ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನಾಶವೇ ಭೂಕುಸಿತಕ್ಕೆ ಕಾರಣ: ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

Last Updated 1 ಏಪ್ರಿಲ್ 2021, 15:53 IST
ಅಕ್ಷರ ಗಾತ್ರ

ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭೂಕುಸಿತ ಹೆಚ್ಚಾಗಲು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿರುವ ಅರಣ್ಯ ನಾಶ ಮತ್ತು ಅರಣ್ಯ ಛಿದ್ರೀಕರಣ ಪ್ರಮುಖ ಕಾರಣ. ಈ ಪ್ರದೇಶಗಳಲ್ಲಿ ನೈಸರ್ಗಿಕ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯ ಈ ಸಮಿತಿ ಮುಖ್ಯಮಂತ್ರಿ ಯಡಿಯುರಪ್ಪ ಅವರಿಗೆ ಗುರುವಾರ ವರದಿ ಸಲ್ಲಿಸಿತು.

ಕೇಂದ್ರ ಸರ್ಕಾರ ನೀಡುವ ‘ಮಿಟಿಗೇಷನ್ ಫಂಡ್’ ಮೂಲಕ ಭೂ ಕುಸಿತ ಪ್ರದೇಶದ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನವನ್ನೂ ಮೀಸಲಿಡುವ ಬಗ್ಗೆ ಸರ್ಕಾರ ಪರಿಶೀಲಿಸುವುದು ಹಾಗೂ ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಅನುಷ್ಠಾನಕ್ಕೆ ಸರ್ಕಾರ ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ವರದಿಯ ಪ್ರಮುಖಾಂಶಗಳು:

* ಕರಾವಳಿಯ ನೈಸರ್ಗಿಕ ಸಂಪತ್ತು, ಮಲೆನಾಡಿನ ನದಿ-ಕಣಿವೆಗಳ ಉಳಿವಿಗೆ ಪೂರಕವಾದ ಮತ್ತು ಭೂ-ಕುಸಿತ ತಡೆಗಟ್ಟಲು ಭಾರಿ ಭೂ-ಕುಸಿತ ಪ್ರಕರಣಗಳನ್ನು ನೈಸರ್ಗಿಕ ವಿಪತ್ತು ವ್ಯಾಖ್ಯೆಯಡಿ ತರಬೇಕು. ಭೂ-ಕುಸಿತ ನಿಯಂತ್ರಣ ಮಾರ್ಗೋಪಾಯಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಬೇಕು.

*ಕರ್ನಾಟಕ ರಾಜ್ಯ ವಿಕೋಪ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಸೂಕ್ತ ನೀತಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕು. ಇವುಗಳ ಜಾರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿಗಳನ್ನು ನೀಡುವ ನೋಡಲ್‌ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವನ್ನು ಗುರುತಿಸಬೇಕು.

* ಮಲೆನಾಡು ಮತ್ತು ಕರಾವಳಿಯ ಎಲ್ಲ ತಾಲ್ಲೂಕುಗಳಲ್ಲಿ ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳ ಗ್ರಾಮ ಮಟ್ಟದ ನಕ್ಷೆ ರಚಿಸುವುದು.

* ಭೂಕುಸಿತದ ಕುರಿತು ಮೊದಲೇ ಶೀಘ್ರ ಮುನ್ಸೂಚನೆ ನೀಡುವ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸುವುದು. ಜಿಲ್ಲಾಡಳಿತಗಳು ಸಕಾಲದಲ್ಲಿ ಅವುಗಳ ಸೂಕ್ತ ಸಹಾಯ ಪಡೆಯುವಂಥ ಆಡಳಿತಾತ್ಮಕ ನೀತಿ ರೂಪಿಸುವುದು.

* ತಳ ಮಟ್ಟದಲ್ಲಿ ಜನ ಸಹಭಾಗಿತ್ವದ ವಿಕೋಪ ಅಪಾಯ ತಡೆ ಯೋಜನೆ ರೂಪಿಸಬೇಕು.

* ಮಲೆನಾಡು ಮತ್ತು ಕರಾವಳಿ ಭೂಕುಸಿದ ಸಾಧ್ಯತೆ ಇರುವ ಪ್ರದೇಶಗಳ ನಾಶವಾದ ಅರಣ್ಯಭೂಮಿಯಲ್ಲಿ, ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ, ಸ್ಥಳೀಯ ಸಸ್ಯ ಪ್ರಬೇಧಗಳನ್ನು ನೆಟ್ಟು, ಕಾಡು ಬೆಳೆಸುವ ಯೋಜನೆಗಳನ್ನು ರೂಪಿಸಬೇಕು.

* ಮೇಲ್ಮೈ ನೀರು ಹರಿಯುವ ಸಹಜ ಮಾರ್ಗಗಳಾದ ಹೊಳೆ–ತೊರೆಗಳು, ಕೆರೆ ಕೋಡಿ ಹರಿಯುವ ಕಣಿವೆಗಳು ಹಾಗೂ ಮಳೆಗಾಲದಲ್ಲಿ ನೀರು ಹರಿಯುವ ಸಹಜ ಜಲ ಮಾರ್ಗಗಳು ಹೂಳು ತುಂಬದಂತೆ, ಅತಿಕ್ರಮಣವಾಗದಂತೆ ಕಸ ಕಟ್ಟದಂತೆ ಸೂಕ್ತವಾಗಿ ನಿರ್ವಹಿಸಬೇಕು.

*ಅನಧಿಕೃತವಾಗಿ ಬಳಕೆಯಾಗುತ್ತಿರುವ ಮರ ಕಡಿಯುವ ವಿದ್ಯುತ್‌ ಯಂತ್ರಗಳು, ಭೂಕೊರೆತ ಯಂತ್ರಗಳು, ಗಣಿಗಳಲ್ಲಿ ಬಳಸುವ ಸ್ಫೋಟಕಗಳು, ಭೂ ಅಗೆತದ ಬೃಹತ್‌ ಯಂತ್ರಗಳನ್ನು ಸೂಕ್ತ ಕಾನೂನು ಮತ್ತು ಸಕ್ರಮ ಪ್ರಾಧಿಕಾರದ ಮೂಲಕ ನಿಯಂತ್ರಿಸಬೇಕು.

23 ತಾಲ್ಲೂಕುಗಳಲ್ಲಿ ಭವಿಷ್ಯದಲ್ಲೂ ಭೂಕುಸಿತದ ಸಾಧ್ಯತೆ

ಇಸ್ರೊದ ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ ಮತ್ತು ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆಗಳು ಪಶ್ಚಿಮ ಘಟ್ಟದಲ್ಲಿ ಸಂಭವಿಸಿರುವ ಭೂ ಕುಸಿತಗಳ ಸಮಗ್ರ ಅಧ್ಯಯನ ನಡೆಸಿವೆ. ಅದರ ಪ್ರಕಾರ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ 23 ತಾಲ್ಲೂಕುಗಳಲ್ಲಿ ಭವಿಷ್ಯದಲ್ಲೂ ಭೂಕುಸಿತದ ಸಾಧ್ಯತೆಗಳಿವೆ. ಇದು ರಾಜ್ಯದ ಶೇ 13 ರಷ್ಟು ಪ್ರದೇಶವಾಗಿದೆ.

ಭೂಕುಸಿತ ಸಾಧ್ಯತೆ ತಾಲ್ಲೂಕುಗಳು:

*ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ(ಕೊಡಗು ಜಿಲ್ಲೆ)

*ಕೊಪ್ಪ, ಮೂಡಿಗೆರೆ, ಶೃಂಗೇರಿ ಮತ್ತು ಚಿಕ್ಕಮಗಳೂರು(ಚಿಕ್ಕಮಗಳೂರು ಜಿಲ್ಲೆ)

*ಸಾಗರ(ಶಿವಮೊಗ್ಗ ಜಿಲ್ಲೆ)

*ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ಹಾಗೂ ಜೋಯ್ಡಾ (ಉತ್ತರಕನ್ನಡ ಜಿಲ್ಲೆ)

*ಕಾರ್ಕಳ (ಉಡುಪಿ ಜಿಲ್ಲೆ)

* ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಮಂಗಳೂರು(ದಕ್ಷಿಣ ಕನ್ನಡ ಜಿಲ್ಲೆ)

ಅಲ್ಲದೆ, ಉಡುಪಿ ಜಿಲ್ಲೆಯ ಕುಂದಾಪುರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕುಗಳ ಹಲವು ಪ್ರದೇಶಗಳಲ್ಲಿ ಭೂಕುಸಿತವಾಗುತ್ತಿದೆ. ಈ ಎಲ್ಲ ತಾಲ್ಲೂಕು ಪ್ರದೇಶಗಳ ಕಡಿದಾದ ಗುಡ್ಡ– ಕಣಿವೆ ಪ್ರದೇಶಗಳನ್ನು ಭೂಕುಸಿತವಾಗಬಲ್ಲ ಸೂಕ್ಷ್ಮ ಪ್ರದೇಶವೆಂದು ಗುರುತಿಸಬೇಕು ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT