ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಪರಿಹಾರ ನಿಧಿ: ಅಲಕ್ಷಿತ ಸಮುದಾಯಗಳಿಗೆ ನೆರವು

Last Updated 2 ಆಗಸ್ಟ್ 2021, 22:49 IST
ಅಕ್ಷರ ಗಾತ್ರ

‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಕೋವಿಡ್–19 ಪರಿಹಾರ ನಿಧಿ’ಯಡಿ ಸಂಗ್ರಹವಾಗಿರುವ ದೇಣಿಗೆಯಲ್ಲಿ ಈಗಾಗಲೇ 18 ಎನ್‌ಜಿಒಗಳಿಗೆ ತಲಾ ₹5 ಲಕ್ಷ ನೆರವು ನೀಡಿದ್ದೇವೆ. ಹೊಸದಾಗಿ ಮತ್ತೆ ಮೂರು ಎನ್‌ಜಿಒಗಳಿಗೆ ತಲಾ ₹ 5 ಲಕ್ಷ ನೆರವು ನೀಡಲಾಗುತ್ತಿದೆ. ಇದಲ್ಲದೆ ಉಳಿದಿರುವ ಮೊತ್ತವನ್ನು ಎಲ್ಲ 21 ಸಂಸ್ಥೆಗಳಿಗೆ ಸಮಾನವಾಗಿ ಹಂಚಲಿದ್ದೇವೆ.

***

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ‘ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌’ (ಎಸ್‌ವಿವೈಎಂ), ಸಮುದಾಯವನ್ನು ತಳಮಟ್ಟದಲ್ಲಿ ಅಭಿವೃದ್ಧಿಪಡಿಸುವ ಸಂಸ್ಥೆ. ಇದು ಬುಡಕಟ್ಟು ಮತ್ತು ಇತರ ಅಲಕ್ಷಿತ ಸಮುದಾಯದವರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಜನರ ಆರೋಗ್ಯ, ಶಿಕ್ಷಣ, ಸಾಮಾಜಿಕ, ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಸ್ಥಳೀಯ, ಹೊಸಬಗೆಯ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪರಿಹಾರಗಳನ್ನು ಬಳಸಿಕೊಂಡು ಈ ಜನರ ಪ್ರಗತಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

ಕೋವಿಡ್‌–19ರ ಪೀಡಿತ ಕುಟುಂಬಗಳ ಜೀವನವನ್ನು ಸರಿದೂಗಿಸುವ ಗುರಿಯನ್ನು ಎಸ್‌ವಿವೈಎಂ ಹೊಂದಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ
ವೃತ್ತಿಪರ ತರಬೇತಿ ಕೋರ್ಸ್‌ಗಳನ್ನು ನಡೆಸಲು ಯೋಜಿಸಿದೆ. ಕೃಷಿ ಆಧಾರಿತ ತರಬೇತಿ (ಹೈನುಗಾರಿಕೆ, ಜೇನು ಕೃಷಿ, ರೇಷ್ಮೆ), ಉದ್ಯಮಶೀಲತಾ ಅಭಿವೃದ್ಧಿ, ಫ್ಯಾಷನ್ ಡಿಸೈನಿಂಗ್‌, ಬ್ಯೂಟಿಷಿಯನ್ ಕೋರ್ಸ್‌ಗಳು, ಕಂಪ್ಯೂಟರ್ ತರಬೇತಿ, ಎಲೆಕ್ಟ್ರೀಷಿಯನ್ ಮತ್ತು ಪ್ಲಂಬಿಂಗ್‌ ವಿಷಯಗಳಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದೆ.

ಯೂತ್‌ ಫಾರ್‌ ಸೇವಾ

ಬೆಂಗಳೂರು ಬಿಟ್ಟು ಉಳಿದೆಡೆ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿರುವ ‘ಯೂತ್ ಫಾರ್ ಸೇವಾ’, ರಾಷ್ಟ್ರವ್ಯಾಪಿ ಸ್ವಯಂ ಸೇವಕರನ್ನು ಹೊಂದಿರುವ ಸಂಸ್ಥೆ. ಸ್ವಯಂ ಸೇವಕರ ಮೂಲಕವೇ ಬದಲಾವಣೆ ತರುವ ಗುರಿಯನ್ನು ಇದು ಹೊಂದಿದೆ.

ಸಮಾಜದಲ್ಲಿನ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು 2009ರಲ್ಲಿ ‘ವಿದ್ಯಾ ಚೇತನಾ’ ಕಾರ್ಯಕ್ರಮವನ್ನು ಸಂಸ್ಥೆ ಅರಂಭಿಸಿತು. ಇದರಡಿ ಇಲ್ಲಿಯವರೆಗೆ ಸುಮಾರು 5,000 ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಇದೀಗ ‘ವಿದ್ಯಾ ಚೇತನಾ– ಆಲಂಬನ್‌’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೋವಿಡ್‌–19ರಿಂದ ಒಬ್ಬರು ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ನಾಲ್ಕು ಸಾವಿರ ಮಕ್ಕಳಿಗೆ ನೆರವು ನೀಡುವ ಗುರಿ ಹೊಂದಿರುವ ಈ ಕಾರ್ಯಕ್ರಮಕ್ಕೆ ಇಲ್ಲಿಯವರೆಗೆ 2,500 ಮಕ್ಕಳನ್ನು ಗುರುತಿಸಲಾಗಿದೆ.

ದಿ ಸೊಸೈಟಿ ಫಾರ್‌ ಎಂಪವರ್ಮೆಂಟ್‌ ಥ್ರೂ ವಾಲೆಂಟರಿ ಆಕ್ಷನ್‌ ಇನ್‌ ಕರ್ನಾಟಕ (ಸೇವಕ್‌)

ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ದಿ ಸೊಸೈಟಿ ಫಾರ್‌ ಎಂಪವರ್ಮೆಂಟ್‌ ಥ್ರೂ ವಾಲೆಂಟರಿ ಆಕ್ಷನ್‌ ಇನ್‌ ಕರ್ನಾಟಕ’ (ಎಸ್‌ಇವಿಎಕೆ–ಸೇವಕ್‌) ಸಮುದಾಯ ಆಧಾರಿತ ಸಂಸ್ಥೆಗಳನ್ನು ರೂಪಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ ಚಟುವಟಿಕೆಗಳನ್ನು ಕೈಗೊಂಡಿದೆ. ಅಲ್ಲದೆ ಈ ಜನರಿಗೆ ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದೆ.

ಕೋವಿಡ್‌ ಪಿಡುಗಿನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸುವ ಉದ್ದೇಶ
ದಿಂದ ‘ಸೇವಕ್‌’ ಅಲಕ್ಷಿತ ಸಮುದಾಯಗಳ ಕುಟುಂಬಗಳನ್ನು ಗುರುತಿಸಿದೆ. ದೇವದಾಸಿಯರ ಕುಟುಂಬಗಳು, ಮನೆ ಕೆಲಸಗಾರರು, ಮಹಿಳೆಯರ ನೇತೃತ್ವದ ಕುಟುಂಬಗಳು ಮತ್ತು ಪ್ರಬುದ್ಧರಾಗುವ ಮೊದಲೇ ವಿವಾಹವಾದವರಿಗೆ ನೆರವಾಗುತ್ತಿದೆ. ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಈ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಅವರ ಆದಾಯ ವೃದ್ಧಿಗೆ ನೆರವಾಗುವ ಗುರಿಯನ್ನು ಹೊಂದಿದೆ. ಇದಲ್ಲದೆ, ಕೋವಿಡ್‌ ಲಸಿಕೆಯ ಅಭಿಯಾನದಲ್ಲಿ ಇದು ಬೆಳಗಾವಿ ಜಿಲ್ಲೆಯ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈ ಮೂಲಕ ಕೋವಿಡ್‌ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT