ಭಾನುವಾರ, ಸೆಪ್ಟೆಂಬರ್ 25, 2022
20 °C

ದಕ್ಷಿಣ ಕನ್ನಡ: ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುವ ಸಂದೇಶ– ಐದು ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ದ್ವೇಷ ಹರಡುವಂತಹ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ಇನ್ನು ಕೆಲವರು ದ್ವೇಷಪೂರಿತ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹ ಆಕ್ಷೇಪಾರ್ಹ ಮಾಹಿತಿ ಹಂಚಿಕೊಳ್ಳುವವರ ವಿರುದ್ಧ ನಗರ ಪೊಲೀಸ್‌ ಕಮಿಷನರೇಟ್‌ನ ಸಾಮಾಜಿಕ ಜಾಲತಾಣ ಕೋಶವು ಹದ್ದಿನ ಕಣ್ಣಿಟ್ಟಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಐದು ಆಕ್ಷೇಪಾರ್ಹ ಸಂದೇಶಗಳನ್ನು ಪತ್ತೆಹಚ್ಚಿರುವ ಪೊಲೀಸರು, ಸೈಬರ್‌, ಆರ್ಥಿಕ ಮತ್ತು ಮಾದಕ ವಸ್ತುಗಳಿಗೆ ಸಂಬಂಧಿಸಿದ (ಸೆನ್‌) ಅಪರಾಧಗಳ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಡಳಿತವು ಶನಿವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ, ದ್ವೇಷಪೂರಿತ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಐದು ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದಿದ್ದ ವ್ಯಕ್ತಿಯೊಬ್ಬರು ಸಂದೇಶವೊಂದಕ್ಕೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ‘ಇವತ್ತು ಇನ್ನೊಂದು ಕೊಲೆ ನಡೆಸುತ್ತೇವೆ’ ಎಂದು ಶುಕ್ರವಾರ ಅಭಿಪ್ರಾಯ ಹಂಚಿಕೊಂಡಿದ್ದರು. ಅದೇ ದಿನ ಇನ್ನೊಬ್ಬ ವ್ಯಕ್ತಿ ‘ಪಕ್ಕಾ ಇವತ್ತು ಇನ್ನೊಂದು‘ ಎಂದು ಅಭಿಪ್ರಾಯ ಹಂಚಿಕೊಂಡಿದ್ದರು. ಈ ಎರಡೂ ಸಂದೇಶಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ನಕಲಿ ಖಾತೆ ತೆರೆದಿರುವ ಇನ್ನೊಬ್ಬ ವ್ಯಕ್ತಿ, ‘ಕರಾವಳಿಯಲ್ಲಿ ದೊಡ್ಡ ಮಟ್ಟದ ಕೋಮುಸಂಘರ್ಷ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ರಾಜ್ಯ ಗುಪ್ತಚರ ದಳ ಮಾಹಿತಿ, ಸಹೋದರರೇ ಎಚ್ಚರ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಸಂದೇಶ ಹರಿಯಬಿಟ್ಟಿದ್ದರು. ಇನ್ನೊಬ್ಬ ವ್ಯಕ್ತಿ ಮಾಜಿ ಶಾಸಕರೊಬ್ಬರ ಹತ್ಯೆಗೆ ಕುಮ್ಮಕ್ಕು ನೀಡುವ ಸಂದೇಶ ಹಂಚಿಕೊಂಡಿದ್ದರು. ಮತ್ತೊಬ್ಬರು ‘ಸ್ವಾಮಿ ಅವರು ಒಂದು ತೆಗೆದರೆ, ನಾವು ಹತ್ತು ತಲೆ ತೆಗೆಯಬೇಕು’ ಎಂಬ ಮಾಹಿತಿ ಹಂಚಿಕೊಂಡಿದ್ದರು. ಈ ಸಂದೇಶಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಮಾಹಿತಿ ಹಕ್ಕು ಕಯ್ದೆಯ ಸೆಕ್ಷನ್‌ 66 (ಸಿ),  ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153 (ಎ) ಹಾಗೂ 505 (2) ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹಬ್ಬಿಸುವ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ನಿಗಾ ಇಟ್ಟಿದ್ದೇವೆ. ಅನಾಮಧೇಯ ಖಾತೆಗಳನ್ನು ತೆರೆದು ಮನಬಂದಂತೆ ದ್ವೇಷ ಹರಡುವ ಮಾಹಿತಿ ಹಂಚಿಕೊಳ್ಳುವವರು, ಇನ್ನೊಬ್ಬರ ರಕ್ತ ಕುದಿಯುವಂತಹ ಸಂದೇಶ ಹಂಚಿಕೊಂಡವರು ಅನೇಕರು ಇದ್ದಾರೆ. ಪ್ರಚೋದನಾಕಾರಿ ಸಂದೇಶಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಅಂತಹವರನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ನಗರ ಪೊಲೀಸ್‌ ಕಮಿನಷರ್‌ ಎನ್‌.ಶಶಿಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ಕೊಲೆಗೆ ಪ್ರತೀಕಾರ ತೀರಿಸುತ್ತೇವೆ ಎಂಬ ಸಂದೇಶಗಳನ್ನು ಸಮುದಾಯ ಹಾಗೂ ಜಾತಿಗಳನ್ನು ಕೇಂದ್ರೀಕರಿಸಿ ಕೆಲವರು ಹಂಚಿಕೊಂಡಿದ್ದಾರೆ. ಈ ಕುರಿತು ಐದು ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ.  ಖಾಸಗಿ ವ್ಯಕ್ತಿಯ ಖಾತೆಯ ಮೂಲಕ ನೀಡಿರುವ ಸಂದೇಶ, ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹಂಚಿಕೊಂಡ ಸಂದೇಶ, ಡಿಜಿಟಲ್‌ ಸುದ್ದಿಗೆ ಸಂಬಂಧಿಸಿ ದಾಖಲಿಸುವ ಅಭಿಪ್ರಾಯಗಳನ್ನು ಆಧರಿಸಿ ಎಫ್‌ಐಆರ್‌ ದಾಖಲಿಸುತ್ತೇವೆ. ಗುಂಪಿನಲ್ಲಿ ಗೋವಿಂದ ಎಂಬ ರೀತಿ ಕೆಲಸ ಮಾಡುವವರ ದಾಖಲೆಗಳನ್ನೂ ಸಂಗ್ರಹಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಅನಾಮಧೇಯ ಖಾತೆ ತೆರೆದರೆ ಯಾರಿಗೂ ನಮ್ಮ ಗುರುತು ಪತ್ತೆಯಾಗದು, ‌ಸಂದೇಶವನ್ನು ಹಂಚಿಕೊಂಡು ಡಿಲೀಟ್‌ ಮಾಡಿದರೆ, ಯಾರಿಗೂ ತಿಳಿಯದು ಎಂಬ ಭ್ರಮೆ ಬೇಡ. ಎಂಟು  ಪೊಲೀಸ್‌ ಸಿಬ್ಬಂದಿಯನ್ನು ಒಳಗೊಂಡ ತಂಡ ಇಂತಹ ಸಂದೇಶಗಳ ಮೇಲೆ ನಿರಂತರವಾಗಿ ಕಣ್ಣಿಡುತ್ತಿದೆ. ಭಾವನಾತ್ಮಕವಾಗಿ ಕೆರಳಿಸುವುದು, ಕೆಟ್ಟ ಭಾವನೆ ಮೂಡಿಸುವುದು, ಪಕ್ಷ ಜಾತಿ ಸಂಘಟನೆ ಹೆಸರಿನಲ್ಲಿ ವಾಟ್ಸಾಪ್‌ ಗುಂಟು ರಚಿಸಿ ದುರುದ್ದೇಶದಿಂದ ಕೂಡಿದ ಸಂದೇಶ ಹಂಚಿಕೊಳ್ಳುವುದು, ಅಂತಹ ಸಂದೇಶಗಳಿಗೆ ಮೆಚ್ಚುಗೆ ಸೂಚಿಸುವ ಕೃತ್ಯ ನಡೆಸುವವರೆಲ್ಲ ನ್ಯಾಯಾಲಯಕ್ಕೆ ಅಲೆಯುವ ದಿನ ಬರಲಿದೆ’ ಎಂದು ಎಚ್ಚರಿಸಿದರು.  

‘ಹತ್ಯೆಯ ಅಥವಾ ಆರೋಪಿಗಳ ಬಂಧನದ ಬಗ್ಗೆಯೂ ಸುಳ್ಳು ಮಾಹಿತಿ ಹಬ್ಬಿಸಬಾರದು. ಗಂಭೀರ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಪ್ರಕರಣಗಳಿವು. ಕೊಲೆ ಪ್ರಕರಣಗಳ ತನಿಖೆಯ ಬೆಳವಣಿಗೆ ಕುರಿತ ಅಧಿಕೃತ ಮಾಹಿತಿಯನ್ನು ಪೊಲೀಸ್‌ ಇಲಾಖೆ ನೀಡುತ್ತದೆ. ‌ಸಾರ್ವಜನಿಕರು ಕೂಡಾ ಸುಳ್ಳು ಸುದ್ದಿಗಳಿಗೆ, ವದಂತಿಗಳಿಗೆ ಕಿವಿಗೊಡಬಾರದು‌’ ಎಂದರು.

‘ಜಿಲ್ಲಾಡಳಿತ ಮನಸ್ಸು ಮಾಡಿದರೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದು ದೊಡ್ಡ ವಿಚಾರ ಅಲ್ಲ. ನಾನು ಅಥವಾ ಜಿಲ್ಲಾಧಿಕಾರಿ ಸೂಚನೆ ನೀಡುವ ಮೂಲಕ ಇದನ್ನು ಮಾಡಿಸಬಹುದು. ಆದರೆ, ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಇಂಟರ್ನೆಟ್‌ ಸೇವೆಯ ಅಗತ್ಯವಿದೆ. ಇದನ್ನೆಲ್ಲ ಮನಗಂಡು ಅಂತಹ ಕಠಿಣ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು