ಶುಕ್ರವಾರ, ಅಕ್ಟೋಬರ್ 7, 2022
24 °C
ಉದ್ಯಮ ಸ್ನೇಹಿ ಸರಳ ನಿಯಮ ಜಾರಿ: ಸಚಿವ ನಿರಾಣಿ ಹೇಳಿಕೆ

ಕೈಗಾರಿಕೆ: 10 ಎಕರೆವರೆಗಿನ ಭೂಮಿ ನೇರ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಹಂಚಿಕೆ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದ್ದು, ಇನ್ನು ಮುಂದೆ 10 ಎಕರೆವರೆಗಿನ ಭೂ ಹಂಚಿಕೆಗೆ ಭೂಪರಿಶೋಧನಾ ಸಮಿತಿಯ (ಎಲ್ಎಸಿ) ಪರಿಶೀಲನೆ ಅಗತ್ಯವಿಲ್ಲ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಆದೇಶ ಹೊರಡಿಸಿದೆ.

ಅಲ್ಲದೆ, ಹೂಡಿಕೆ ಪ್ರಸ್ತಾವನೆಗಳು ನೇರವಾಗಿ ರಾಜ್ಯ ಮಟ್ಟದ ಸಮಿತಿಯ ಮುಂದೆ ಮಂಡನೆಯಾಗಲಿವೆ. ಸುಲಲಿತ ವಹಿವಾಟು ಮಾದರಿಯಲ್ಲೇ
ಸುಲಲಿತ ಭೂ ಹಂಚಿಕೆ ಪದ್ಧತಿಯನ್ನು ಜಾರಿಗೊಳಿಸಲಾಗಿದೆ.

‘ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ನೀಡಲಾಗುವುದು. ಇದರಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಬಹುದಾಗಿದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

‘10 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಗಾಗಿ ಜಮೀನು ಪರಿಶೀಲನಾ ಸಮಿತಿಗೆ ಹೋಗುವ ಬದಲು ನೇರವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡಿರುವುದರಿಂದ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ದೊರೆಯುತ್ತದೆ. ಇದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಅನುಕೂಲವಾಗುವುದು’ ಎಂದು ಹೇಳಿದರು.

‘10 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಮತ್ತು ₹15 ಕೋಟಿಯಿಂದ ₹500 ಕೋಟಿವರೆಗಿನ ಹೂಡಿಕೆ ಪ್ರಸ್ತಾವನೆಗಳನ್ನು ಭೂ ಲೆಕ್ಕ ಪರಿಶೋಧನಾ ಸಮಿತಿಯ ಮುಂದೆ ಮಂಡಿಸಬಹುದು. ಇಲ್ಲಿ ಒಪ್ಪಿಗೆ ಸಿಕ್ಕ ನಂತರ, ಅಂತಿಮ ಅನುಮೋದನೆಗಾಗಿ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಬೆಳವಣಿಗೆಯ ಉದ್ದೇಶದಿಂದ 10 ಎಕರೆವರೆಗೆ ಜಮೀನು ಹಂಚಿಕೆಯನ್ನು ನೇರವಾಗಿ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ ಮುಂದೆ ಮಂಡಿಸಲು ಅವಕಾಶ ನೀಡಲಾಗಿದೆ. ಭೂಮಿ ಪರಿಶೋಧನಾ ಸಮಿತಿಯ ಅನುಮೋದನೆಗಾಗಿ ಕಾಯಬೇಕಾಗಿಲ್ಲ’ ಎಂದು ಹೇಳಿದ್ದಾರೆ.

ಏಕಗವಾಕ್ಷಿ ಅನುಮೋದನಾ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಮೂಲಕ ಸುಲಲಿತ ವ್ಯವಹಾರ ಮತ್ತು ಪಾರದರ್ಶಕತೆಗೆ ಒತ್ತು ನೀಡಿ ಈ ಆದೇಶ ಹೊರಡಿಸಲಾಗಿದೆ ಎಂದು ನಿರಾಣಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು