ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ಕೆಲವು ಸಚಿವರ ಖಾತೆಗಳನ್ನು ಪುನಃ ಬದಲಾವಣೆ ಮಾಡಲು ಹೊರಟಿರುವ ಬೆನ್ನಲ್ಲೆ, ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ಆನಂದಸಿಂಗ್ ಅವರು ತೀವ್ರ ಅಸಮಾಧಾನಗೊಂಡಿದ್ದು, ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.
ಡಾ. ಕೆ. ಸುಧಾಕರ್ ಅವರು ತಮ್ಮಿಂದ ವೈದ್ಯಕೀಯ ಶಿಕ್ಷಣ ತೆಗೆದುಕೊಂಡಿದ್ದರಿಂದ ಸಿಟ್ಟಾಗಿದ್ದಾರೆ. ಇವರ ಸಿಟ್ಟು ತಣಿಸಲು ಪುನಃ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲು ಮುಖ್ಯಮಂತ್ರಿಯವರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂದಕ್ಕೆ ಪಡೆದು ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ, ಆನಂದ್ ಸಿಂಗ್‌ಗೆ ಹಜ್ ಮತ್ತು ವಕ್ಫ್ ನೀಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಇಂದು ಸಂಜೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಪದೇ ಪದೇ ಖಾತೆಗಳನ್ನು ಬದಲಿಸುತ್ತಿರುವುದರಿಂದ ಮಾಧುಸ್ವಾಮಿ ಮತ್ತು ಆನಂದಸಿಂಗ್ ಅವರು ಸಿಟ್ಟಿಗೆದ್ದಿದ್ದು, ಮತ್ತೆ ಖಾತೆಗಳನ್ನು ಬದಲಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಗೌರವದ ದಾರಿ ಎಂದು ಇಬ್ಬರೂ ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಪ್ರತ್ರಿಕ್ರಿಯಿಸಿರುವ ಆನಂದಸಿಂಗ್, ‘ನನಗೆ ಯಾವುದೇ ಅಸಮಾಧಾನವೂ ಇಲ್ಲ. ವಿಜಯನಗರ ಜಿಲ್ಲೆ ರಚನೆ ಆಗಬೇಕು ಎಂಬ ಕನಸು ಈಡೇರುತ್ತಿದೆ. ಸಚಿವನಾಗಿಯೇ ಇರಬೇಕು ಎಂಬ ಬಯಕೆಯೂ ಇಲ್ಲ. ಸಚಿವ ಸ್ಥಾನ ಇಲ್ಲದೇ ಶಾಸಕನಾಗಿಯೂ ಸಂತೋಷವಾಗಿ ಇರಬಲ್ಲೆ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ’ ಎಂದರು.
ಜೆ.ಸಿ.ಮಾಧುಸ್ವಾಮಿ ಅವರನ್ನು ಸಮಾಧಾನಪಡಿಸಲು ಯಡಿಯೂರಪ್ಪ ದೂರವಾಣಿ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಿಲ್ಲ ಎಂದೂ ಹೇಳಲಾಗಿದೆ. ಖಾತೆಗಳನ್ನು ಪುನಃ ಬದಲಾವಣೆ ಮಾಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಬಂಡೆಯಂತೆ ನಿಲ್ಲುತ್ತಿದ್ದ ಮಾಧುಸ್ವಾಮಿ: ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಆರೋಪಗಳು ಕೇಳಿ ಬಂದಾಗ, ಇಬ್ಬರನ್ನೂ ಪ್ರಬಲವಾಗಿ ಸಮರ್ಥಿಸಿಕೊಂಡು, ವಿರೋಧ ಪಕ್ಷಗಳ ನಾಯಕರ ಬಾಯಿ ಮುಚ್ಚಿಸಿದ್ದು ಮಾಧುಸ್ವಾಮಿ. ಅಧಿವೇಶನಗಳಲ್ಲಿ ಪ್ರತಿ ಸಲವೂ ಯಡಿಯೂರಪ್ಪ ಅವರ ನೆರವಿಗೆ ಧಾವಿಸುತ್ತಿದ್ದರು. ಈಗ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಮಾಧುಸ್ವಾಮಿಯವರ ಆಪ್ತರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.