ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಗೆ ಆಗ್ರಹ: ಮಾರ್ಚ್ 22ರಂದು ವಿಧಾನಸೌಧ ಮುತ್ತಿಗೆ -ಯೋಗೇಂದ್ರ ಯಾದವ್

Last Updated 7 ಮಾರ್ಚ್ 2021, 9:46 IST
ಅಕ್ಷರ ಗಾತ್ರ

ಬೆಂಗಳೂರು: ಕಲಬುರ್ಗಿಯಿಂದ ಆರಂಭವಾಗಿರುವ ಬೆಂಬಲ ಬೆಲೆ ಹಕ್ಕೊತ್ತಾಯ (ಎಂಎಸ್ ಪಿ ದಿಲಾವ್) ದೇಶದಾದ್ಯಂತ ಮುಂದುವರಿಯಲಿದೆ. ಹೋರಾಟದ ಭಾಗವಾಗಿ ಕರ್ನಾಟಕ ಸಂಯುಕ್ತ ಹೋರಾಟ ಮೈತ್ರಿಕೂಟದ ನೇತೃತ್ವದಲ್ಲಿ ರೈತರು ವಿಧಾನಸೌಧಕ್ಕೆ‌ಮುತ್ತಿಗೆ ಹಾಕಲಿದ್ದಾರೆ ಎಂದು ಅಖಿಲ ಭಾರತ ರೈತ ಸಂಘಟನೆಗಳ ಮೈತ್ರಿಕೂಟದ ಸಂಚಾಲನಾ ಸಮಿತಿ ಸದಸ್ಯ ಯೋಗೇಂದ್ರ ಯಾದವ್ ಪ್ರಕಟಿಸಿದರು.

ಸಂಯುಕ್ತ ಹೋರಾಟ ಮೈತ್ರಿಕೂಟದ ಸದಸ್ಯರೊಂದಿಗೆ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬೆಂಬಲ‌ ಬೆಲೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಕೃಷಿ ಸಂಬಂಧಿ ಹೊಸ ಕಾಯ್ದೆಗಳ ಜಾರಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಮತ್ತು ಬೆಂಬಲ ಬೆಲೆ ವ್ಯವಸ್ಥೆಗಳು ನಾಶವಾಗಲಿವೆ. ಕರ್ನಾಟಕದಲ್ಲೇ ಇದಕ್ಕೆ ಸಾಕ್ಷ್ಯ ದೊರೆತಿದೆ' ಎಂದರು.

ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳ ಎಪಿಎಂಸಿಗಳಿಗೆ ಭೇಟಿನೀಡಿ ಅಧ್ಯಯನ ಮಾಡಲಾಗಿದೆ. ರೈತರಿಗೆ ಬೆಂಬಲ ಬೆಲೆಗಿಂತ ಕಡಿಮೆ ದರ ದೊರೆಯುತ್ತಿರುವುದು ಕಂಡುಬಂದಿದೆ. ಎಪಿಎಂಸಿಗಳಿಗೆ ಕೃಷಿ ಉತ್ಪನ್ನಗಳ ಆವಕದ ಪ್ರಮಾಣವೂ ಕುಸಿದಿದೆ ಎಂದರು.

ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯ ಆಧಾರದಲ್ಲಿ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು ಎಂಬುದು ರೈತರ ಬೇಡಿಕೆ. ಅದನ್ನು ಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಯಾದವ್ ತಿಳಿಸಿದರು.

ಸರಿಯಾದ ರೀತಿಯಲ್ಲಿ ಬೆಂಬಲ ಬೆಲೆ ದೊರಕದ ಕಾರಣದಿಂದ 2019-20ರಲ್ಲಿ ಕರ್ನಾಟಕದ ರೈತರಿಗೆ 13 ಬೆಳೆಗಳಲ್ಲಿ ₹3319 ಕೋಟಿ ನಷ್ಟವಾಗಿದೆ. ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಲೆಕ್ಕ ಹಾಕಿದರೆ ನಷ್ಟದ ಪ್ರಮಾಣ ₹20,339 ಕೋಟಿ ಆಗುತ್ತದೆ. ಬೆಂಬಲ‌ ಬೆಲೆ ನೀಡಲು ಲಕ್ಷಾಂತರ ಕೋಟಿ ರೂಪಾಯಿ ಬೇಕಾಗಿಲ್ಲ. ಅಧಿಕಾರದಲ್ಲಿ ಇರುವವರಿಗೆ ಬದ್ಧತೆ ಮತ್ತು ಇಚ್ಛಾಶಕ್ತಿ ಇರಬೇಕು ಎಂದರು.

ಕೇಂದ್ರ ಸರ್ಕಾರವು ರೈತ ಹೋರಾಟವನ್ನು ಹತ್ತಿಕ್ಕಿ, ಭೂಮಿಯೊಳಗೆ ಹೂತುಹಾಕಲು ಯತ್ನಿಸಿತು. ಅದಕ್ಕಾಗಿಯೇ ಸುಳ್ಳುಗಳನ್ನು ಹೊಸೆಯಿತು. ನಾನಾ ತರಹದ ಅಪಪ್ರಚಾರ ಮಾಡಿತು. ಸರ್ಕಾರ ಹತ್ತಿಕ್ಕಲು ಯತ್ನಿಸಿದಂತೆಲ್ಲ ಹೋರಾಟ ವಿಸ್ತಾರವಾಗಿ ಬೆಳೆಯುತ್ತಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು.

ಪಂಜಾಬ್ ನ ಜಾಂಬೂರಿ ಕಿಸಾನ್ ಸಭಾ ಅಧ್ಯಕ್ಷ ಡಾ. ಸತ್ನಾಂ ಸಿಂಗ್ ಅಜ್ಞಾಲ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜನಾಂದೋಲನ‌ ಮಹಾಮೈತ್ರಿಯ ಅಧ್ಯಕ್ಷ ಎಸ್.ಆರ್. ಹಿರೇಮಠ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT