ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮೋತ್ಸವಕ್ಕೆ ಪೂರ್ವದಲ್ಲೇ ಭಿನ್ನ ಧ್ವನಿ: ಸಭೆಗೆ ಡಿಕೆಶಿ,ಹರಿಪ್ರಸಾದ್ ಗೈರು

ಸಿದ್ದರಾಮಯ್ಯ ಮುಂದಿನ ಸಿ.ಎಂ –ಮೊಳಗಿದ ಘೋಷಣೆ
Last Updated 13 ಜುಲೈ 2022, 18:58 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದ ಚೌಕಟ್ಟಿನಲ್ಲಿಯೇ ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ‘ಸಿದ್ದರಾಮಯ್ಯ– 75’ ಅಮೃತ ಮಹೋತ್ಸವ ನಡೆಯಲಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಂಡಿದ್ದರೂ, ವ್ಯಕ್ತಿ ಸೀಮಿತವಾಗಿ ‘ಸಿದ್ದರಾಮೋತ್ಸವ’ವೆಂದು ಕರೆಸಿಕೊಂಡಿರುವುದು ‘ಕೈ’ ಬಳಗದಲ್ಲಿ ಭಿನ್ನ ಧ್ವನಿಗೆ ಕಾರಣವಾಗಿದೆ.

ಅಮೃತ ಮಹೋತ್ಸವ ಸಮಾ ವೇಶದ ಪೂರ್ವಭಾವಿ ಸಭೆ ಅರಮನೆ ಮೈದಾನದಲ್ಲಿ ಬುಧವಾರ ನಡೆಯಿತು. ಕೆಪಿಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಸಭೆಗೆ ಗೈರಾಗಿದ್ದರು.

ಸಭೆಯಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್‌, ‘ಸಿದ್ದರಾಮಯ್ಯ ಅವರಿಗೆ ಇಷ್ಟ ಇದೆಯೋ? ಇಲ್ಲವೋ? ಬೇರೆಯವರು ಅವರ ವ್ಯಕ್ತಿ ಪೂಜೆ ಮಾಡುತ್ತಿದ್ದಾರೆ’ ಎಂದರು.

ತಮ್ಮ ಮನೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಪಕ್ಷದ ಅಧ್ಯಕ್ಷನಾಗಿ ಅಧಿಕಾರ ತೆಗೆದು ಕೊಂಡ ದಿನವೇ, ಯಾರೂ‌ ನನ್ನ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೇನೆ’ ಎಂದರು. ಇದು ಕೂಡ, ‘ವ್ಯಕ್ತಿ’ ಕೇಂದ್ರೀತವಾಗಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಸರಿಯಲ್ಲ ಎನ್ನುವುದನ್ನೇ ಧ್ವನಿಸಿದೆ ಎಂಬ ಚರ್ಚೆ ಕಾಂಗ್ರೆಸ್‌ ಪಾಳಯದಲ್ಲಿದೆ.

ಆದರೆ, ಅಮೃತ ಮಹೋತ್ಸವ ಸಮಿತಿಯ ಮಹಾ ಪ್ರಧಾನ ಕಾರ್ಯ ದರ್ಶಿ ಬಸವರಾಜ ರಾಯರಡ್ಡಿ, ‘ನಾವು ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಹಾಗೆಂದು, ಮಾಧ್ಯಮದಲ್ಲಿ ಬಂದಿದೆಯೋ ಗೊತ್ತಿಲ್ಲ. ಯಾರು ಏನೇ ಹೇಳಿದರೂ ಸಿದ್ದರಾಮೋತ್ಸವ ಎಂಬುದನ್ನು ನಾವು ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯನ್ನು ವೈಭವೀಕರಿಸುವುದಿಲ್ಲ’ ಎಂದರು. ‘ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋ ತ್ಸವ ಹಾಗೂ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಜೊತೆಯಾಗಿ ಬಿಂಬಿ ಸುತ್ತಾ ಕಾರ್ಯಕ್ರಮ ಮಾಡುವುದು ಸೂಕ್ತ ’ ಎಂದೂ ಡಿ.ಕೆ. ಸುರೇಶ್‌ ಹೇಳಿದರು. ಆರಂಭದಲ್ಲಿ ಮಾತನಾಡಿದ ಬಿ.ಎಲ್. ಶಂಕರ್, ‘ಡಿ.ಕೆ. ಶಿವಕುಮಾರ್‌ ಗೈರಾಗಿರುವ ಬಗ್ಗೆ ಅನ್ಯತಾ ಭಾವಿಸ ಬೇಡಿ. ಪ್ರಧಾನ ಭಾಷಣಕಾರರಾಗಿ ಅವರು ಭಾಗವಹಿಸ ಲಿದ್ದಾರೆ’ ಎಂದರು.ಜಿ. ಪರಮೇಶ್ವರ, ಈ ಸಮಾವೇಶದ ಮೂಲಕ ಕಾಂಗ್ರೆಸ್ ಬಗೆಗಿನ ಬದ್ಧತೆ ತೋರಿಸಬೇಕು ಎಂದರು.

ಜಮೀರ್ ಅಹಮ್ಮದ್, ಭೈರತಿ ಸುರೇಶ್ ಜೊತೆ ಸಿದ್ದರಾಮಯ್ಯ ಅವರು ಸಭೆಗೆ ಬರುತ್ತಿದ್ದಂತೆ, ‘ಮುಂದಿನ ಮುಖ್ಯಮಂತ್ರಿ’ ಎಂದು ಕೆಲವರು ಘೋಷಣೆ ಕೂಗಿದರು. ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಸಲೀಂ ಅಹಮ್ಮದ್, ಸತೀಶ ಜಾರಕಿಹೊಳಿ, ಆರ್‌. ಧ್ರುವ ನಾರಾಯಣ್, ಕೆ.ಎನ್. ರಾಜಣ್ಣ, ಅಮರೇಗೌಡ ಬಯ್ಯಾಪುರ, ಕೆ.ಜೆ. ಜಾರ್ಜ್, ವೆಂಕಟರಮಣಪ್ಪ, ಯು.ಟಿ. ಖಾದರ್, ಸತೀಶ ಜಾರಕಿ ಹೊಳಿ, ರಮಾನಾಥ ರೈ, ಅಲ್ಲಂ ವೀರಭದ್ರಪ್ಪ, ಕಿಮ್ಮನೆ ರತ್ನಾಕರ್, ಎಚ್‌. ಆಂಜನೇಯ,ಯತೀಂದ್ರ ಸಿದ್ದರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT