ಶನಿವಾರ, ಏಪ್ರಿಲ್ 1, 2023
23 °C

ಪ್ರಜಾವಾಣಿ ಸಂವಾದ: ಕೇಂದ್ರ ಸಂಪುಟ ಪುನಾರಚನೆ: ರಾಜ್ಯಕ್ಕೆ ಆದ ಲಾಭ-ನಷ್ಟಗಳೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಪುಟ ಪುನರ್‌ರಚನೆಯಿಂದ ರಾಜ್ಯಕ್ಕೆ ಲಾಭವೇ? ನಷ್ಟವೇ? ಎನ್ನುವ ಕುರಿತು ‘ಪ್ರಜಾವಾಣಿ’ ಸೋಮವಾರ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಜೆಡಿಎಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಪುನರ್‌ರಚನೆ ವೇಳೆ ರಾಜ್ಯದ ನಾಲ್ವರಿಗೆ ಸಚಿವ ಸ್ಥಾನಗಳನ್ನು ನೀಡಲಾಗಿದೆ. ಕೇಂದ್ರದ ರಾಸಾಯನಿಕ ಖಾತೆ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡ ಅವರನ್ನು ಇದೇ ವೇಳೆ ಸಂಪುಟದಿಂದ  ಕೈಬಿಡಲಾಗಿದೆ.

ಸಂಪುಟ ದರ್ಜೆಯ ಒಬ್ಬರನ್ನು ಕೈಬಿಟ್ಟು, ಎ. ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌ ಮತ್ತು ಭಗವಂತ ಖೂಬಾ ಅವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಸಂಪುಟ ಪುನರ್‌ರಚನೆಯಿಂದ ರಾಜ್ಯಕ್ಕೆ ಲಾಭವೇ? ನಷ್ಟವೇ? ಎನ್ನುವ ಕುರಿತು ‘ಪ್ರಜಾವಾಣಿ’ ಸೋಮವಾರ ನಡೆಸಿದ ಸಂವಾದಕಾರ್ಯಕ್ರಮದಲ್ಲಿ ಜೆಡಿಎಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ
ಇಲ್ಲಿದೆ.

ಕರ್ನಾಟಕಕ್ಕೆ ತಾರತಮ್ಯ ಮಾಡುವುದು ನಿಲ್ಲಲಿ

ಈಗ ಕೇಂದ್ರ ಸಚಿವರಾಗಿರುವವರ ಬಗ್ಗೆ ತಕರಾರುಗಳಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ದೊರೆಯುತ್ತಿರುವ ಸೌಲಭ್ಯಗಳೇನು ಎಂಬುದನ್ನು ನೋಡಬೇಕಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಆದರೂ, ಕಳೆದ ವರ್ಷ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾಲಿನಲ್ಲಿ ₹ 8,000 ಕೋಟಿಗೆ ಕತ್ತರಿ ಹಾಕಿದರು. ಹಿಂದಿ ಭಾಷಿಕ ರಾಜ್ಯಗಳಿಗೆ ಕೇಂದ್ರ ಆದ್ಯತೆ ನೀಡುತ್ತಿದೆ.

ಯಾವ ಇಲಾಖೆಯಿಂದ ಏನು ದೊರೆಯಿತು ಎಂಬುದು ಮುಖ್ಯ. ರೈಲ್ವೆ ಇಲಾಖೆಯಿಂದ ರಾಜ್ಯಕ್ಕೆ ಏನಾಗುತ್ತಿದೆ? ಕ್ರೀಡಾಂಗಣಗಳ ಅಭಿವೃದ್ಧಿಗೆ ರಾಜ್ಯಕ್ಕೆ ಎಷ್ಟು ಹಣ ಬರುತ್ತಿದೆ? ಗುಜರಾತ್‌ಗೆ ಎಷ್ಟು ಹೋಗುತ್ತಿದೆ? ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುದಾನವೇ ಸಿಗುತ್ತಿಲ್ಲ. ಎತ್ತಿನಹೊಳೆ ಸೇರಿದಂತೆ ಹಲವು ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿಲ್ಲ. ಕೋವಿಡ್‌ ಲಸಿಕೆ ಹಂಚಿಕೆಯಲ್ಲೂ ತಾರತಮ್ಯ ಆಗುತ್ತಿದೆ. ಮಂತ್ರಿಗಳ ಸಂಖ್ಯೆ ಇದ್ದರೆ ಎಲ್ಲವೂ ಆಗುವುದಿಲ್ಲ. ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ತಾರತಮ್ಯ ಆಗಕೂಡದು.

ದಕ್ಷತೆ ಆಧಾರದಲ್ಲಿ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಲಾಗುತ್ತದೆ ಎಂಬುದು ಸುಳ್ಳು. ಯಾವ ಪಕ್ಷವೂ ಅದನ್ನು ಮಾಡುವುದಿಲ್ಲ. ಜಾತಿ, ಪ್ರಾದೇಶಿಕತೆ ಸೇರಿದಂತೆ ಹಲವು ವಿಚಾರಗಳನ್ನು ಆಧರಿಸಿ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಲಾಗುತ್ತದೆ. ಸಂದರ್ಭಕ್ಕೆ ಅನುಗುಣವಾಗಿ, ರಾಜಕೀಯ ಪಕ್ಷದ ಉಳಿವಿಗಾಗಿ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದುದ್ದೆಲ್ಲವೂ ಸುಳ್ಳು. ಪಕ್ಷಾಂತರ ಮಾಡಿ ಹೋದವರನ್ನು ಬಿಜೆಪಿ ಸಚಿವರನ್ನಾಗಿ ಮಾಡಿಲ್ಲವೆ?

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಸಮಾನ ಅವಕಾಶ ಬೇಕು. ಹಿಂದಿ ಹೇರಿಕೆ ಒಪ್ಪುವುದಿಲ್ಲ. ಹಿಂದಿಯಲ್ಲೇ ನೇಮಕಾತಿ ಪರೀಕ್ಷೆ ನಡೆಸುವುದನ್ನು ಒಪ್ಪಲಾಗದು. ಸ್ಥಳೀಯ ಪ್ರಾದೇಶಿಕ ಭಾಷೆಗಳಲ್ಲೇ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಅವಕಾಶ ನೀಡಲೇಬೇಕು. ಈಗ ರಾಜ್ಯವನ್ನು ಪ್ರತಿನಿಧಿಸುವ ಆರು ಜನ ಸಚಿವರಿಗೂ ಹೆಚ್ಚು ಅಧಿಕಾರ ಸ್ವಾತಂತ್ರ್ಯ ದೊರಕಲಿ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ತಾರತಮ್ಯವನ್ನು ಅವರೆಲ್ಲರೂ ಒಗ್ಗೂಡಿ ತಪ್ಪಿಸಲಿ.

– ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್‌ ಶಾಸಕ

ದೊರಕಿದ ಸೌಲಭ್ಯಗಳ ಬಗ್ಗೆಯೂ ಚರ್ಚೆಯಾಗಬೇಕಲ್ಲವೆ?

ಕನ್ನಡದಲ್ಲೂ ಬ್ಯಾಂಕಿಂಗ್‌ ಪರೀಕ್ಷೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಕನ್ನಡಿಗರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆದರೂ ತಡೆಯಲು ಕೇಂದ್ರ ಬದ್ಧವಾಗಿದೆ. ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ಇಲ್ಲದಿರುವ ಕುರಿತು ಕೇಂದ್ರ ಸಚಿವರ ಗಮನ ಸೆಳೆಯಲಾಗುವುದು. ಆರು ಸಚಿವರಿಂದ ಕರ್ನಾಟಕ ಮತ್ತು ಕನ್ನಡಕ್ಕೆ ಹೆಚ್ಚು ಅನುಕೂಲ ಆಗಲಿದೆ.

ಸದಾನಂದ ಗೌಡರನ್ನು ದುರುದ್ದೇಶದ ಕಾರಣಕ್ಕೆ ಸಂಪುಟದಿಂದ ಕೈಬಿಟ್ಟಿಲ್ಲ. ಸಂಘಟನೆಯ ಕೆಲಸಕ್ಕಾಗಿ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ. ಸದಾನಂದ ಗೌಡರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷ ಮತ್ತು ಪ್ರಧಾನಿಯವರ ಹಂತದಲ್ಲಿ ಚರ್ಚಿಸಿ ಈ ಕ್ರಮ ಕೈಗೊಳ್ಳಲಾಗಿದೆ.  ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿವೆ. ಅದು ಕೂಡ ಸಂಪುಟ ಪುನರ್‌ರಚನೆಗೆ ಕಾರಣವಾಗಿದೆ. ಪ್ರಲ್ಹಾದ ಜೋಷಿ, ನಿರ್ಮಲಾ ಸೀತಾರಾಮನ್‌ ಹಿರಿಯರು. ಪಕ್ಷಕ್ಕಾಗಿ ದುಡಿದವರು. ಅವರನ್ನು ಜಾತಿ ಆಧಾರದ ಮೇಲೆ ಗುರುತಿಸುವುದು ಸರಿಯಲ್ಲ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮೋದಿ ಅವರ ಸಂಪುಟವನ್ನು ಸಿದ್ದರಾಮಯ್ಯ ಅವರ ಸಂಪುಟಕ್ಕೆ ಹೋಲಿಸಲಾಗದು. ಹಿಂದಿನ ಡಾ. ಮನಮೋಹನ್‌ ಸಿಂಗ್‌ ಸರ್ಕಾರಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಮೋದಿ ಒಂದು ಹೆಜ್ಜೆ ಮುಂದಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ಹಲವು ಕೆಲಸಗಳಾಗಿವೆ. ರೈಲ್ವೆ ಯೋಜನೆಗಳು ಚುರುಕಾಗಿವೆ.

ಬೀದರ್‌ ಸಂಸದರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇದೆ. ಅದರಲ್ಲಿ ಖೂಬಾ ಯಶಸ್ವಿಯಾಗುತ್ತಾರೆ.  ₹ 8000 ಕೋಟಿ ಬಂದಿಲ್ಲ ಎಂಬುದು ನಿಜ. ಯೋಜನೇತರ ವಿಭಾಗದಲ್ಲಿ ₹ 34,000 ಕೋಟಿ ಬಂದಿದೆ. ಕೇಂದ್ರದಿಂದ ಆಗಿರುವ ಅನುಕೂಲಗಳ ಬಗ್ಗೆಯೂ ಚರ್ಚೆ ಆಗಬೇಕಲ್ಲವೆ?

– ಅಶ್ವತ್ಥನಾರಾಯಣ ಗೌಡ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು