಮವಲ್ಲ. ಆದಾಯ ತೆರಿಗೆ ಕಾಯ್ದೆ ಕಲಂ 293ರ ಪ್ರಕಾರ ಸರ್ಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧ ಯಾವುದೇ ದಾವೆ, ವಿಚಾರಣೆ ಮತ್ತು ಇತರ ಪ್ರಕ್ರಿಯೆಗಳನ್ನು ನಡೆಸಲು ಅವಕಾಶವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2016ರ ಮಾರ್ಚ್ 15ರಂದು ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಮನೆಯ ಮೇಲೆ ದಾಳಿ ನಡೆಸಿ ಅವರ ಬೆಡ್‌ರೂಮ್‌ನಲ್ಲಿ ಡೈರಿ ವಶಪಡಿಸಿಕೊಂಡಿದ್ದರು. ಆ ಡೈರಿಯಲ್ಲಿ ಉಲ್ಲೇಖಿಸಲಾಗಿದ್ದ ಅಂಶ ಮತ್ತು ಹೆಸರುಗಳನ್ನು ಆಧರಿಸಿ ಐಟಿ ಅಧಿಕಾರಿಗಳು ಹಲವು ವ್ಯಕ್ತಿಗಳು, ಸಚಿವರನ್ನು ವಿಚಾರಣೆಗೆ ಕರೆಯಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು.

2017ರ ಫೆಬ್ರುವರಿಯಲ್ಲಿ ಮಾಧ್ಯಮಗಳಲ್ಲಿ ಡೈರಿಯಲ್ಲಿನ ಕೆಲ ಅಂಶಗಳು ಬಹಿರಂಗವಾಗಿದ್ದವು. ಫೆಬ್ರುವರಿ 28ರಂದು ಗೋವಿಂದರಾಜು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ, ಆದಾಯ ತೆರಿಗೆ ಅಧಿಕಾರಿಗಳೇ ಮಾಹಿತಿ ಸೋರಿಕೆ ಮಾಡಿದ್ದಾರೆಂದು ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ಐಟಿ ಅಧಿಕಾರಿಗಳ ವಿರುದ್ಧ ಎಫ್ಐ‌ಆರ್ ದಾಖಲಿಸಿದ್ದರು. ಈ ಎಫ್‌ಐಆರ್ ಅನುಸಾರದ ತನಿಖೆಗೆ ಹೈಕೋರ್ಟ್ 2017ರ ಜುಲೈನಲ್ಲಿ ತಡೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು