ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ, ಕಾಂತರಾಜು ಆಯೋಗ ವರದಿ ಬಹಿರಂಗಕ್ಕೆ ಆಗ್ರಹ

Last Updated 4 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮೀಸಲಾತಿಗಾಗಿ ವಿವಿಧ ಸಮುದಾಯದವರು ನಡೆಸಿರುವ ಹೋರಾಟ ಗುರುವಾರ ವಿಧಾನ ಪರಿಷತ್‌ನಲ್ಲಿಯೂ ಪ್ರತಿಧ್ವನಿಸಿತು. ಪಕ್ಷಭೇದ ಮರೆತು ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿದರು.

ಎಚ್‌. ಕಾಂತರಾಜು ನೇತೃತ್ವದ ಆಯೋಗದ ಸಾಮಾಜಿಕ–ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರ್ಕಾರ ಸ್ವೀಕರಿಸಿ, ಬಹಿರಂಗಪಡಿಸಿದರೆ ಮೀಸಲಾತಿಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಸದಸ್ಯರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ಕೆ.ಪಿ. ನಂಜುಂಡಿ, ‘ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಜನಗಣತಿ ಸಮೀಕ್ಷಾ ವರದಿ ಸಿದ್ಧವಾಗಿ ಎರಡು ವರ್ಷಗಳೇ ಆಗಿವೆ. ಹಿಂದುಳಿದವರು ಮಾತ್ರವಲ್ಲದೆ, ಮೇಲ್ವರ್ಗದವರೂ ಈಗ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಯಾವ ಸಮುದಾಯದವರು ಎಷ್ಟಿದ್ದಾರೆ, ಯಾರಿಗೆ ಮೀಸಲಾತಿ ಅವಶ್ಯಕತೆ ಇದೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಲಿದ್ದು, ಅದನ್ನು ಬಿಡುಗಡೆ ಮಾಡುವುದು ಹೆಚ್ಚು ಪ್ರಸ್ತುತ’ ಎಂದರು.

ಬಿಜೆಪಿಯ ಎಚ್. ವಿಶ್ವನಾಥ್, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹162 ಕೋಟಿ ವೆಚ್ಚದಲ್ಲಿ ವೈಜ್ಞಾನಿಕವಾಗಿ ಈ ಜಾತಿಗಣತಿ ಮಾಡಿಸಿದ್ದಾರೆ. ಅವರ ಸರ್ಕಾರ ಮತ್ತು ನಂತರ ಅಧಿಕಾರ ನಡೆಸಿದ ಸರ್ಕಾರಗಳು ವರದಿ ಬಿಡುಗಡೆಗೆ ಏಕೆ ಹಿಂದೇಟು ಹಾಕುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.

‘ಸಂವಿಧಾನ ಉಲ್ಲಂಘನೆ’

‘ಧರ್ಮಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಸಚಿವರು ಅವರ ಜಾತಿಗೆ ಸಂಬಂಧಿಸಿದ ಮೀಸಲಾತಿ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದು ಸಂವಿಧಾನದ ಉಲ್ಲಂಘನೆ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ದೂರಿದರು.

‘ಜಾತಿಗಣತಿ ವರದಿ ಬಿಡುಗಡೆ ಮಾಡುವುದು ಬಿಟ್ಟು, ಕಾಲಹರಣ ಮಾಡುವ ಉದ್ದೇಶದಿಂದ ಸರ್ಕಾರವು ತ್ರಿಸದಸ್ಯ ಸಮಿತಿ ರಚಿಸುವ ಬಗ್ಗೆ ಮಾತನಾಡುತ್ತಿದೆ’ ಎಂದೂ ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT