ಮಂಗಳವಾರ, ಅಕ್ಟೋಬರ್ 27, 2020
23 °C
ಮನೆ, ಕಚೇರಿ ಮೇಲಿನ ಸಿಬಿಐ ದಾಳಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಸಿಬಿಐ ದಾಳಿ: ಸಿಕ್ಕಿದ್ದು ಒಟ್ಟು ₹ 5.27 ಲಕ್ಷ ಮಾತ್ರ ಎಂದ ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಿಬಿಐ ದಾಳಿ ವೇಳೆ ನಮ್ಮ ಮನೆಯಲ್ಲಿ ₹1.77 ಲಕ್ಷ, ನನ್ನ ಕಚೇರಿಯಲ್ಲಿ ₹3.50 ಲಕ್ಷ, ಡಿ.ಕೆ. ಸುರೇಶ್ ಅವರ ದೆಹಲಿ ನಿವಾಸದಲ್ಲಿ ₹1.50 ಲಕ್ಷ, ಸ್ನೇಹಿತ ಸಚಿನ್ ನಾರಾಯಣ್ ಮನೆಯಲ್ಲಿ ₹ 50 ಲಕ್ಷ ಸಿಕ್ಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಊರಿನಲ್ಲಿರುವ ನನ್ನ ತಾಯಿ ಬಳಿ ಕೇಳಿದಾಗ ಸಿಬಿಐನವರು ಏನೂ ತೆಗೆದುಕೊಂಡು ಹೋಗಿಲ್ಲ ಅಂದರು. ಮುಂಬೈಯಲ್ಲಿ ಮಗಳ ಹೆಸರಿನಲ್ಲಿರುವ ಮನೆಗೆ ನಾನು ಹೋಗಿ ಆರು ವರ್ಷ ಆಯಿತು. ಸಿಬಿಐನವರು ಕನಕಪುರದಲ್ಲಿರುವ ಮನೆಗೆ ಹೋಗಿಲ್ಲ. ದೆಹಲಿಯಲ್ಲಿರುವ ನನ್ನ ಎರಡು ಮನೆಗಳಲ್ಲಿ ಏನೂ
ಇರಲಿಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ’ ಎಂದೂ ವಿವರಿಸಿದರು.

‘ಸಚಿನ್ ಇನ್ನೂ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಧವನಂ ಬಿಲ್ಡರ್ಸ್ ಬಳಿಯಿಂದ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ನನ್ನ ಕೋ ಬ್ರದರ್‌ ಶಶಿಕುಮಾರ್‌ ಮನೆಯಿಂದಲೂ ಏನೂ ಸಿಕ್ಕಿಲ್ಲ. ಉಳಿದ ಹಣ ಎಲ್ಲಿಂದ ತರಲು ಸಾಧ್ಯ. ರಾಜಕಾರಣದಲ್ಲಿ ನಾವು ಯಾವುದನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ’ ಎಂದರು.

ಜೋಶಿಗೆ ಪ್ರತ್ಯುತ್ತರ: ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೊಡ್ಡವರು. ತಮ್ಮ ಮನೆಯನ್ನು ಮೊದಲು ಶುದ್ಧ ಮಾಡಿಕೊಳ್ಳಲಿ. ಅವರು ನಮ್ಮ ಆಸ್ತಿ ಮೊದಲು ಎಷ್ಟಿತ್ತು, ಈಗ ಎಷ್ಟಿದೆ ಎಂದು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರ ಬಹಿರಂಗಪಡಿಸಲಿ’ ಎಂದರು.

‘ಈ ದಾಳಿ ರಾಜಕೀಯ ಪ್ರೇರಿತ ಎಂಬುದು ಎಫ್‌ಐಆರ್ ಪ್ರತಿಯಿಂದ ಗೊತ್ತಾಗುತ್ತದೆ. ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ,
ನಾನು ಪಕ್ಷದ ಅಧ್ಯಕ್ಷ ಆಗಿದ್ದು ಯಾವಾಗ, ಎಫ್‌ಐಆರ್ ದಾಖಲಿಸಿದ್ದು ಯಾವಾಗ ಎಂಬುದನ್ನು ನೋಡಿದರೆ ಸ್ಪಷ್ಟವಾಗುತ್ತದೆ’ ಎಂದೂ ಹೇಳಿದರು.

ಟ್ವೀಟ್‌ ಮಾಡಿರುವ ಡಿ.ಕೆ. ಸುರೇಶ್‌, ‘ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ
₹ 57 ಲಕ್ಷ  ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ ₹50.22 ಲಕ್ಷ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎನ್ನುವುದನ್ನು ಸಿಬಿಐ ಅಧಿಕಾರಿಗಳೇ ತಿಳಿಸಬೇಕು’ ಎಂದಿದ್ದಾರೆ.

‘ಆಪ್ತ ಸಹಾಯಕರಿಗೆ ಹೊಡೆದರು’

‘ಸಿಬಿಐ ಅಧಿಕಾರಿಗಳು ನನ್ನ ಆಪ್ತ ಸಹಾಯಕರಿಗೆ ಹೊಡೆದಿದ್ದಾರೆ ಎಂದು ನನಗೂ ಮಾಹಿತಿ ಇದೆ. ಈ ಬಗ್ಗೆ ವಿಚಾರಿಸಿದ್ದೇನೆ. ಎಲ್ಲರ ಎದುರಿಗೆ ಬೇಡ ಎಂದು ಸುಮ್ಮನಿದ್ದೇನೆ. ನಾನೇ ಅವರನ್ನು ಸಮಾಧಾನ ಮಾಡಿದ್ದೇನೆ. ಜಿ. ಪರಮೇಶ್ವರ ಅವರ ಆಪ್ತ ಸಹಾಯಕನಿಗೆ ಆದ ಪರಿಸ್ಥಿತಿ ಬರಬಾರದಲ್ಲವೇ’ ಎಂದು ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು