ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಷಡ್ಯಂತ್ರ ಅರಿತು ಮುನ್ನೆಚ್ಚರಿಕೆ ಕ್ರಮ: ಡಿ.ಕೆ. ಶಿವಕುಮಾರ್‌

Last Updated 21 ಏಪ್ರಿಲ್ 2023, 7:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿರುವ ನನ್ನನ್ನು ರಾಜಕೀಯದಿಂದ ದೂರವಿಡಲು ಷಡ್ಯಂತ್ರ ನಡೆಯುತ್ತಿದೆ. ಅದನ್ನು ಅರಿತೇ ಸಂಸದ ಡಿ.ಕೆ. ಸುರೇಶ್‌ ಕನಕಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ ಸೇರಿದಂತೆ ತುಮಕೂರು ಜಿಲ್ಲೆಯ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಸರಿಯಾಗಿಯೇ ನಾಮಪತ್ರ ಸಲ್ಲಿಸಿದ್ದೇನೆ. ಆದರೆ, ಬಿಜೆಪಿ ಐಟಿ ಸೆಲ್‌ ನನ್ನ ನಾಮಪತ್ರವನ್ನು ಪರಿಶೀಲಿಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಷಡ್ಯಂತ್ರವೂ ನಡೆದಿದೆ. ನನ್ನ ನಾಮಪತ್ರ ಸ್ವೀಕೃತವಾಗುವ ವಿಶ್ವಾಸ ಇದೆ. ಆದರೂ ಜಾಗರೂಕತೆಯ ಹೆಜ್ಜೆ ಇಟ್ಟಿದ್ದೇವೆʼ ಎಂದರು.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಕುರಿತು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಮೇಕೆದಾಟು ಹೋರಾಟ, ಸ್ವಾತಂತ್ರ್ಯ ನಡಿಗೆ, ಭಾರತ್‌ ಜೋಡೊ ಯಾತ್ರೆಗಳನ್ನು ತಡೆಯಲು ಬಿಜೆಪಿಯವರಿಗೆ ಆಗಲಿಲ್ಲ. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳು ಅವರನ್ನು ಕಂಗಾಲು ಮಾಡಿವೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನನ್ನ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದೇವೆ. ಪರಿಣಾಮವಾಗಿ ಮಂತ್ರಿಯೇ ರಾಜೀನಾಮೆ ನೀಡಬೇಕಾಯಿತು. ಈತನಿಂದ ಈ ಪರಿಸ್ಥಿತಿ ಬಂದಿದೆ ಎಂಬ ದ್ವೇಷದಿಂದ ನನ್ನನ್ನು ಗುರಿಯಾಗಿಸಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕುತಂತ್ರ ಮಾಡಿದರೂ ನಾನು ನ್ಯಾಯಾಲಯ ಮತ್ತು ಜನರ ತೀರ್ಪನ್ನು ನಂಬಿದ್ದೇನೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿರುವ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರಿಗೂ ದುರುದ್ದೇಶದಿಂದ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ವಿಧಿಸಿ ರಾಹುಲ್‌ ಗಾಂಧಿಯವರ ಸಂಸತ್‌ ಸದಸ್ಯತ್ವವ ಕಿತ್ತುಕೊಳ್ಳಲಾಗಿದೆ. ಅದೇ ರೀತಿ ನನಗೂ ಮಾಡುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಎಲ್ಲರ ಆಸ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ಬಿಟ್ಟು ನನ್ನ ವಿರುದ್ಧ ಮಾತ್ರ ಸಿಬಿಐ ತನಿಖೆಗೆ ಆದೇಶ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಶಿವಕುಮಾರ್‌ ದೂರಿದರು.

“ನಿಮ್ಮ ನಾಮಪತ್ರ ತಿರಸ್ಕೃತವಾಗುವ ಭಯವಿದೆಯೆʼ ಎಂಬ ಪ್ರಶ್ನೆಗೆ, “ನಾಮಪತ್ರ ತಿರಸ್ಕರಿಸುವ ಕುತಂತ್ರ ನಡೆಯುತ್ತಿದೆ. ಅವರು ಏನಾದರೂ ಮಾಡಲಿ, ನನ್ನನ್ನು ಬಂದೆ ಎಂದು ನೀವೆಲ್ಲರೂ ಹೇಳಿದ್ದೀರಿʼ ಎಂದರು.

ಬಿಜೆಪಿಯ ಅಣೆಕಟ್ಟು ಒಡೆದಿದೆ. ಅಲ್ಲಿ ನೀರು ನಿಲ್ಲಲು ಸಾಧ್ಯವಿಲ್ಲ. ಅಲ್ಲಿದ್ದ ನೀರು ಈಗ ಕಾಂಗ್ರೆಸ್‌ ಎಂಬ ಸಮುದ್ರಕ್ಕೆ ಹರಿದು ಬರುತ್ತಿದೆ ಎಂದು ಹೇಳಿದರು.

ಗಂಗಹನುಮಯ್ಯ ಅವರೊಂದಿಗೆ ಕಮಲಾ ಗಂಗಹನುಮಯ್ಯ, ಬಿಜೆಪಿ ತುಮಕೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ, ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ, ಮುಖಂಡರಾದ ರಾಮಕೃಷ್ಣ, ತಿಮ್ಮಯ್ಯ,ಶಿವಕುಮಾರ್‌, ಸಿದ್ದಪ್ಪ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ರಪಮೇಶ್ವರ್‌, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಇದ್ದರು.

ಬೆಂಗಳೂರಿನ ಮಾಜಿ ಮೇಯರ್‌ ಶಾಂತಕುಮಾರ್‌, ಬಿ.ಆರ್‌. ನಂಜುಂಡಪ್ಪ ಕಾಂಗ್ರೆಸ್‌ ಸೇರುತ್ತಿದ್ದಾರೆ. ನಾರಾಯಣಸ್ವಾಮಿ ಸೇರಿದಂತೆ ಬಿಬಿಎಂಪಿಯ ಒಂಬತ್ತು ಮಂದಿ ಮಾಜಿ ಸದಸ್ಯರು ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಶಿವಕುಮಾರ್‌ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT