ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ ಹಂಚುವುದೇ ವಿಜಯೇಂದ್ರ ತಂತ್ರಗಾರಿಕೆ’

Last Updated 23 ನವೆಂಬರ್ 2020, 18:27 IST
ಅಕ್ಷರ ಗಾತ್ರ

ರಾಯಚೂರು: ‘ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಹಣ ಹಂಚುವುದನ್ನೇ ಬಿ.ವೈ. ವಿಜಯೇಂದ್ರ ತಂತ್ರಗಾರಿಕೆ ಮಾಡಿಕೊಂಡಿದ್ದಾರೆ’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಸ್ಕಿ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಬಸನಗೌಡ ತುರ್ವಿಹಾಳ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು.

‘ಮತಗಳನ್ನು ಖರೀದಿ ಮಾಡಿಯೇ ಶಿರಾ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಮಸ್ಕಿ ಉಪಚುನಾವಣೆಯಲ್ಲೂ ಹಣ ಹಂಚುವುದಕ್ಕೆ ತಂಡವನ್ನೇ ಕರೆದುಕೊಂಡು ಬರುತ್ತಾರೆ. ಬಿಜೆಪಿಯವರ ಆಸೆ, ಆಮಿಷಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಬಲಿಯಾಗಬಾರದು’ ಎಂದರು.

‘ಪ್ರತಾಪಗೌಡ ಪಾಟೀಲ ಸಂಭಾವಿತ ಅಂದುಕೊಂಡಿದ್ದೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನ ಕೊಟ್ಟಿದ್ದೆ. ಗೆಲ್ಲುವ ಕುದುರೆ ಎಂದು ನಂಬಿದ್ದು ಸುಳ್ಳಾಗಿದ್ದು, ಅದು ಚೆಂಗುಲ ಕುದುರೆ. ಮಾರುಕಟ್ಟೆಯಲ್ಲಿ ಕುರಿ, ಕೋಣ ಮಾರಾಟ ಆಗಿದ್ದನ್ನು ಕೇಳಿದ್ದೇವೆ. ಶಾಸಕ ಪ್ರತಾಪಗೌಡ ತನ್ನನ್ನೇ ಮಾರಿಕೊಂಡು ಮಸ್ಕಿ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಚೂರಿ ಹಾಕಿದ್ದಾರೆ. ಇಂಥವರನ್ನು ನಂಬಬೇಡಿ’ ಎಂದು ಅವರು ಹೇಳಿದರು.

ವಿಧಾನಸಭೆಯಲ್ಲಿ ಹೋರಾಟ: ‘ರಾಜ್ಯ ಸರ್ಕಾರವು ಕೊಬ್ಬರಿಗೆ ಮಾತ್ರ ಪ್ರೋತ್ಸಾಹಧನ ಘೋಷಿಸಿ, ಭತ್ತ ಬೆಳೆಯುವ ರೈತರಿಗೆ ತಾರತಮ್ಯ ಮಾಡಿದೆ. ಭತ್ತಕ್ಕೆ ₹ 500 ಪ್ರೋತ್ಸಾಹಧನ ಘೋಷಿಸುವವರೆಗೂ ವಿಧಾನಸಭೆಯಲ್ಲಿ ಹೋರಾಟ ಮಾಡಲಾಗುವುದು. ಡಿಸೆಂಬರ್‌ ಅಧಿವೇಶನದಲ್ಲಿ ಈ ವಿಷಯ ಮುಖ್ಯವಾಗಿ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಶಿರಾ ಹಾಗೂ ಆರ್‌ಆರ್‌ ನಗರದಲ್ಲಿ ಕಾಂಗ್ರೆಸ್‌ ಸೋತಿದ್ದರಿಂದ ಧೃತಿಗೆಟ್ಟಿಲ್ಲ. ಮಸ್ಕಿ ಕ್ಷೇತ್ರದ ಕಾರ್ಯಕರ್ತರ ಬೆಂಬಲ ನೋಡಿ ಹುಮ್ಮಸ್ಸು ಹೆಚ್ಚಾಗಿದೆ. ಪಕ್ಷ ತೊರೆದಿರುವ ಪ್ರತಾಪಗೌಡ ಪಾಟೀಲರಿಗೆ ಜನರು ಪಾಠ ಕಲಿಸುತ್ತಾರೆ’ ಎಂದರು.

ಬಸನಗೌಡ ತುರ್ವಿಹಾಳ ಅವರಿಗೆ ಕಾಂಗ್ರೆಸ್‌ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್.ಬೋಸರಾಜ, ಕೆಪಿಸಿಸಿ ವಕ್ತಾರ ವಸಂತಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಹಾಗೂ ಸ್ಥಳೀಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT